ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರ ಮುಷ್ಕರ

Last Updated 18 ಡಿಸೆಂಬರ್ 2018, 14:47 IST
ಅಕ್ಷರ ಗಾತ್ರ

ಹಾಸನ : ಕಮಲೇಶ್ ಚಂದ್ರ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಚೆ ಕಚೇರಿ ಎದುರು ಗ್ರಾಮೀಣ ಅಂಚೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

‘ನೌಕರರಿಗೆ ಸೇವಾ ಭದ್ರತೆ ಇಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದೆ. ಕಾಯಂ ನೌಕರರಂತೆ ಗ್ರಾಮೀಣ ಅಂಚೆ ನೌಕರರು ಸಹ ಪೂರ್ಣ ಪ್ರಮಾಣದಲ್ಲೆ ಕೆಲಸ ಮಾಡುತ್ತಿದ್ದರೂ ಸೇವಾ ಭದ್ರತೆ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಕಾಯಂ ನೌಕರರಿಗೆ ನೀಡುವ ಎಲ್ಲಾ ರೀತಿಯ ಸೇವಾ ಭದ್ರತೆಗಳನ್ನು ಗ್ರಾಮೀಣ ನೌಕರರಿಗೂ ನೀಡಬೇಕು. ಕಮಲೇಶ್ ಚಂದ್ರ ವೇತನ ಆಯೋಗದ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸುವ ಮೂಲಕ ನೌಕರರ ನೆರವಿಗೆ ಸರ್ಕಾರ ನಿಲ್ಲಬೇಕು’ ಎಂದು ಒತ್ತಾಯಿಸಿದರು.

‘ನೌಕರರಿಗೆ ನೀಡುತ್ತಿರುವ ಗ್ರಾಚ್ಯುಯಿಟಿ ₹ 1.5 ಲಕ್ಷದಿಂದ ₹ 5 ಲಕ್ಷಕ್ಕೆ ಏರಿಕೆ ಮಾಡಬೇಕು. ಇಎಸ್ ಐ, ಪಿಎಫ್ ಸೌಲಭ್ಯ ಒದಗಿಸಬೇಕು. ವಾರ್ಷಿಕ 30 ದಿನಗಳ ರಜೆ ಒದಗಿಸಬೇಕು. ಜತೆಗೆ 180 ದಿನಗಳ ರಜೆಯನ್ನು ನೌಕರರ ಖಾತೆಗೆ ಜಮಾಗೊಳಿಸಿ, ನಿವೃತ್ತಿ ಹೊಂದಿದಾಗ ಅದನ್ನು 6 ತಿಂಗಳ ಸಂಬಳ ಸಹಿತ ರಜೆಯನ್ನು 7ನೇ ವೇತನ ಆಯೋಗದ ವರದಿಯಲ್ಲಿ ತಿಳಿಸಿದಂತೆ ಜಾರಿಗೊಳಿಸಬೇಕು. ವಿದ್ಯಾಭ್ಯಾಸಕ್ಕಾಗಿ ವಾರ್ಷಿಕ ಇಬ್ಬರು ಮಕ್ಕಳಿಗೆ ₹ 6 ಸಾವಿರ ಭತ್ಯೆ ನೀಡಬೇಕು’ ಎಂದು ಮನವಿ ಮಾಡಿದರು.

‘12 , 24 ಮತ್ತು 36 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ವೇತನದಲ್ಲಿ ವಿಶೇಷ ಭತ್ಯೆಯನ್ನು 2 ವಾರ್ಷಿಕ ಇಂಕ್ರಿಮೆಂಟ್ ನೀಡಬೇಕು. ಶಾಖಾ ಅಂಚೆ ಕಚೇರಿಯಲ್ಲಿ ಒಬ್ಬರು ಕೆಲಸ ಮಾಡುವ ಜಾಗದಲ್ಲಿ ಎರಡು ಹುದ್ದೆಗಳನ್ನು ನೇಮಕ ಮಾಡಬೇಕು. ಕಚೇರಿ ಕೆಲಸವನ್ನು 8 ಗಂಟೆಗೆ ನಿಗದಿಗೊಳಿಸಬೇಕು’ ಎಂದು ಆಗ್ರಹಿಸಿದರು.

ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಳಿಂಗೇಗೌಡ, ವಿಭಾಗೀಯ ಕಾರ್ಯದರ್ಶಿ ಕೆ.ಜೆ.ಶಿವಾಜಿ, ಖಜಾಂಚಿ ಜಯಕುಮಾರ್, ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಹೊನ್ನೇಗೌಡ, ಕಾರ್ಯದರ್ಶಿ ಚಿತ್ರಸೇನ, ನೌಕರರಾದ ಪ್ರದೀಪ್‌, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT