ಬುಧವಾರ, ನವೆಂಬರ್ 13, 2019
23 °C
ತಹಶೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ಸಲಹೆ

ಸರ್ಕಾರಿ ಕಚೇರಿ; ಗೌರವ ಭಾವನೆ ಮೂಡಲಿ

Published:
Updated:
Prajavani

ಹೊಳೆನರಸೀಪುರ: ‘ಜನರಲ್ಲಿ ಸರ್ಕಾರಿ ಕಚೇರಿಗಳ ಬಗ್ಗೆ ಗೌರವ ಭಾವನೆ ಮೂಡುವಂತೆ ಮಾಡುವ ಜವಾಬ್ದಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲಿದೆ’ ಎಂದು ತಹಶೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ನುಡಿದರು.

ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ಕಂದಾಯ ಇಲಾಖೆ ನೌಕರರಿಗೆ ಕಾರ್ಯಕ್ಷಮತೆ ವೃದ್ಧಿ ಹಾಗೂ ಜನಸ್ನೇಹಿ ಆಡಳಿತ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ತಾಲ್ಲೂಕು ಕಚೇರಿಗೆ ಬರುವ ವೃದ್ಧರ, ರೈತರ, ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಕೆಲಸ ಮಾಡಿಕೊಟ್ಟಾಗ ಜನರಿಗೆ ನಮ್ಮ ಮೇಲೆ ನಂಬಿಕೆ ಬರುತ್ತದೆ. ಅವರು ಮನ ಪೂರ್ವಕವಾಗಿ ನಮ್ಮನ್ನು ಹರಸುತ್ತಾರೆ. ಹಿರಿಯರ, ರೈತರ ಹಾರೈಕೆ ನಮ್ಮನ್ನು ಕಾಪಾಡುತ್ತದೆ ಎಂದರು.

ನಾವು ನಿತ್ಯ ಯೋಗ, ಪ್ರಾಣಯಾಮ, ಧ್ಯಾನ ಮಾಡುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯವಾಗಿರುವುದರ ಜೊತೆಗೆ ಸಂತೋಷದಿಂದ ಕೆಲಸ ಮಾಡಬಹುದು. ಎಲ್ಲೇ ಆಗಲಿ ಚೆನ್ನಾಗಿ ಕೆಲಸ ಮಾಡುವ ಉದ್ಯೂಗಿಗಳಿಗೆ ಗೌರವ ಇರುತ್ತದೆ. ಜೊತೆಗೆ ಹೆಚ್ಚಿನ ಮನ್ನಣೆ, ಆತ್ಮ ಸಂತೋಷ ಸಿಗುತ್ತದೆ ಎಂದರು.

ನಿವೃತ್ತ ತಹಶೀಲ್ದಾರ್ ಹಿರಣಯ್ಯ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ಇಲಾಖೆಯ ಆಧಾರ ಸ್ತಂಭಗಳು. ಕಂದಾಯ ನಿರೀಕ್ಷಕರು ಮತ್ತು ಶಿರೆಸ್ತೇದಾರರ ಮಾರ್ಗದರ್ಶನದಲ್ಲಿ ದಾಖಲೆಗಳ ಪರಿಶೀಲನೆ ಹಾಗೂ ವರದಿಗಳನ್ನು ಸಿದ್ಧಪಡಿಸಬೇಕು. ಎಲ್ಲರೂ ಒಂದೇ ರೀತಿಯ ಮಾಹಿತಿ ಹಾಗೂ ವರದಿಗಳನ್ನು ನೀಡಿದಾಗ ತೊಂದರೆಗಳಿಲ್ಲದೇ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯ. ನಾಡ ಕಚೇರಿಗಳಲ್ಲಿ ನೇರವಾಗಿ ವಂಶವೃಕ್ಷ ನೀಡುವ ಬಗ್ಗೆ ಸ್ವಷ್ಟ ಮಾಹಿತಿ ಇಲ್ಲ. ಆದ್ದರಿಂದ ಕುಟುಂಬ ಸದಸ್ಯರ ದೃಢೀಕರಣ ಪತ್ರದೊಂದಿಗೆ ತಾಲ್ಲೂಕು ಕಚೇರಿಗೆ ನೀಡಿ, ವಂಶವೃಕ್ಷ ಪಡೆದುಕೊಳ್ಳಲು ಸೂಚಿಸಿ. ಮೇಲಧಿಕಾರಿ ಹೇಳಿದ್ದಾರೆಂದು ಎಂದು ಕಾನೂನು ಬಾಹಿರ ಕೆಲಸ ಮಾಡಿದರೆ ತೊಂದರೆಗೆ ಸಿಲುಕುತ್ತೀರಿ ಎಂದು ಎಚ್ಚರಿಕೆ ನೀಡಿದರು.

ಇಲಾಖೆಯ ಕೆಲಸಗಳಿಗೆ ಸಂಬಂಧಪಟ್ಟಂತೆ ಅನೇಕ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿ ಜನರ ಕೆಲಸ ನಮ್ಮ ಕೆಲಸ ಎನ್ನುವ ಮನೋಭಾವ ಬೆಳೆಸಿಕೊಂಡರೆ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಆಸಕ್ತಿಯಿಂದ ಮಾಡುವ ಕೆಲಸ ಅಚ್ಚುಕಟ್ಟಾಗಿರುತ್ತದೆ ಎಂದರು.

ಕಂದಾಯ ಇಲಾಖೆ ನೌಕರರಿಗೆ ಆಯೋಜಿಸಿದ್ದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ನೀಡಿದರು.

ಗ್ರೇಡ್ 2 ತಹಶೀಲ್ದಾರ್ ಅಂಜನಪ್ಪ, ಉಪ ತಹಶೀಲ್ದಾರ್ ರವಿಕುಮಾರ್, ಶಿರೆಸ್ತೇದಾರ್ ಲೋಕೇಶ್, ಶಿವಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಮತ್ತು ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)