ಗೆಂಡೆಕಟ್ಟೆ ಉದ್ಯಾನಕ್ಕೆ ಹೊಸ ಅತಿಥಿ ಹೆಣ್ಣು ಕಡವೆಗಳು

7
ತಾವರೆಕೊಪ್ಪ ಸಿಂಹಧಾಮದಿಂದ ಬಂದ

ಗೆಂಡೆಕಟ್ಟೆ ಉದ್ಯಾನಕ್ಕೆ ಹೊಸ ಅತಿಥಿ ಹೆಣ್ಣು ಕಡವೆಗಳು

Published:
Updated:
Deccan Herald

ಹಾಸನ: ನಗರದ ಹೊರವಲಯದಲ್ಲಿರುವ ಗೆಂಡೆಕಟ್ಟೆ ಉದ್ಯಾನಕ್ಕೆ ಶಿವಮೊಗ್ಗದ ತಾವರೆಕೊಪ್ಪ ಸಿಂಹಧಾಮದಿಂದ ಎರಡು ಹೆಣ್ಣು ಕಡವೆಗಳನ್ನು ತರಲಾಗಿದೆ.

ನೂರಾರು ಜಿಂಕೆ ಹಾಗೂ ಒಂಟಿ ಕಡವೆ ಜೊತೆಗೆ ಹೊಸ ಅತಿಥಿಗಳ ಸೇರ್ಪಡೆ ಆಗಿರುವುದರಿಂದ ವನ್ಯಧಾಮಕ್ಕೆ ಹೊಸ ಕಳೆ ಬಂದಿದ್ದು, ಭವಿಷ್ಯದಲ್ಲಿ ಮಿನಿ ಮೃಗಾಲಯ ಆಗುವ ಆಶಾಭಾವ ಮೂಡಿಸಿದೆ.

ಒಂಟಿಯಾಗಿದ್ದ ಗಂಡು ಕಡವೆ (ರಾಜು)ಗೆ ಜತೆಗಾರರ ಅವಶ್ಯಕತೆ ಇತ್ತು. ಹಾಗಾಗಿ ನಾಲ್ಕು ತಿಂಗಳ ಹಿಂದೆಯೇ ಅರಣ್ಯ ಇಲಾಖೆ ಕಡವೆ ತರುವ ಸಂಬಂಧ ಪ್ರಕ್ರಿಯೆ ನಡೆಸಿತ್ತು.

ಆದರೆ ಮಳೆಗಾಲದಲ್ಲಿ ಕಡವೆಯನ್ನು ತರುವುದು ಸಮಂಜಸವಲ್ಲ ಎಂಬ ಕಾರಣದಿಂದ ಸ್ವಲ್ಪ ವಿಳಂಬವಾಗಿತ್ತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್‌ ಹಾಗೂ ವೈದ್ಯಾಧಿಕಾರಿ ಮುರಳೀಧರ್‌ ಅವರು ತಾವರೆಕೊಪ್ಪ ಹುಲಿ, ಸಿಂಹಧಾಮದಿಂದ ಮೂರು ವರ್ಷದ ಎರಡು ಹೆಣ್ಣು ಕಡವೆಗಳನ್ನು ಶನಿವಾರ ತಂದಿದ್ದಾರೆ.

ಪ್ರಸ್ತುತ ಉದ್ಯಾನದಲ್ಲಿರುವ ಗಂಡು ಕಡವೆ ನಾಲ್ಕು ವರ್ಷಗಳ ಹಿಂದೆ ಸಕಲೇಶಪುರ ತಾಲ್ಲೂಕಿನ ಅತ್ತಿಹಳ್ಳಿಯ ಪರಮೇಶ್‌ ಎಂಬುವರ ಮನೆಗೆ ಆಕಸ್ಮಿಕವಾಗಿ ಆಗಮಿಸಿತ್ತು. ಅವರು ಸಹ ಕಡವೆಯನ್ನು ಅಕ್ಕರೆಯಿಂದ ಸಾಕಿ, ರಾಜು ಎಂದು ನಾಮಕರಣ ಮಾಡಿದ್ದರು.

ರೈತರೊಬ್ಬರು ಕಡವೆ ಸಾಕುತ್ತಿದ್ದಾರೆಂಬ ದೂರು ನೀಡಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಗೆಂಡೆಕಟ್ಟೆಗೆ ಕರೆತಂದಿದ್ದರು. ಪರಮೇಶ್‌ ಕುಟುಂಬದವರು ಆಗಾಗ ಬಂದು ಹಣ್ಣು,ಹಂಪಲು, ಹಸಿರು ಹುಲ್ಲು ಕೊಟ್ಟು ಹೋಗುತ್ತಿದ್ದರು. ಅಲ್ಲದೇ ಕಡವೆ ಒಂಟಿಯಾಗಿದ್ದರಿಂದ ಹೆಣ್ಣು ಕಡವೆ ತಂದು ಬಿಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದ್ದರು.

ಪ್ರಸ್ತುತ ಕಡವೆಗಳ ಸಂಖ್ಯೆ ಮೂರಕ್ಕೇರಿದೆ. ಹೊಸ ಅತಿಥಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಇಷ್ಟು ದಿನ 50 ಕಡವೆಗಳ ಗುಂಪಿನಲ್ಲಿದ್ದ ಅವುಗಳಿಗೆ ಇಲ್ಲಿನ ವಾತಾವರಣ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಮೊದಲ ಹತ್ತು ದಿನದ ಬಳಿಕ ಗಂಡು ಕಡವೆ ಜತೆ ಬಿಡಲಾಗುತ್ತದೆ.

315 ಎಕರೆ ವಿಸ್ತೀರ್ಣದ ವನ್ಯಧಾಮದ 10 ಎಕರೆ ಪ್ರದೇಶವನ್ನು ಪ್ರಾಣಿಗಳ ಆರೈಕೆಗಾಗಿಯೇ ಮೀಸಲಿಡಲಾಗಿದೆ. ಹಾಲಿ 96 ಜಿಂಕೆಗಳಿವೆ.

‘ಗೆಂಡೆಕಟ್ಟೆ ಉದ್ಯಾನದಲ್ಲಿ ಜಿಂಕೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಮಿನಿ ಮೃಗಾಲಯ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. 70 ರಷ್ಟಿದ್ದ ಜಿಂಕೆ ಸಂಖ್ಯೆ ನೂರು ಗಡಿ ದಾಟಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್ ಬಾಬು ಹೇಳಿದರು.

ಬೇಲೂರು-ಹಳೇಬೀಡು-ಶ್ರವಣಬೆಳಗೊಳದಿಂದ ಪ್ರವಾಸೋದ್ಯಮದಲ್ಲಿ ಹೆಸರುವಾಸಿಯಾಗಿರುವ ಹಾಸನ ಸಮೀಪ ಮಿನಿ ಮೃಗಾಲಯ ನಿರ್ಮಾಣವಾದರೆ ಪ್ರವಾಸಿಗರನ್ನ ಹೆಚ್ಚು ಆಕರ್ಷಣೆ ಮಾಡಬಹುದು. ಜತೆಗೆ ಜಿಂಕೆ, ಕಡವೆ ಜೊತೆಗೆ ಇತರೆ ಪ್ರಾಣಿಗಳಿಗೂ ಜಾಗ ನೀಡಿದರೆ ಒಂದಷ್ಟು ಆದಾಯವೂ ಬರಲಿದೆ ಎಂಬುದು ಅರಣ್ಯ ಇಲಾಖೆ ಉದ್ದೇಶ.

‘ಶಿವಮೊಗ್ಗದಿಂದ ಬಂದ ಕಡವೆಗಳನ್ನು ಬೇರೆಡೆ ಇಟ್ಟು ಆರೈಕೆ ಮಾಡಲಾಗುತ್ತಿದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ನಂತರ ಗಂಡು ಕಡವೆ ಜೊತೆ ಬಿಡಲಾಗುವುದು. ಇದರಿಂದ ಸಂತಾನ ಅಭಿವೃದ್ಧಿಯಾಗಲಿದೆ. ನೋಡುಗರಿಗೆ ಆಕರ್ಷಣೆ ಜೊತೆಗೆ ಮನರಂಜನೆಯೂ ಹೆಚ್ಚಾಗಲಿದೆ’ ಎಂದು ವೈದ್ಯಾಧಿಕಾರಿ ಡಾ.ಮುರಳೀಧರ್ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !