ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಅಸಮಾನತೆ ತೊಡೆಯಿರಿ: ಕಾಂತರಾಜ್

ಜಿಲ್ಲೆಯಾದ್ಯಂತ ಮಹಿಳಾ ದಿನಾಚರಣೆ ಸಂಭ್ರಮ: ಸಾಧಕಿಯರಿಗೆ ಸನ್ಮಾನ, ಸಾಂಸ್ಕೃತಿಕ ಚಟುವಟಿಕೆ
Last Updated 8 ಮಾರ್ಚ್ 2022, 16:11 IST
ಅಕ್ಷರ ಗಾತ್ರ

ಹಾಸನ: ‘ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಉತ್ತಮಸಾಧನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.

ನಗರದ ಪೊಲೀಸ್‌ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು’ ಇಂದಿಗೂ ಪ್ರಸ್ತುತ. ಕಲೆ, ಸಾಹಿತ್ಯ, ಶಿಕ್ಷಣ, ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಸಾಧನೆಗಣನೀಯ ಎಂದರು.

ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಹೀಗೆ ಹಲವಾರು ನಾರಿಯರು ದಿಟ್ಟತನದಿಂದ ಶತ್ರುಗಳ ವಿರುದ್ಧ ಹೋರಾಡಿ ಅಬಲೆಯರಲ್ಲ ಸಬಲೆಯರು ಎಂಬುದನ್ನು ಈ ಹಿಂದೆಯೇ ತೋರಿಸಿಕೊಟ್ಟಿದ್ದಾರೆ ಎಂದು ನುಡಿದರು.

ಪ್ರತಿ ಮಹಿಳೆಗೂ ಸಮಾಜದಲ್ಲಿ ಗುರುತಿಸಿಕೊಳ್ಳಲು ಹಲವಾರು ಒಳ್ಳೆಯ ಅವಕಾಶಗಳಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜ್ಮಾತನಾಡಿ, ‘ಲಿಂಗ ಅಸಮಾನತೆ ತೊಡೆದು ಹಾಕಬೇಕು. ಇಂದಿಗೂ ಕೆಲವು ವರ್ಗಗಳಲ್ಲಿ ಮಹಿಳೆಯರಿಗೆ ತಾವು ಬಯಸಿದ ಬದುಕು ನಡೆಸಲು ಅವಕಾಶವೇ ಇಲ್ಲ. ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡಲು ಮಾತ್ರ ಅರ್ಹಳು ಎಂಬ ಕಲ್ಪನೆ ಇದೆ. ಇಂತಹ ಕಟ್ಟು ಪಾಡು ತೊಲಗಿಸಬೇಕೆಂದರೆ ಮಹಿಳೆಯರು ವಿದ್ಯಾವಂತರಾಗಬೇಕು, ಪ್ರಜ್ಞಾವಂತರಾಗಬೇಕು ಮತ್ತು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹೆಚ್ಚು ಒತ್ತು ನೀಡಬೇಕು’ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಮಾತನಾಡಿದರು.ಇದೇ ವೇಳೆ ಮಹಿಳಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಪರಮೇಶ್ವರ್, ಪೊಲೀಸ್ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್ ಗೌಡ, ಪತ್ನಿ ಯೋಗಿತಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಹಾಜರಿದ್ದರು.

‘ಉತ್ತಮ ಸಮಾಜ ನಿರ್ಮಾಣ; ಸ್ತ್ರೀಯರ ಪಾತ್ರ ಮುಖ್ಯ’

ಅರಕಲಗೂಡು: ‘ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾದುದು’ ಎಂದು 1ನೇ ಹೆಚ್ಚುವರಿ ನ್ಯಾಯಾಧೀಶರಾದ ಪ್ರೀತಿ ಮಳವಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ತಾಲ್ಲೂಕಿನ ದೊಡ್ಡಮಗ್ಗೆ ಬಿಜಿಎಸ್ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ‘ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಸಾಧನೆಯನ್ನು ಮೆರೆದಿದ್ದಾಳೆ. ಕುಟುಂಬವನ್ನು ಸಶಕ್ತವಾಗಿ ನಿರ್ವಹಿಸುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಮಹಿಳೆಯರ ಬಗ್ಗೆ ಅನಾದರ ತರವಲ್ಲ. ಮಹಿಳೆಯರು ಆತ್ಮವಿಶ್ವಾಸ ಹಾಗೂ ದೃಢತೆಯಿಂದ ಉನ್ನತ ಸಾಧನೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ’ ಎಂದರು.

ಹಿರಿಯ ಶ್ರೇಣಿ ನ್ಯಾಯಾಧೀಶ ಮುಜಫರ್ ಮಾತನಾಡಿ, ‘ಮಹಿಳೆಯರಿಗೆ ಉನ್ನತವಾದ ಸ್ಥಾನವನ್ನು ದೇಶ ನೀಡಿದೆ. ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಕಾನೂನು ನೆರವು ಸಮಿತಿ ಗ್ರಾಮೀಣ ಜನರಿಗೆ ಕಾನೂನಿನ ಅರಿವು ಮೂಡಿಸಲು ನಿರಂತರ ಪ್ರಯತ್ನ ನಡೆಸುತ್ತಾ ಬಂದಿದೆ’ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎ.ಎಸ್. ಫರ್ಜಾನ್ ಅಂಜುಮ್, ವಕೀಲರ ಸಂಘದ ಅಧ್ಯಕ್ಷ ಗೋವಿಂದ್, ರೋಟರಿ ವಲಯ 9ರ ವಲಯ ಲೆಫ್ಟಿನೆಂಟ್ ಎಸ್.ಎನ್. ಶಿವಕುಮಾರ್ ಮಾತನಾಡಿದರು. ವಕೀಲರಾದ ಎಸ್.ಪವಿತ್ರಾ ಮಹಿಳಾ ಹಕ್ಕುಗಳ ಕುರಿತು ಮಾಹಿತಿ ನೀಡಿದರು.

2ನೇ ಹೆಚ್ಚುವರಿ ನ್ಯಾಯಾಧೀಶರಾದ ಚೇತನಾ, ವಕೀಲರ ಸಂಘದ ಕಾರ್ಯದರ್ಶಿ ದೊರೆಸ್ವಾಮಿ, ವಕಿಲರಾದ ಶಂಕರಯ್ಯ, ಜಿ.ಡಿ.ಮಹೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT