ಮಹಾರಾಜರ ನೆನಪಲ್ಲಿ ‘ಉತ್ತಮ ಆಡಳಿತ ದಿನ’ ಆಚರಿಸಿ: ಸರ್ಕಾರಕ್ಕೆ ಯದುವೀರರ ಕೋರಿಕೆ

7

ಮಹಾರಾಜರ ನೆನಪಲ್ಲಿ ‘ಉತ್ತಮ ಆಡಳಿತ ದಿನ’ ಆಚರಿಸಿ: ಸರ್ಕಾರಕ್ಕೆ ಯದುವೀರರ ಕೋರಿಕೆ

Published:
Updated:
Deccan Herald

ಹಾಸನ: ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ ಮೈಸೂರು ಮಹಾರಾಜರ ನೆನಪಿನಲ್ಲಿ ‘ಉತ್ತಮ ಆಡಳಿತ ದಿನ’ (ಗುಡ್ ಗೌರ್ನೆನ್ಸ್ ಡೇ) ಅನ್ನು ಸರ್ಕಾರದ ವತಿಯಿಂದ ಆಚರಿಸುವಂತಾಗಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನವನ್ನು ಶಿಕ್ಷಕರ ದಿನ ಎಂದು ಆಚರಿಸುವ ಮಾದರಿಯಲ್ಲಿಯೇ ಮೈಸೂರು ಮಹಾರಾಜರ ನೆನಪಿನಲ್ಲಿ ಉತ್ತಮ ಆಡಳಿತ ದಿನವನ್ನು ಆಚರಿಸಬಹುದು. ಈ ರೀತಿಯಾಗಿ ಆಚರಣೆ ಮಾಡಿದರೇ ಉತ್ತಮ ಅರ್ಥ ಬರಲಿದೆ ಜತೆಗೆ ರಾಜಮನೆತನಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದರು.

ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೈಸೂರು ರಾಜ ಮನೆತನದವರ ಸಹಕಾರದಿಂದ 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೊಂಡಿತು. 19ನೇ ಶತಮಾನದಲ್ಲಿ ಕರ್ನಾಟಕವನ್ನು ಎರಡು ಭಾಗವಾಗಿ ಗುರುತಿಸಲಾಗಿತ್ತು. ಇಲ್ಲಿ ತುಳು, ಕೂರ್ಗ್‌, ಮಹಾರಾಷ್ಟ್ರ ಕರ್ನಾಟಕ ಹೀಗೆ ನಾನಾ ಭಾಷೆ ಮಾತನಾಡುವವರು ಇದ್ದರು. ಆಗ ಮೈಸೂರು ಪ್ರಾಂತ್ಯವನ್ನು ಒಗ್ಗೂಡಿಸುವ ಕೆಲಸವನ್ನು ಮೈಸೂರು ರಾಜಮನೆತನ ಮಾಡಿತ್ತು ಎಂದರು.

ಮಳವಳ್ಳಿ ಮಂಟೇಸ್ವಾಮಿ ಮಠದ ಮಠಾಧೀಶ ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸು ಮಾತನಾಡಿ, ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಿಂದಲೂ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಾ ಬಂದಿದೆ. ಉತ್ತಮ ಶಿಕ್ಷಣ ವ್ಯವಸ್ಥೆ ಇರುವ ರಾಷ್ಟ್ರ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುತ್ತದೆ. ಪ್ರತಿವರ್ಷ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಆದರೆ, ಕನ್ನಡದ ಜೀವ ಇರುವುದು ಈ ಶಾಲೆಗಳಲ್ಲಿ. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳಿಗೆ ಕೊರತೆ ಇಲ್ಲ. ಆದರೆ ಉತ್ತಮ ಶಿಕ್ಷಕರನ್ನು ನೇಮಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಮಾತನಾಡಿ, ಯಾವ ವ್ಯಕ್ತಿ ಕ್ರಿಯಾಶೀಲತೆ, ನಿರಂತರ ಚಟುವಟಿಕೆಯಲ್ಲಿ ತೊಡಗುತ್ತಾನೆಯೋ ಆತ ಖಂಡಿತವಾಗಿ ಸಾಧನೆಯ ಶಿಖರ ಏರುತ್ತಾನೆ. ಕೇವಲ ನಾಟಕೀಯ ಅಭಿನಯದಿಂದ ಸತ್ಪ್ರಜೆಯ ಪಾತ್ರ ಮಾಡುವವರು ಉನ್ನತ ಸ್ಥಾನ ಅಲಂಕರಿಸುತ್ತಾರೆಂಬುದು ಸುಳ್ಳು. ಧನಾತ್ಮಕ ಚಿಂತನೆ ಅಳವಡಿಕೊಂಡರೆ ಪ್ರಗತಿ ಸಾಧ್ಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಕತ್ತರಿಘಟ್ಟ ಮೆಳೆಯಮ್ಮ ಅಧ್ಯಾತ್ಮ ಕೇಂದ್ರದ ಚಂದ್ರಶೇಖರ ಗುರೂಜಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ,  ಗೌರವಾಧ್ಯಕ್ಷ ರವಿ ನಾಕಲಗೂಡು, ಟೈಮ್ಸ್ ಶಿಕ್ಷಣ ಸಂಸ್ಥೆ ಪಾಲುದಾರ ಬಿ.ಕೆ.ಗಂಗಾಧರ್, ಜೆ.ಆರ್‌. ಕೆಂಚೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್, ಕ್ಷತ್ರಿಯ ಮಹಾಸಭಾ ಉಪಾಧ್ಯಕ್ಷ ದಿನೇಶ್ ಅರಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !