ಶನಿವಾರ, ಆಗಸ್ಟ್ 13, 2022
27 °C
ಸಂಸದ ಡಿ.ಕೆ.ಸುರೇಶ್‌ ಆರೋಪ

‘ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌ ನಿಯಂತ್ರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ಈ ಸಂದರ್ಭದಲ್ಲಿಯೂ ಹಣ ಮಾಡುವುದೇ ರಾಜ್ಯ ಸರ್ಕಾರಕ್ಕೆ ಮುಖ್ಯವಾಗಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಆರೋಪಿಸಿದರು.

ನಗರದ ತನ್ವಿತ್ರಿಶಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ‘ಆರೋಗ್ಯ ಹಸ್ತ’ ಕಿಟ್‌ ವಿತರಣೆ ಮತ್ತು ಕೊರೊನಾ ವಾರಿಯರ್‌ಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರಂಭದಲ್ಲೇ ಕೋವಿಡ್‌ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ, ಈ ಮಟ್ಟಿನ ಜೀವಹಾನಿ ಆಗುತ್ತಿರಲಿಲ್ಲ. ಕೊರೊನಾ ವೈರಸ್‌ ಹೋಗಲಾಡಿಸಲು ಪಕ್ಷಾತೀತವಾಗಿ ಬೆಂಬಲ ನೀಡಲಾಯಿತು. ರಾಜ್ಯ ಸರ್ಕಾರ ಕೋವಿಡ್‌ ನಿಯಂತ್ರಣ ವಿಚಾರದಲ್ಲಿ ಕೈಚೆಲ್ಲಿದೆ. ಕೊರೊನಾದೊಂದಿಗೆ ಬದುಕಲು ಕಲಿಯಿರಿ ಎನ್ನುತ್ತಿದ್ದಾರೆ. ಕೋವಿಡ್‌ ರೋಗಿಗಳಿಗೆ ಸರಿಯಾದ ಚಿಕಿತ್ಸೆಯೂ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕೋವಿಡ್‌ನಿಂದಾಗಿ ಹಲವಾರು ಮಂದಿ ಉದ್ಯೋಗ ಕಳೆದುಕೊಂಡರು. ಬೆಳೆದ ಬೆಳೆ ಮಾರಾಟ ಮಾಡಲಾಗದೆ ರೈತರೂ ನಷ್ಟ ಅನುಭವಿಸಿದರು. ಸರ್ಕಾರ ಅವರಿಗೂ ನೆರವಾಗಲಿಲ್ಲ ಎಂದು ದೂರಿದರು.

ಮುಖಂಡ ದ್ರುವನಾರಾಯಣ ಮಾತನಾಡಿ, ಜನ ಸಾಮಾನ್ಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರತಿ ಗ್ರಾಮ ಪಂಚಾಯಿತಿಗೆ ಇಬ್ಬರು ಕೊರೊನಾ ವಾರಿಯರ್‌ ನೇಮಕ ಮಾಡಿ, ಒಂದು ಆರೋಗ್ಯ ಹಸ್ತ ಕಿಟ್‌ ವಿತರಣೆ ಮಾಡಲಾಗುತ್ತಿದೆ. ಒಂದು ಕಿಟ್‌ನಲ್ಲಿ ಅಂದಾಜು ₹ 4,500 ಬೆಲೆಯ ಉಪಕರಣಗಳು ಇರಲಿವೆ. ಪ್ರತಿ ಮನೆ ಮನೆಗೂ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿದರು.

ಕಾರ್ಯಕ್ರಮದಲ್ಲಿ ಡಾ.ಮದುಸೂಧನ್‌ ಅವರು ಪಿಪಿಇ ಕಿಟ್‌ ಬಳಕೆ, ಥರ್ಮ‌ಲ್‌ ಸ್ಕ್ರೀನಿಂಗ್‌ ಮಾಡುವ ಕುರಿತು ತರಬೇತಿ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಮುಖಂಡ ಚಂದ್ರಪ್ಪ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್‌ ಮಂಜುನಾಥ್‌, ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮ್‌, ಕೆಪಿಸಿಸಿ ಸದಸ್ಯ ಎಚ್.ಕೆ.ಮಹೇಶ್, ಮುಖಂಡರಾದ ಬಾಗೂರು ಮಂಜೇಗೌಡ, ಗಾಯತ್ರಿ ಶಾಂತೇಗೌಡ, ಸಣ್ಣಸ್ವಾಮಿ, ಎನ್‌ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ರಂಜಿತ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.