ಗುರುವಾರ , ಜೂನ್ 24, 2021
27 °C

ಒಬ್ಬಿಬ್ಬರಿಂದ ಸರ್ಕಾರ ಅಲುಗಾಡಿಸಲು ಸಾಧ್ಯವಿಲ್ಲ: ವೀರಪ್ಪಮೊಯ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಸಮ್ಮಿಶ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಐದು ವರ್ಷ ಪೂರೈಸುವಂತೆ ವಾಗ್ದಾನ ಮಾಡಿದ್ದಾರೆ. ಒಬ್ಬ ಅಥವಾ ಇಬ್ಬರು ವ್ಯಕ್ತಿಗಳಿಂದ ಸರ್ಕಾರ ಅಲುಗಾಡಿಸಲು‌ ಸಾಧ್ಯವಿಲ್ಲ. ವಾಮಾಚಾರದಿಂದ ಸರ್ಕಾರ ಉರುಳಿಸಿದರೆ ಅವರು ಉದ್ದಾರ ಆಗುವುದಿಲ್ಲ ಎಂದು ಸಂಸದ ವೀರಪ್ಪಮೊಯ್ಲಿ ಹೇಳಿದರು.

ಶ್ರವಣಬೆಳಗೊಳದಲ್ಲಿ ಶುಕ್ರವಾರ ಮಾತನಾಡಿದ ಅವರು, ಬಿಜೆಪಿಯವರಿಗೆ ಶಾಪ ತಟ್ಟುತ್ತದೆ. ಮೈತ್ರಿ ಸರ್ಕಾರ ಸ್ಥಿರವಾಗಿರುತ್ತದೆ. ಯಡಿಯೂರಪ್ಪ ಆಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದರು. ಯಡಿಯೂರಪ್ಪ ಹಳೆಯ ಚಾಳಿ ಮುಂದುವರಿಸಿದ್ದಾರೆ. ಇದರಿಂದ ಯಡಿಯೂರಪ್ಪಗೆ ಮತ್ತು ಬಿಜೆಪಿಗೆ ಕೆಟ್ಟ ಹೆಸರು ಬರುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕೇವಲ ನಾಲ್ಕೈದು ಸ್ಥಾನ ಬಿಜೆಪಿ ಬಂದರೆ ಹೆಚ್ಚು. ವಾಮಾಚಾರ, ದುರಾಸೆಯಿಂದ ಬಿಜೆಪಿಯವರು ಕೆಲಸ ಮಾಡುತ್ತಿದ್ದಾರೆ. ಡಿಕೆಶಿಯನ್ನು ಬಿಜೆಪಿಗೆ ಸೆಳೆಯುವ ಯತ್ನ ಮಾಡಿದ್ದರು. ಡಿಕೆಶಿ ಬಗ್ಗದ ಕಾರಣ ಐಟಿ, ಸಿಬಿಐಯನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆಪಾದಿಸಿದರು.

ಅತಿವೃಷ್ಠಿಗೆ ಕೇಂದ್ರದಿಂದ ಸ್ವಲ್ಪವೂ ನೆರವು ನೀಡಲಿಲ್ಲ. ಬಿಇಎಲ್ ಮತ್ತು ಬಿಎಚ್‌ಎಲ್‌ಅನ್ನು ಕೇಂದ್ರ ಖಾಸಗೀಕರಣಗೊಳಿಸಲು ಮುಂದಾಗಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ 137 ವರ್ಷ ಇತಿಹಾಸವಿರುವ ಪಕ್ಷ, ಬ್ರಿಟಿಷರಿಗೆ ಕಾಂಗ್ರೆಸ್ ಒಡೆಯಲು ಸಾಧ್ಯವಾಗಲಿಲ್ಲ. ಇನ್ನೂ ಬಿಜೆಪಿಗೆ ಕಾಂಗ್ರೆಸ್ ಒಡೆಯಲು ಆಗುತ್ತಾ ಎಂದು ಟೀಕಿಸಿದರು.

ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದು, ರಾಜ್ಯದ ಸಂಸದರಿಗೆ ಕಿಮ್ಮತ್ತಿಲ್ಲ ಎಂದರು.

ಜಾರಕಿಹೊಳಿ ಕುಟುಂಬ ಕಲಹದಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ನಾಲ್ಕೇ ವರ್ಷದಲ್ಲಿ ಬಿಜೆಪಿ ಹೋಲ್‌ಸೇಲ್ ಹಣದ ವ್ಯಾಪಾರ ಮಾಡುತ್ತಿದೆ, ಕೇಂದ್ರ ಸರ್ಕಾರ ಐಟಿ ಮತ್ತು ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದೆ, ಬಿಜೆಪಿಯವರು ಸಿಬಿಐ ಬಳಸಿಕೊಂಡು ದೇಶದಲ್ಲಿ ಜನರಿಗೆ ಭಯದ ವಾತಣಾವರಣ ಸೃಷ್ಟಿಸುತ್ತಿದ್ದಾರೆ ಎಂದರು. 

ಕೇಂದ್ರ ಸಚಿವ ಅರುಣ್ ಜೇಟ್ಲಿ ಮತ್ತು ದೇಶ ಬಿಟ್ಟು ಪರಾರಿಯಾಗಿರುವ ಮುನ್ನ ವಿಜಯ್ ಮಲ್ಯ ಭೇಟಿಯಾಗಿರುವ ವಿಚಾರವಾಗಿ ಮಾತನಾಡಿದ ಅವರು, ಅರುಣ್ ಜೇಟ್ಲಿ ಮಲ್ಯಗೆ ಸಪೋರ್ಟ್ ಮಾಡಿರುವುದ್ರಲ್ಲಿ ಸಂಶಯವಿಲ್ಲ ಎಂದರು.

ನೆರೆ ಸಂತ್ರಸ್ತರಿಗೆ ದುಬೈನಿಂದ ಹಣ ಕಳುಹಿಸಿದರೆ ಬೇಡ ಎನ್ನುವಂತಹ ಮೂರ್ಖತನದ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅವರು ದೂರಿದರು.

ಶ್ರವಣಬೆಳಗೊಳಕ್ಕೆ ಬಂದದ್ದು‌ ನನಗೆ ಬಹಳ ರೋಮಾಂಚನವಾಗಿದೆ. ಕ್ಷಣಕ್ಷಣಕ್ಕೂ ಹೊಸ ಅನುಭವ ಆಗುತ್ತಿದೆ. ಹಲವಾರು ವರ್ಷಗಳಿಂದ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದೆ, ಸ್ವಾಮೀಜಿ ನನ್ನನ್ನು ಬರಲೇಬೇಕು ಎಂದು ಆಹ್ವಾನಿಸಿದ್ದರು. ಆಗಾಗಿ, ಕಾಲ್ನಡಿಗೆಯಲ್ಲಿಯೇ ಬೆಟ್ಟ ಹತ್ತಿದ್ದೇನೆ‌ ಎಂದು ಮೊಯ್ಲಿ ಹೇಳಿದರು.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು