ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ದತ್ತು: ಶಾಸಕರ ಬದ್ಧತೆ

15 ಶಾಲೆಗಳ ಅಭಿವೃದ್ಧಿಗೆ ₹2.23 ಕೋಟಿ ಅಂದಾಜು ಪಟ್ಟಿ ಸಿದ್ಧ
Last Updated 13 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಹಾಸನ: ಶಾಲಾ ದತ್ತು ಕಾರ್ಯಕ್ರಮದಡಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಐವರು ಶಾಸಕರು ಹದಿನೈದು ಶಾಲೆಗಳನ್ನು ದತ್ತು ಸ್ವೀಕರಿಸಿದ್ದಾರೆ.

ಶಾಲೆಗ ದತ್ತು ಸ್ವೀಕಾರದ ಪಟ್ಟಿಗೆ ಅನುಮೋದನೆ ಸಿಕ್ಕಿದೆ. ಯಾವ ಶಾಲೆಗಳಲ್ಲಿ ಏನೇನು ಅಭಿವೃದ್ಧಿಯಾಗಬೇಕು ಎಂಬ ಬಗ್ಗೆ ಅಂದಾಜು ಪಟ್ಟಿ ಸಿದ್ಧವಾಗಿದ್ದು, ಆಯಾಯ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸಿ, ಶಾಲಾಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಹದಿನೈದು ಶಾಲೆಗಳ ಅಭಿವೃದ್ಧಿಗೆ ₹2.23 ಕೋಟಿ ಅಂದಾಜು ಸಿದ್ಧವಾಗಿದೆ.

ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವಂತೆ ರಾಜ್ಯ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರ ಪ್ರೊ. ಎಂ.ಆರ್.ದೊರೆಸ್ವಾಮಿ ಶಾಸಕರಿಗೆ ಸಲಹೆ ನೀಡಿದ್ದರು. ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಶಾಸಕರಿಗೂ ಮೂರು ಶಾಲೆಗಳನ್ನು ದತ್ತು ನೀಡಲಾಗಿದೆ. ಐವರು ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ.

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್‌.ಡಿ.ರೇವಣ್ಣ ಹಾಗೂ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರು ದತ್ತು ಸ್ವೀಕರಿಸುವ ಶಾಲೆಗಳ ಪಟ್ಟಿ ಇನ್ನೂ ನೀಡಿಲ್ಲ.

ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಗಂಡಸಿ ಹೋಬಳಿಯ ಚಿಂದೇನಹಳ್ಳಿ ಗಡಿಯಲ್ಲಿರುವ ಕೆಪಿಎಸ್‌ ಶಾಲೆ, ಚಗಚಗೆರೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬಾಣಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಪಡೆದು, ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಚಿಂದೇನಹಳ್ಳಿ ಶಾಲೆಗೆ ನಾಲ್ಕು ಕೊಠಡಿ ದುರಸ್ತಿ, ಶೌಚಾಲಯ ಕಾಮಗಾರಿಗೆ ₹12 ಲಕ್ಷ , ಚಗಚಗೆರೆ ಗ್ರಾಮದ ಶಾಲೆಗೆ ನಾಲ್ಕು ಕೊಠಡಿಗಳ ಚಾವಣಿ ದುರಸ್ತಿಗಾಗಿ ₹8 ಲಕ್ಷ ಹಾಗೂ ಬಾಣಾವರದ ಶಾಲೆಯಲ್ಲಿ ಆರು ಕೊಠಡಿಗಳ ಚಾವಣಿ ದುರಸ್ತಿ ಮತ್ತು ಕಾಂಪೌಂಡ್‌ ನಿರ್ಮಾಣಕ್ಕೆ ₹39 ಲಕ್ಷ ಅಂದಾಜು ಮಾಡಲಾಗಿದೆ.

ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಸಕಲೇಶಪುರ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಆಲೂರು ಪಟ್ಟಣದ ಸರ್ಕಾರಿ ನೂತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಾಸನ ತಾಲ್ಲೂಕಿನ ಕಟ್ಟಾಯ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದಿದ್ದಾರೆ.

ಸಕಲೇಶಪುರ ಶಾಲೆಯಲ್ಲಿ ನಾಲ್ಕು ಕೊಠಡಿಗಳ ದುರಸ್ತಿ, ಶೌಚಾಲಯ ಮತ್ತಿತ್ತರ ಕಾಮಗಾರಿಗಳಿಗೆ ₹25 ಲಕ್ಷ ಅಂದಾಜು ಮಾಡಲಾಗಿದೆ. ಆಲೂರು ಮತ್ತು ಕಟ್ಟಾಯ ಗ್ರಾಮದ ಶಾಲೆಗಳಿಗೆ ಪಾಠೋಪಕರಣ ಮತ್ತು ಪೀಠೋಪಕರಣಗಳಿಗೆ ತಲಾ ₹10 ಲಕ್ಷ ವೆಚ್ಚದ ಅಂದಾಜು ಮಾಡಲಾಗಿದೆ.

ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ್‌ ಅವರು ಜಾವಗಲ್‌ನ ಹಿರಿಯ ಪ್ರಾಥಮಿಕ ಶಾಲೆ, ಬೇಲೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಹಳೇಬೀಡು ಗ್ರಾಮದ ಕೆಪಿಎಸ್‌ ಶಾಲೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.

ಜಾವಗಲ್‌ ಶಾಲೆಯಲ್ಲಿ ನಾಲ್ಕು ಕೊಠಡಿಗಳ ದುರಸ್ತಿ, ಶೌಚಾಲಯ ಹಾಗೂ ಇತರೆ ಕಾಮಗಾರಿಗಳಿಗೆ ಒಟ್ಟು ₹ 44 ಲಕ್ಷ , ಬೇಲೂರು ಪಟ್ಟಣದ ಪ್ರೌಢಶಾಲೆಯಲ್ಲಿ ಐದು ಕೊಠಡಿಗಳ ದುರಸ್ತಿ, ಶೌಚಾಲಯ ಮತ್ತು ಇತರೆ ಕಾಮಗಾರಿಗಳಿಗೆ ₹5 ಲಕ್ಷ ಹಾಗೂ ಹಳೇಬೀಡು ಕೆಪಿಎಸ್‌ ಶಾಲೆಯ ವಿವಿಧ ದುರಸ್ತಿ ಕಾಮಗಾರಿಗೆ ₹5 ಲಕ್ಷ ಅಂದಾಜು ಮಾಡಲಾಗಿದೆ.

ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರು ಅರಕಲಗೂಡು ಪಟ್ಟಣ ಸಮೀಪದ ಮೋಕಲಿ, ಕಾಳೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಹೊಳೆನರಸೀಪುರ ತಾಲ್ಲೂಕು ಹಳ್ಳಿ ಮೈಸೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ‌(ಪ್ರೌಢಶಾಲೆ ವಿಭಾಗ) ದತ್ತು ಪಡೆದಿದ್ದಾರೆ.

ಮೋಕಲಿ ಶಾಲೆಗೆ ನಾಲ್ಕು ಕೊಠಡಿಗಳ ನಿರ್ಮಾಣ, ಅಗತ್ಯ ಪಾಠೋಪಕರಣ ಮತ್ತು ಪೀಠೋಪಕರಣಗಳಿಗೆ ₹ 30 ಲಕ್ಷ, ಕಾಳೇನಹಳ್ಳಿ ಶಾಲೆಗೆ ಸ್ಮಾರ್ಟ್‌ ಕ್ಲಾಸ್‌ ಸಭಾಂಗಣ, ಸೈಕಲ್ ಸ್ಟ್ಯಾಂಡ್‌, ಇತರೆ ಮೂಲ ಸೌಕರ್ಯಗಳಿಗೆ ₹10 ಲಕ್ಷ ಹಾಗೂ ಹಳ್ಳಿ ಮೈಸೂರು ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಸಭಾಂಗಣ, ಸೈಕಲ್ ಸ್ಟ್ಯಾಂಡ್, ಇತರೆ ಮೂಲ ಸೌಕರ್ಯಗಳಿಗೆ ₹ 10 ಲಕ್ಷ ಅಂದಾಜು ಮಾಡಲಾಗಿದೆ.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರು ನುಗ್ಗೇಹಳ್ಳಿ ಗ್ರಾಮದ ಕೆಪಿಎಸ್‌ ಶಾಲೆ, ಚನ್ನರಾಯಪಟ್ಟಣ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಲಸಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಸ್ವೀಕಾರ ಮಾಡಿದ್ದಾರೆ.

ನುಗ್ಗೇಹಳ್ಳಿ ಶಾಲೆಯಲ್ಲಿ ಪ್ರಯೋಗಾಲಯ, ಗ್ರಂಥಾಲಯದ ವ್ಯವಸ್ಥೆಗೆ ₹5 ಲಕ್ಷ, ಚನ್ನರಾಯಪಟ್ಟಣ ಶಾಲೆಯ ಪಾಠೋಪಕರಣ, ಪೀಠೋಪಕರಣಗಳಿಗೆ ₹ 5 ಲಕ್ಷ ಹಾಗೂ ಗುಲಸಿಂದ ಗ್ರಾಮದ ಶಾಲೆಗೆ ₹5ಲಕ್ಷ ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT