ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ: ಸೋಲು ಗೆಲುವಿನ ಲೆಕ್ಕಾಚಾರ, ಹಳ್ಳಿಗಳಲ್ಲಿ ಬೆಟ್ಟಿಂಗ್ ಭರಾಟೆ

Last Updated 28 ಡಿಸೆಂಬರ್ 2020, 12:37 IST
ಅಕ್ಷರ ಗಾತ್ರ

ಹಾಸನ: ಹಳ್ಳಿ ಕದನಕ್ಕೆ ತೆರೆ ಬೀಳುತ್ತಿದ್ದಂತೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಮತದಾನ ಮುಗಿದು ಹಲವು ದಿನ ಕಳೆದರೂ ಅದರ ಕಾವು ಇನ್ನೂ ತಗ್ಗಿದಂತೆ ಕಾಣುತ್ತಿಲ್ಲ. ಮದುವೆ, ಜಾತ್ರೆ, ಹೊಲ, ಗದ್ದೆಗಳಲ್ಲಿ, ಅರಳಿಕಟ್ಟೆ, ಅಂಗಡಿ, ಹೋಟೆಲ್‌, ಬಸ್ ತಂಗುದಾಣ, ದೇವಸ್ಥಾನಗಳ ಜಗುಲಿ ಮೇಲೆ ಸೋಲು, ಗೆಲುವಿನದ್ದೇ ಮಾತು.ಗೆಲ್ಲುವವರು ಯಾರು? ಸೋಲುವವರು ಯಾರು? ಯಾರಿಗೆ ಎಷ್ಟು ಮತ ಬರಬಹುದು ? ಎಷ್ಟು ಖರ್ಚು ಮಾಡಿದ್ದಾರೆ ? ಮತದಾನದ ಪಟ್ಟಿ ಮುಂದಿಟ್ಟುಕೊಂಡು ಲೆಕ್ಕಾಚಾರ ಹಾಕುತ್ತಿದ್ದಾರೆ.

ಮೊದಲ ಹಂತದಲ್ಲಿ ಶೇ 87.05 ರಷ್ಟು ಮತದಾನವಾಗಿದ್ದರೆ, ಎರಡನೇ ಹಂತದಲ್ಲಿ ಶೇಕಡಾ 87.44 ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ರುದ್ರಪಟ್ಟಣ ಮತಗಟ್ಟೆಯಲ್ಲಿ ಪೊಲೀಸರ ಮೇಲೆ ಗ್ರಾಮಸ್ಗರು ಹಲ್ಲೆ ನಡೆಸಿದ ಘಟನೆ ಹೊರತು ಪಡಿಸಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಜರುಗಿದೆ. 7,908 ಸ್ಪರ್ಧಿಗಳ ಭವಿಷ್ಯ ಮತಗಟ್ಟೆಯಲ್ಲಿ ಭದ್ರವಾಗಿದ್ದು ಫಲಿತಾಂಶಕ್ಕಾಗಿ 30ರ ವರೆಗೂ ಕಾಯಬೇಕು.

ಕೆಲವು ಕಡೆ ಬೆಟ್ಟಿಂಗ್‌ ಭರಾಟೆ ನಡೆದಿದೆ. ಇಂಥ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆ ಎಂದು ಹಣ, ವಾಹನ ಪಣಕ್ಕಿಡಲು ಮುಂದಾಗಿದ್ದಾರೆ. ನುಗ್ಗೇಹಳ್ಳಿ, ಹಿರೀಸಾವೆ, ಕೊಣನೂರು ಭಾಗದಲ್ಲಿ ಬೆಟ್ಟಿಂಗ್‌ ಜೋರಾಗಿದೆ. ಬೇಲೂರು ತಾಲ್ಲೂಕಿನ ಕೋಳಿ, ಕುರಿ, ವಾಹನ ಪಣಕ್ಕಿಟ್ಟಿದ್ದಾರೆ. ಕೆಲವು ಕಡೆ ₹50 ಸಾವಿರದಿಂದ ₹ 1 ಲಕ್ಷದವರೆಗೂ ಹಣ ಬೆಟ್ಟಿಂಗ್‌ ಕಟ್ಟಲಾಗಿದೆ.

ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು ಅಭ್ಯರ್ಥಿಗಳಾಗಿ ಅಖಾಡಕ್ಕಿಳಿದರು. ಪ್ರಚಾರಕ್ಕೆ ಸಾಮಾಜಿಕ ಜಾಲತಾಣವನ್ನುಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ರಾಜಕೀಯ ಪಕ್ಷಗಳ ನಾಯಕರು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು.

ಹಲವು ಪಂಚಾಯಿತಿಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಹಣ, ಮದ್ಯ, ಕೋಳಿ, ಕುಕ್ಕರ್, ಬೆಳ್ಳಿ ಬಟ್ಟಲು, ಸ್ಟೀಲ್‌ ಪಾತ್ರೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಎದುರಾಳಿ ಅಭ್ಯರ್ಥಿ ಒಂದು ಸಾವಿರ ಕೊಟ್ಟರೆ ಮತ್ತೊಬ್ಬ ಅಭ್ಯರ್ಥಿ ಎರಡು ಸಾವಿರ ರೂಪಾಯಿ ನೀಡಿರುವ ಉದಾಹರಣೆಯೂ ಇದೆ.

ವಾರದಿಂದ ಕೃಷಿ ಚಟುವಟಿಕೆ, ಕೂಲಿ ಕೆಲಸ ಬಿಟ್ಟು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದವರು ಈಗ ಹೊಲ, ಗದ್ದೆಗಳತ್ತ ಮುಖ ಮಾಡುತ್ತಿದ್ದಾರೆ. ನಗರ ಪ್ರದೇಶಗಳಿಂದ ಮತದಾನ ಮಾಡಲು ಬಂದವರೂ ಮರಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT