ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಪರಿಸರ ಹಾಳು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ: ಪೋಷಕರ ಆಗ್ರಹ

ನಾಮಫಲಕದ ಪಕ್ಕದಲ್ಲಿಯೇ ಚಪ್ಪಲಿ ರಾಶಿ, ಎಳನೀರು ಮಟ್ಟೆ, ರಸ್ತೆ ಮೇಲೆ ಚರಂಡಿ ನೀರು
Last Updated 8 ಫೆಬ್ರುವರಿ 2021, 4:59 IST
ಅಕ್ಷರ ಗಾತ್ರ

ಹಳೇಬೀಡು: ಶಿಸ್ತು ಹಾಗೂ ಉತ್ತಮ ಪಠ್ಯ ಚಟುವಟಿಕೆ ಹೆಸರಾಗಿರುವ ಕರ್ನಾಟಕ ಪಬ್ಲಿಕ್ ಶಾಲೆ (ಸರ್ಕಾರಿ ಪದವಿ ಪೂರ್ವ ಕಾಲೇಜು) ಮುಂಭಾಗ ರಸ್ತೆ ತುಂಬ ತ್ಯಾಜ್ಯ ಬಿಸಾಡಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯ ಎರಡೂ ಬದಿಗಳಲ್ಲಿ ಎಳನೀರು ಮಟ್ಟೆಯನ್ನು ಸುರಿಯಲಾಗಿದೆ. ಪ್ರವೇಶ ದ್ವಾರದ ನಾಮಫಲಕದ ಕಂಬದ ಪಕ್ಕ ಹಳೇಯ ಚಪ್ಪಲಿ ರಾಶಿ ಬಿದ್ದಿದೆ. ಚಪ್ಪಲಿ ರಾಶಿ ನೋಡಿಕೊಂಡು, ತಾಜ್ಯ ತುಳಿದುಕೊಂಡೇ ಮಕ್ಕಳು ಶಾಲೆ ಪ್ರವೇಶಿಸುವಂತಾಗಿದೆ.

ಚರಂಡಿಯಲ್ಲಿ ಆಟೊಮೊಬೈಲ್ ತ್ಯಾಜ್ಯ ತುಂಬಿಕೊಂಡು, ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಜೋರು ಮಳೆ ಬಂದರೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ತೆಂಗಿನ ಮಟ್ಟೆಯಲ್ಲಿಯೂ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗುತ್ತಿದೆ. ಶಾಲೆ ಸಮೀಪದ ಬಸ್ತಿಹಳ್ಳಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಹಲವು ಮಂದಿ ಚಿಕೂನ್‌ ಗುನ್ಯಾ ರೋಗಕ್ಕೆ ತುತ್ತಾಗಿರುವ ಉದಾಹರಣೆ ಇದೆ.

ಕೇದಾರೇಶ್ವರ ಹಾಗೂ ಜೈನ ದೇಗುಲಕ್ಕೆ ಪ್ರವೇಶ ಕಲ್ಪಿಸುವ ಈ ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರು ಅಸಹ್ಯ ಪಡುವಂತಾಗಿದೆ. ಅಲ್ಲದೇ ಶಾಲೆಯ ಮುಂಭಾಗದ ರಸ್ತೆ ಬದಿಯಲ್ಲಿ ಗೂಡಂಗಡಿಗಳು ತಲೆ ಎತ್ತುತ್ತಿರುವುದರಿಂದ ಕಸದ ರಾಶಿಯೂ ಹೆಚ್ಚಾಗುತ್ತಿದೆ. ಹಳೆಯ ಬಾಟಲಿ, ಪ್ಲಾಸ್ಟಿಕ್, ಗುಜರಿ ಸಾಮಗ್ರಿ ಸಂಗ್ರಹ ಮಾಡಲಾಗುತ್ತಿದೆ. ಶಾಲಾ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇಲ್ಲದಂತಾಗಿದೆ.

ಶಾಲೆ, ಕಾಲೇಜು ಸೇರಿ 570 ವಿದ್ಯಾರ್ಥಿಗಳಿದ್ದಾರೆ. ಪಬ್ಲಿಕ್ ಶಾಲೆಯ ಅಭಿವೃದ್ದಿಗೆ ಶಾಲೆ ಆಡಳಿತ ವ್ಯವಸ್ಥೆ ಮಾತ್ರವಲ್ಲದೆ, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳು ಕೈಜೋಡಿಸಬೇಕು. ಶಾಲೆಯ ಸುತ್ತಮುತ್ತ ಸ್ವಚ್ಛ ಪರಿಸರ ನಿರ್ಮಾಣಮಾಡಬೇಕು ಎಂಬುದು ವಿದ್ಯಾರ್ಥಿಗಳು ಹಾಗೂ ಪೋಷಕರ ಆಗ್ರಹವಾಗಿದೆ.

ಪಬ್ಲಿಕ್‌ ಶಾಲೆ ಆವರಣದಲ್ಲಿ ಸಂಜೆಯಾಗುತ್ತಲೇ ಪುಂಡ ಪೋಕರಿಗಳ ತಾಣವಾಗಿ ಬದಲಾಗುತ್ತದೆ. ಜ್ಞಾನ ದೇಗುಲದಲ್ಲಿ ಕತ್ತಲಾಗುತ್ತಿದ್ದಂತೆ ಮದ್ಯವ್ಯಸನಿಗಳು ಇಲ್ಲಿನ ಪರಿಸರ ಹಾಳು ಮಾಡುತ್ತಾತೆ. ಜಗಲಿ ಮೇಲೆ ಮದ್ಯದ ಬಾಟಲಿ, ತಂಪು ಪಾನೀಯ ಬಾಟಲಿಗಳನ್ನು ಬಿಸಾಡಲಾಗುತ್ತಿದೆ.

‘ರಾತ್ರಿ ವೇಳೆ ಕಾಲೇಜಿಗೆ ಕಾವಲುಗಾರ ನೇಮಕ ಮಾಡಬೇಕು ಮತ್ತು ಶಾಲಾ ಆವರಣದಲ್ಲಿ ಕಾಂಪೌಂಡ್‌ ನಿರ್ಮಿಸಿದರೆ ಅನುಕೂಲವಾಗುತ್ತದೆ. ಶಾಲೆ ಪರಿಸರ ಹಾಳು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಪೋಷಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT