ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್‌ ರ್‍ಯಾಲಿ; ಗೌಡರ ಕೋಟೆ ಹಾಸನದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ಸಹಸ್ರಾರು ಸಂಖ್ಯೆಯಲ್ಲಿ ಬಂದ ಕಾರ್ಯಕರ್ತರು
Last Updated 25 ಮಾರ್ಚ್ 2019, 13:17 IST
ಅಕ್ಷರ ಗಾತ್ರ

ಹಾಸನ: ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎ.ಮಂಜು ಅವರು ಸಹಸ್ರಾರು ಕಾರ್ಯಕರ್ತರು, ಅಭಿಮಾನಿಗಳ ಬೆಂಬಲದೊಂದಿಗೆ ಸೋಮವಾರ ನಾಮಪತ್ರ ಸಲ್ಲಿಸಿದರು.

ನಗರದ ಮಹಾವೀರ ವೃತ್ತದಿಂದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಜತೆ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದರು. ಆಯೋಗದ ಪ್ರಕ್ರಿಯೆ ಪೂರ್ಣಗೊಳಿಸಿ, ಮಧ್ಯಾಹ್ನ 12.48ಕ್ಕೆ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಮಂಜು ಪತ್ನಿ ತಾರಾ, ಶಾಸಕ ಪ್ರೀತಂ ಗೌಡ, ಮುಖಂಡರಾದ ತಲ್ಹಾ, ಸಾಂಬಶಿವಪ್ಪ ಸಾಥ್‌ ನೀಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬೆಂಗಳೂರಿನಿಂದ ಬಂದರಾದರೂ ‌ಜಿಲ್ಲಾಧಿಕಾರಿ ಕಚೇರಿ ಒಳಗೆ ಬಾರಲಿಲ್ಲ. ನಾಮಪತ್ರ ಸಲ್ಲಿಕೆ ಬಳಿಕ ಎನ್‌.ಆರ್‌.ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಇದಕ್ಕೂ ಮುನ್ನ ಮಂಜು ಅವರು ಬೆಳಿಗ್ಗೆ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಮಾರುಕಟ್ಟೆ ಬಳಿ ಪೌರಕಾರ್ಮಿಕರಾದ ಚಂದ್ರು, ಅಶ್ವಿನಿ ದಂಪತಿ ಮನೆಗೆ ತೆರಳಿ ಪಾದ ಪೂಜೆ ಮಾಡಿದರು.

ನಗರದೆಲ್ಲೆಡೆ ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದವು. ನರೇಂದ್ರ ಮೋದಿ ಪರವಾಗಿ ಘೋಷಣೆಗಳು ಮೊಳಗುತ್ತಿದ್ದವು. ಯಡಿಯೂರಪ್ಪ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿತು.

ಜೆಡಿಎಸ್‌ ಭದ್ರಕೋಟೆಯಲ್ಲಿ ಬಿಜೆಪಿ ಅಕ್ಷರಶ ಇಂದು ಶಕ್ತಿಪ್ರದರ್ಶಿಸಿತು. ಯಡಿಯೂರಪ್ಪ, ಪ್ರೀತಂ ಗೌಡ, ಮಂಜು ಅವರು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿ, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುವಂತೆ ಮನವಿ ಮಾಡಿದರು. ದಳಪತಿಗಳ ವಿರುದ್ಧ ರಣಕಹಳೆ ಮೊಳಗಿಸಿದರು.

ಬೃಹತ್‌ ಮೆರವಣಿಗೆಯಿಂದಾಗಿ ಬಿ.ಎಂ. ರಸ್ತೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ವಾಹನಗಳು ಸಾಲು ಗಟ್ಟಿ ನಿಲ್ಲುವಂತಾಯಿತು. ಈ ಹಿನ್ನಲೆ ಪೊಲೀಸರು ವಾಹನಗಳನ್ನು ಪರ್ಯಾಯ ಮಾರ್ಗದ ಮೂಲಕ ಸಂಚರಿಸಲು ಅನುವು ಮಾಡಿಕೊಟ್ಟರು. ಆದರೂ ವಾಹನ ಸವಾರರು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT