ಹಾಸನ: ಕನ್ನಡ ಸಾಹಿತ್ಯ ಲೋಕಕ್ಕೆ ಕಥೆ, ಪ್ರಬಂಧ ಸಾಹಿತ್ಯ, ಪ್ರವಾಸ ಸಾಹಿತ್ಯ, ಕಾದಂಬರಿ ಕೊಡುಗೆ ನೀಡಿದ ಸ್ವಾತಂತ್ರ್ಯ ಹೋರಾಟಗಾರರೂ ಆದ ನಮ್ಮ ತಂದೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹೆಸರಿನಲ್ಲಿ ಹಾಸನದ ಹೇಮಗಂಗೋತ್ರಿಯಲ್ಲಿ ಅಧ್ಯಯನ ಪೀಠವನ್ನು ಸ್ಥಾಪಿಸಬೇಕೆಂಬ ಆಶಯ ಹೊಂದಿರುವುದಾಗಿ ಡಾ. ಗೊರೂರರ ಸುಪುತ್ರಿ ವಾಸಂತಿಮೂರ್ತಿ ತಿಳಿಸಿದರು.
ಕರ್ನಾಟಕ ರಾಜ್ಯ ಬರಹಗಾರರ ಸಂಘದ ಹಾಸನ ಜಿಲ್ಲಾ ಘಟಕ, ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಮತ್ತು ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗಗಳ ಆಶ್ರಯದಲ್ಲಿ ನಡೆದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೊರೂರು ಕರ್ನಾಟಕದಲ್ಲಿರುವ ಒಂದು ಸಣ್ಣ ಗ್ರಾಮ. ಇಂತಹ ಹಳ್ಳಿಗಳು ಸಾವಿರಾರು ಇವೆ. ಆದರೆ ಗೊರೂರಿನ ವಿಶೇಷವೇನೆಂದರೆ ಕರ್ನಾಟಕದಲ್ಲಿ ಅದರ ಹೆಸರನ್ನು ಕೇಳದೆ ಇರುವವರೇ ಇಲ್ಲ. ಗೊರೂರು ಗ್ರಾಮವನ್ನು ಕನ್ನಡಿಗರಿಗೆ ಚಿರಪರಿಚಿತಗೊಳಿಸಿದ ವ್ಯಕ್ತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಎಂದರು.
ನಮ್ಮ ಮನೆ ಸ್ವಾತಂತ್ರ್ಯ ಹೋರಾಟದ ಪುಣ್ಯಸ್ಥಳ. ಅದು ತ್ಯಾಗ ಭೂಮಿ. ಆ ಮನೆ ಕನ್ನಡ ಜನತೆಯ ಆಸ್ತಿ. ಇದನ್ನು ಕಾಪಾಡಿ ಉಳಿಸುವುದು ಕನ್ನಡಿಗರ ಕರ್ತವ್ಯ. ಈ ಮನೆಯನ್ನು ನಾನು ಈಗ ತಾನೇ ನೋಡಿ ಬಂದಿದ್ದೇನೆ. ತುಂಬಾ ದುಸ್ಥಿತಿಯಲ್ಲಿದ್ದು, ಈ ಮನೆಯನ್ನು ಸರ್ಕಾರ ವಶಕ್ಕೆ ಪಡೆದು, ಕನ್ನಡಿಗರಿಗೆ ಉಳಿಸಿಕೊಡಬೇಕು. ಬೆಂಗಳೂರಿನ ಮುಖ್ಯ ರಸ್ತೆ ವೃತ್ತಗಳಿಗೆ ಗೊರೂರರ ಹೆಸರನ್ನು ಇಡಬೇಕು. ಗೊರೂರ ಅವರ ಪ್ರತಿಮೆ ಸ್ಥಾಪಿಸಬೇಕು. ಇದು ಆಗಬೇಕಾಗಿರುವ ಕೆಲಸ. ಇದು ಕನ್ನಡದ ಕೆಲಸ. ಇದನ್ನು ಕಾರ್ಯ ಸಾಧ್ಯ ಮಾಡಿಕೊಡಬೇಕು ಎಂಬುದು ಕರ್ನಾಟಕ ಸರ್ಕಾರಕ್ಕೆ ನನ್ನ ಮನವಿ ಎಂದು ಹೇಳಿದರು.
ಗೊರೂರರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಚಲನಚಿತ್ರ ವಿಚಾರವಾಗಿ ಕಾದಂಬರಿಗಾರ್ತಿ ಪ್ರೊ.ಕಮಲ ನರಸಿಂಹ, ಗೊರೂರರ ಕೃತಿಗಳಲ್ಲಿ ಜನಪದ ಸಿದ್ಧಿ ಸಮೃದ್ಧಿ ವಿಷಯವಾಗಿ ನಿವೃತ್ತ ಪ್ರಾಧ್ಯಾಪಕ ಡಾ. ಹಂಪನಹಳ್ಳಿ ತಿಮ್ಮೇಗೌಡ, ಸ್ವಾತಂತ್ರ್ಯ ಹೋರಾಟದಲ್ಲಿ ಗೊರೂರರ ಪಾತ್ರ ವಿಷಯವಾಗಿ ಸಾಹಿತಿ ಗೊರೂರು ಅನಂತರಾಜು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ.ಕವಿತಾ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ರವಿ ನಾಕಲಗೂಡು, ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಜಿ.ಎಸ್., ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ.ಕೃಷ್ಣೇಗೌಡ, ಬರಹಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುಂದರೇಶ್ ಡಿ.ಉಡುವೇರೆ, ಕನ್ನಡ ವಿಭಾಗದ ಮುಖ್ಯಸ್ಥ ರಾಮೇಗೌಡ ಬಿ.ಎನ್., ಪ್ರಾಧ್ಯಾಪಕ ಎಚ್.ಕೆ.ವೆಂಕಟೇಶ್, ಸಹಾಯಕ ಪ್ರಾಧ್ಯಾಪಕ ರಾಮೇಗೌಡ, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಶಿಲ್ಪಶ್ರೀ ಆರ್. ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.