ಶನಿವಾರ, ನವೆಂಬರ್ 28, 2020
26 °C
8 ಜಿಲ್ಲೆಗಳ ಸೋಲಾರ್‌ ಅಳವಡಿಕೆ ಕಾಮಗಾರಿ ಕೊಚಿನ್‌ ಕಂಪನಿಗೆ ಟೆಂಡರ್‌

ಪಂಚಾಯಿತಿಗಳ ಸ್ವಾಯತ್ತತೆ ಕಸಿದುಕೊಂಡ ಸರ್ಕಾರ: ರೇವಣ್ಣ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಶೇಕಡಾ 5ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಸೋಲಾರ್ ಅಳವಡಿಕೆ ಕಾಮಗಾರಿಯನ್ನು ಕೊಚ್ಚಿನ್ ಕಂಪನಿಗೆ ವಹಿಸುವ ಮೂಲಕ ಪಂಚಾಯಿತಿಗಳ ಸ್ವಾಯತ್ತತೆ ಕಸಿದುಕೊಂಡಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.

ರಾಜ್ಯದ ಎಂಟು ಜಿಲ್ಲೆಯ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸೋಲಾರ್
ಅಳವಡಿಸುವ ಕಾಮಗಾರಿಯನ್ನು ಕೊಚ್ಚಿಯ ಎಂಎಸ್‌ ಇಂಟೆನ್‌ ಎಂಬ ಕಂಪನಿಗೆ ₹100 ಕೋಟಿ ಗೆ ವಹಿಸಿದ್ದಾರೆ. 4600 ಕೆವಿ ಸಾಮರ್ಥ್ಯದ ಕೆಲಸವನ್ನು ಕಂಪನಿ ವಹಿಸಿಕೊಂಡಿದೆ. ಪಂಚಾಯಿತಿ ಮಟ್ಟದ ಕಾಮಗಾರಿಗಳನ್ನೂ ರಾಜ್ಯ ಸರ್ಕಾರವೇ ಮಾಡುವುದಾದರೆ ಪಂಚಾಯಿತಿಗಳು ಯಾಕೆ ಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಐದು ವರ್ಷ ಆಳಿತಾಧಿಕಾರಿಗಳೇ ಕೆಲಸ ಮಾಡಲಿ ಬಿಡಿ. ಬೆಂಗಳೂರಿನಿಂದಲೇ ಎಲ್ಲವೂ ಆಗುವುದಾದರೆ ಪಂಚಾಯಿತಿಗಳು ಏಕೆ ಬೇಕು ಎಂದು ಪ್ರಶ್ನಿಸಿದರು.

15ನೇ ಹಣಕಾಸು ಯೋಜನೆಯಡಿ ಶೇಕಡಾ 25 ರಷ್ಟು ವಿದ್ಯುತ್ ಶುಲ್ಕ, ಶೇಕಡಾ 5ರಷ್ಟು ಅಂಗವಿಕಲರಿಗೆ, ಶೇಕಡಾ 25 ಅನುದಾನ ಘನ ತ್ಯಾಜ್ಯ ವಿಲೇವಾರಿ, ಶೇಕಡಾ 15 ಜಲಜೀವನ್‌ ಮಿಷನ್‌ಗೆ ಮೀಸಲಿಟ್ಟಿದ್ದಾರೆ. ಶೇ 10 ಅನುದಾನವನ್ನು ಇತರ ಕಾಮಗಾರಿಗೆ, ಶೇ 5 ಸೋಲಾರ್ ಅಳವಡಿಕೆಗೆ ಮೀಸಲಿಡಲಾಗಿದೆ. ಜೂನ್‌ನಲ್ಲಿಯೇ ಕ್ರಿಯಾ ಯೋಜನೆ ರೂಪಿಸಿ ಕೆಲವೆಡೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ಈಗ ಅದನ್ನೆಲ್ಲ ಪರಿಗಣಿಸದೆ ಖಾಸಗಿ ಕಂಪನಿಗೆ ಕೆಲಸ ನೀಡಬೇಕೆಂದು ಹೇಳುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸನ ನಗರಸಭೆ ಉಪಾಧ್ಯಕ್ಷ ಸ್ಥಾನ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಲೋಪಗಳನ್ನು ಸರಿಪಡಿಸಿ ಮತ್ತೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕೊಡಬೇಕು. ಇಲ್ಲವಾದರೆ ಜೆಡಿಎಸ್ ಸದಸ್ಯರು ಬುಧವಾರ ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಬಿ.ಎ. ಜಗದೀಶ್‌ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಚುನಾವಣಾಧಿಕಾರಿ ಯಾರ ಹಿಡಿತದಲ್ಲಿ ಕೆಲಸ ಮಾಡುತ್ತಿದ್ದಾರೆಂಬುದು ಗೊತ್ತಿದೆ ಎಂದರು.

ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ಅಧಿಕಾರಿಗಳನ್ನು ಬಳಸಿಕೊಂಡು ಜನರ ಮೇಲೆ ವಿಧಿಸುತ್ತಿದೆ. ರಾಜ್ಯ ಸರ್ಕಾರದ ಕೆಲಸವಾಗಬೇಕೆಂದರೆ ಅಧಿಕಾರಿಗಳನ್ನು ಬುಲ್ಡೋಜರ್‌ನಂತೆ ಬಳಸಿಕೊಳ್ಳುತ್ತದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು