ಹಾಸನ: ಕೃಷಿ ಬೆಳೆಗಳಿಂದ ನಿರಂತರ ನಷ್ಟ ಅನುಭವಿಸುತ್ತಲೇ ಬಂದಿರುವ ಜಿಲ್ಲೆಯ ರೈತರಿಗೆ ತರಕಾರಿ ಬೆಳೆಗಳೂ ಲಾಭ ಕೊಡುತ್ತಿಲ್ಲ. ಜಿಲ್ಲೆಯಲ್ಲಿ 2024 -25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುಮಾರು 10ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬಿತ್ತನೆ ಮಾಡಲಾಗಿದೆ. ಆದರೆ, ಎಷ್ಟು ಲಾಭ ಬರಲಿದೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.
ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕುಗಳಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ಆದರೆ, ಬೇಲೂರು ತಾಲ್ಲೂಕಿನ ಹಳೇಬೀಡು, ಹಾಸನ ತಾಲ್ಲೂಕಿನ ಕೆಲ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗುತ್ತದೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಆಲೂಗಡ್ಡೆ ದಶಕಗಳ ಹಿಂದೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಅಂಗಮಾರಿ ರೋಗ, ಹವಾಮಾನ ವೈಪರೀತ್ಯ ಸೇರಿದಂತೆ ಇತರೆ ಕಾರಣಗಳಿಂದ ಬಿತ್ತನೆ ಕುಂಠಿತಗೊಂಡಿದ್ದು, ಈ ಬಾರಿ ಕೇವಲ 2,698.4 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆಯಾಗಿದೆ.
ಒಂದು ವಾರದಿಂದ ಆಲೂಗಡ್ಡೆ ಕೊಯ್ಲು ನಡೆಯುತ್ತಿದ್ದು, ಸುಮಾರು ಒಂದು ಕ್ವಿಂಟಲ್ ಬಿತ್ತನೆಗೆ ಕೇವಲ 5–6 ಕ್ವಿಂಟಲ್ ಇಳುವರಿ ಬಂದಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದಾರೆ.
ಅಂದಾಜಿನ ಪ್ರಕಾರ ಉತ್ತಮ ಬೆಳೆ ಬಂದಲ್ಲಿ ಸುಮಾರು 12 ಕ್ವಿಂಟಲ್‌ವರೆಗೂ ಆಲೂಗಡ್ಡೆ ಇಳುವರಿ ಪಡೆಯಬಹುದಾಗಿದೆ. ಆದರೆ ಹವಾಮಾನ ವೈಪರೀತ್ಯ ಇನ್ನಿತರ ಕಾರಣಗಳಿಂದ ಇಳುವರಿ ಕುಂಠಿತವಾಗಲಿದೆ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಲಾಭ ತಂದುಕೊಡುವ ಬೆಳೆ ಎಂದು, ಜಿಲ್ಲೆಯಲ್ಲಿ ಹಲವು ವರ್ಷದಿಂದ ವ್ಯಾಪಕವಾಗಿ ಶುಂಠಿ ಬಿತ್ತನೆ ಮಾಡಿದ್ದು, ಆಲೂಗಡ್ಡೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಬಿತ್ತನೆ ಆಗಿದೆ. ಜಿಲ್ಲೆಯಲ್ಲಿ ಸುಮಾರು 6,467 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬಿತ್ತನೆಯಾಗಿದ್ದು, ವಿಪರೀತ ಮಳೆಯಿಂದಾಗಿ ಕೆಲ ಪ್ರದೇಶದಲ್ಲಿ ಕೊಳೆರೋಗಕ್ಕೆ ತುತ್ತಾಗಿ ಶುಂಠಿ ನಾಶವಾಗಿದೆ.
ಈ ನಡುವೆ ಶುಂಠಿ ಬೆಲೆಯಲ್ಲಿಯೂ ಇಳಿಕೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. 60 ಕೆ.ಜಿ. ಶುಂಠಿಗೆ ಸುಮಾರು ₹6ಸಾವಿರದಿಂದ ₹7 ಸಾವಿರ ಇದ್ದ ಬೆಲೆ ಇದೀಗ ₹1500 ದಿಂದ ₹1300 ಕ್ಕೆ ಕುಸಿದಿದೆ. ಬಹುತೇಕ ಬೆಳೆಗಾರರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೊಯ್ಲು ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ.
ಈ ವರ್ಷ ಎರಡು ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗಿತ್ತು. ಒಂದು ಕ್ವಿಂಟಲ್ ಬಿತ್ತನೆಗೆ 5 ಕ್ವಿಂಟಲ್ ಇಳುವರಿ ಬಂದಿದ್ದು ಹೆಚ್ಚಿನ ಲಾಭ ಸಿಕ್ಕಿಲ್ಲ.ದೇವರಾಜು, ಬಿಟ್ಟಳ್ಳಿ ಗ್ರಾಮದ ರೈತ
ಆದರೆ, ಹಸಿಮೆಣಸಿನಕಾಯಿ ಬೆಳೆದ ರೈತರು ಈ ಬಾರಿ ಹೆಚ್ಚಿನ ಲಾಭ ಪಡೆದಿದ್ದು, ಬೀನ್ಸ್ ಬೆಳೆಗೂ ಉತ್ತಮ ಬೆಲೆ ಸಿಗುವ ಮೂಲಕ ರೈತರು ಲಾಭ ಪಡೆಯುವಂತಾಗಿದೆ.
ಉಳಿದಂತೆ ಟೊಮ್ಯಾಟೊ 200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, ಹಸಿಮೆಣಸಿನಕಾಯಿ 194.5 ಹೆಕ್ಟೇರ್, ಬೀನ್ಸ್ 153 ಹೆಕ್ಟೇರ್ ಸೇರಿದಂತೆ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ತೋಟಗಾರಿಕೆ ಇಲಾಖೆ, ಉಪ ನಿರ್ದೇಶಕಿ ಮಂಗಳ ತಿಳಿಸಿದ್ದಾರೆ.
442 ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಹಾನಿ
ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಈ ವರ್ಷ 442 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ .
ಆಲೂಗಡ್ಡೆ 115 ಹೆಕ್ಟೇರ್ ಶುಂಠಿ 180 ಹೆಕ್ಟೇರ್ ಅಡಿಕೆ 58 ಬಾಳೆ 26 ಹೆಕ್ಟೇರ್ ಬೀನ್ಸ್ 20 ಹೆಕ್ಟೇರ್ ಸೇರಿದಂತೆ ಸುಮಾರು 442.61 ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
‘ಜಿಲ್ಲೆಯಲ್ಲಿ ಈ ಬಾರಿ ಆಲೂಗಡ್ಡೆಗೆ ಅಂಗಮಾರಿ ರೋಗ ಹೆಚ್ಚು ಬಾಧಿಸಿಲ್ಲ. ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತವಾಗಿದೆ. ಹೆಚ್ಚು ಮಳೆ ಬಿದ್ದ ಪ್ರದೇಶದಲ್ಲಿ ಶುಂಠಿ ಬೆಳೆ ಹಾನಿಯಾಗಿದ್ದು ಕೊಳೆ ರೋಗಕ್ಕೆ ತುತ್ತಾಗಿದೆ. ಇಂತಹ ಪ್ರದೇಶಗಳಿಗೆ ಸ್ಥಳೀಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಔಷಧೋಪಚಾರ ಹಾಗೂ ಇನ್ನಿತರ ಪರಿಹಾರ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಮಂಗಳ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.