ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿನಯ ತಾರೆ’ಗೆ ಭಾರತದ ಗೌರವ

Last Updated 13 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಪೆಶಾವರದ ಪಂಜಾಬ್‌ನಲ್ಲಿ ಜವಳಿ ವ್ಯಾಪಾರಿಗಳ ಕುಟುಂಬದಲ್ಲಿ 1946ರಲ್ಲಿ ಜನಿಸಿದ ವಿನೋದ್ ಖನ್ನಾ ಭಾರತೀಯ ಚಿತ್ರರಂಗದ ಸುಂದರ ನಾಯಕ ನಟರಲ್ಲೊಬ್ಬರು.

‘ಅಭಿನಯ ತಾರೆ’ ಎಂದು ಖ್ಯಾತಿ ಗಳಿಸಿದ ಖನ್ನಾ 1968ರಲ್ಲಿ ‘ಮನ್ ಕಾ ಮೀತ್’ ಚಿತ್ರದಿಂದ ಅಭಿನಯ ಜೀವನ ಆರಂಭಿಸಿದರು. 1971ರಲ್ಲಿ ಗುಲ್ಜಾರ್ ಅವರ ‘ಮೇರೆ ಅಪ್ನೆ’ ಚಿತ್ರದಲ್ಲಿ ಭ್ರಮೆಯಿಂದ ಬಳಲುವ ಯುವಕನಾಗಿ ನೀಡಿದ ಅಭಿನಯ ಜನರ ಗಮನ ಸೆಳೆಯಿತು. ಅದೇ ವರ್ಷ ತೆರೆಕಂಡ ‘ಹಮ್ ತುಮ್ ಔರ್ ವೋ’ ಚಿತ್ರದಿಂದ ನಾಯಕನಟರಾಗಿ ಗುರುತಿಸಿಕೊಂಡರು.

‘‍ಪೂರಬ್‌ ಔರ್ ಪಶ್ಚಿಮ್’, ‘ಸಚ್ಚಾ ಝೂಟಾ’, ‘ಮೇರಾ ಗಾಂವ್ ಮೇರಾ ದೇಶ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನ ಸೆಳೆಯುವ ಅಭಿನಯ ನೀಡಿದರು.

ಖನ್ನಾ, ಅಮಿತಾಬ್‌ ಬಚ್ಚನ್ ಜತೆಯಾಗಿ ನಟಿಸಿದ್ದ ‘ಅಮರ್ ಅಕ್ಬರ್ ಅಂತೋಣಿ’, ಚಿತ್ರದಲ್ಲಿ ಅಮರ್ ಖನ್ನಾ ಪಾತ್ರದಲ್ಲಿ  ವಿನೋದ್ ಖನ್ನಾ ಮಿಂಚಿದ್ದರು. ಇವರಿಬ್ಬರೂ ‘ಪರ್ವರಿಶ್’, ‘ರೇಷ್ಮಾ ಔರ್ ಶೇರಾ’, ‘ಮುಕದ್ದರ್ ಕಾ ಸಿಕಂದರ್’, ‘ಝಮೀರ್’, ‘ಹೇರಾ ಫೇರಿ’, ‘ಖೂನ್ ‍ಪಸೀನಾ’ದಂತಹ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದರು.

ಅಧ್ಯಾತ್ಮ ಗುರು ಓಶೊ ರಜನೀಶ್ ಅವರ ಅನುಯಾಯಿ ಆಗಲು, ಅಭಿನಯ ಕ್ಷೇತ್ರದ ಪ್ರಸಿದ್ಧಿ ತೊರೆದು 1982ರಲ್ಲಿ ಅಮೆರಿಕಕ್ಕೆ ಹೋಗಿದ್ದರು. ಆದರೆ ಐದು ವರ್ಷಗಳ ಬಳಿಕ ಅಭಿನಯಕ್ಕೆ ಹಿಂದಿರುಗಿದ ಅವರು ಬಹಳ ಬೇಗನೆ ತಮ್ಮ ಸ್ಥಾನ ಮರಳಿ ಪಡೆದರು. ನಂತರ ‘ಇನ್ಸಾಫ್’, ‘ದಯಾವಾನ್’ನಂತಹ ಹಿಟ್ ಚಿತ್ರಗಳನ್ನು ನೀಡಿದರು.

ಕೊನೆಯ ದಿನಗಳವರೆಗೂ ಖನ್ನಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್’ ಸರಣಿ ಚಿತ್ರಗಳು ಹಾಗೂ ಶಾರುಕ್‌ ಖಾನ್‌ರ 2015ರಲ್ಲಿ ಬಿಡುಗಡೆಯಾದ ‘ದಿಲ್‌ವಾಲೆ’, ಖನ್ನಾ ಅವರ ಕೊನೆಯ ದಿನದ ಚಿತ್ರಗಳು.

ಚಿತ್ರರಂಗ ಮಾತ್ರವಲ್ಲದೆ ರಾಜಕೀಯದಲ್ಲಿಯೂ ಖನ್ನಾ ತಮ್ಮನ್ನು ತೊಡಗಿಸಿಕೊಂಡಿದ್ದರು.1997ರಲ್ಲಿ ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2009ರಲ್ಲಿ ಇಲ್ಲಿ ಸೋಲನುಭವಿಸಿದ್ದ ಅವರು ಪುನಃ 2014ರಲ್ಲಿ ಇದೇ ಕ್ಷೇತ್ರದಲ್ಲಿ ಗೆಲುವು ಪಡೆದರು.

2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ನಂತರ ವಿದೇಶಾಂಗ ವ್ಯವಹಾರಗಳ ಖಾತೆಯನ್ನೂ ನಿರ್ವಹಿಸಿದ್ದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖನ್ನಾ 2017ರ ಏಪ್ರಿಲ್ 27ರಂದು 70ನೇ ವಯಸ್ಸಿನಲ್ಲಿ ನಿಧನರಾದರು.

ಮೇ 3ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿ ನೀಡಲಿದ್ದಾರೆ.

ಶ್ರೀದೇವಿ ಅತ್ಯುತ್ತಮ ‘ಮಾಮ್’

ಶ್ರೀದೇವಿಗೆ ಪ್ರಶಸ್ತಿ ಘೋಷಣೆಯಾಗಿರುವ ಕುರಿತುಪ್ರತಿಕ್ರಿಯಿಸಿದ ಪತಿ, ನಿರ್ಮಾಪಕ ಬೋನಿ ಕಪೂರ್ ಅವರು ‘ಧನ್ಯವಾದಗಳು. ಇದನ್ನು ನೋಡಲು ಆಕೆ ಇಂದು ಇಲ್ಲಿರಬೇಕಿತ್ತು ಎಂದು ಆಶಿಸುತ್ತೇನೆ’ ಎಂದಿದ್ದಾರೆ.

ತಾಯಿಯ ಸಾಧನೆಯನ್ನು ಗುರುತಿಸಿದ್ದಕ್ಕಾಗಿ ಪುತ್ರಿಯರಾದ ಜಾನ್ವಿ, ಖುಷಿ ಕೇಂದ್ರ ಸರ್ಕಾರ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಗೆ ಧನ್ಯವಾದ ಸಲ್ಲಿಸಿದ್ದಾರೆ.

‘ಇದು ನಮಗೆ ಅತ್ಯಂತ ವಿಶೇಷವಾದ ಸಂದರ್ಭ. ಆಕೆ ಸದಾ ಎಲ್ಲ ಕೆಲಸಗಳಲ್ಲಿಯೂ ಪರಿಪೂರ್ಣತೆ ಸಾಧಿಸುತ್ತಿದ್ದರು. 300 ಚಲನಚಿತ್ರಗಳಲ್ಲಿಯೂ ಇದು ಕಾಣುತ್ತದೆ. ಆಕೆ ಅತ್ಯದ್ಭುತ ಕಲಾವಿದೆ ಮಾತ್ರ ಆಗಿರಲಿಲ್ಲ. ಅತ್ಯದ್ಭುತ ಪತ್ನಿ, ತಾಯಿಯೂ ಆಗಿದ್ದರು. ಇದು ಅವರ ಜೀವನ ಮತ್ತು ಸಾಧನೆಗಳನ್ನು ಆಚರಿಸುವ ಸಮಯ. ಇಂದು ಆಕೆ ನಮ್ಮೊಂದಿಗಿಲ್ಲ. ಆದರೆ ಆಕೆಯ ಪರಂಪರೆ ಸದಾ ಇರುತ್ತದೆ’ ಎಂದು ಬೋನಿ ಕಪೂರ್ ಹೇಳಿದ್ದಾರೆ.

ಅರ್ಹ ನಟಿ: ‘ನಾವು ಹೊಂದಿರುವ ಬಾಂಧವ್ಯಕ್ಕಾಗಿ ಅಲ್ಲ, ಮಾಮ್ ಚಿತ್ರದಲ್ಲಿನ ಅಭಿನಯಕ್ಕಾಗಿ ಆಕೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಅರ್ಹರಾಗಿದ್ದರು’ ಎಂದು ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಶೇಖರ್ ಕಪೂರ್ ಹೇಳಿದ್ದಾರೆ. 1987ರಲ್ಲಿ ಶ್ರೀದೇವಿ ಅವರ ‘ಮಿ.ಇಂಡಿಯಾ’ ಚಿತ್ರದಲ್ಲಿ ಅವರು ಜತೆಯಾಗಿ ಕಾರ್ಯನಿರ್ವಹಿಸಿದ್ದರು.

‘ಮಾಮ್’ ಚಿತ್ರದ ಸಹನಟ, ಪಾಕಿಸ್ತಾನಿ ಕಲಾವಿದ ಅದ್ನಾನ್ ಸಿದ್ದಿಕಿ, ‘ನನಗೆ ಆಶ್ಚರ್ಯವಾಗಿಲ್ಲ. ಅವರು ‍ಪ್ರ‍ಪಂಚದ ಪ್ರತಿಯೊಂದು ಪ್ರಶಸ್ತಿಗೂ ಅರ್ಹರು. ಪ್ರಶಸ್ತಿಯ ವಿದಾಯ ದೊರಕಿದ್ದು ನನಗೆ ಸಂತಸವಾಗಿದೆ. ಆದರೆ ಇಂದು ಅವರು ಇಲ್ಲಿ ಇಲ್ಲದ ವೇಳೆಯಲ್ಲಿ ಪ್ರಶಸ್ತಿ ದೊರಕಿದ್ದು ನನಗೆ ದುಃಖವಾಗಿದೆ’ ಎಂದು ಹೇಳಿದ್ದಾರೆ.

*ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ- ವಿನೋದ್ ಖನ್ನಾ

*ಅತ್ಯುತ್ತಮ ನಟಿ- ಶ್ರೀದೇವಿ (ಮಾಮ್)

*ಅತ್ಯುತ್ತಮ ನಟ- ರಿಧಿ ಸೇನ್ (ನಾಗರಕೀರ್ತನ್)

*ಅತ್ಯುತ್ತಮ ನಿರ್ದೇಶಕ- ಜಯರಾಜ್ (ಮಲಯಾಳಂ ಚಿತ್ರ: ಭಯಾನಕಮ್)

*ಅತ್ಯುತ್ತಮ ಚಿತ್ರ ವಿಮರ್ಶಕ- ಗಿರಿಧರ್ ಝಾ

*ಅತ್ಯುತ್ತಮ ಜನಪ್ರಿಯ ಚಿತ್ರ- ಬಾಹುಬಲಿ: ದಿ ಕನ್‌ಕ್ಲೂಷನ್

*ಅತ್ಯುತ್ತಮ ಹಿನ್ನೆಲೆ ಸಂಗೀತ- ಎ.ಆರ್. ರೆಹಮಾನ್

*ಅತ್ಯುತ್ತಮ ಹಿನ್ನೆಲೆ ಗಾಯಕ- ಯೇಸುದಾಸ್

*ಅತ್ಯುತ್ತಮ ಹಿನ್ನೆಲೆ ಗಾಯಕಿ- ಶಾಶಾ ತ್ರಿಪಾಠಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT