ಗುಡ್ಡ ಕುಸಿತಕ್ಕೆ ಸಂಚಾರ ಬಂದ್‌; ಪ್ರಯಾಣಿಕರ ಪರದಾಟ

7
ಮಂಗಳೂರು-ಬೆಂಗಳೂರು ರೈಲು ಸಂಚಾರ ತಾತ್ಕಾಲಿಕ ಸ್ಥಗಿತ

ಗುಡ್ಡ ಕುಸಿತಕ್ಕೆ ಸಂಚಾರ ಬಂದ್‌; ಪ್ರಯಾಣಿಕರ ಪರದಾಟ

Published:
Updated:
Deccan Herald

ಹಾಸನ: ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದ್ದು, ಮಲೆನಾಡು ಭಾಗದ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ಮಾರ್ಗದಲ್ಲಿ ಪದೇ ಪದೇ ಗುಡ್ಡ ಕುಸಿತವಾಗುತ್ತಿದ್ದು, ವಾಹನ ಸಂಚಾರ ಬಂದ್ ಆಗಿರುವುದರಿಂದ ಮಧ್ಯೆ ಸಿಲುಕಿಕೊಂಡಿರುವ ಸಾವಿರಾರು ಪ್ರಯಾಣಿಕರು ಊಟ, ಆಶ್ರಯ ಇಲ್ಲದೆ ಪರದಾಡುವಂತಾಗಿದೆ.

ಮಲೆನಾಡಿಗೆ ಹೊಂದಿಕೊಂಡಿರುವ ಸಕಲೇಶಪುರ, ಆಲೂರು, ಅರಕಲಗೂಡು ತಾಲ್ಲೂಕುಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹಾಗಾಗಿ ಅರಕಲಗೂಡು, ಸಕಲೇಶಪುರ ತಾಲ್ಲೂಕುಗಳಲ್ಲಿ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿತ್ತು.
ಸಕಲೇಶಪುರ ತಾಲ್ಲೂಕಿನಲ್ಲಿ ರಭಸದ ಮಳೆಗೆ ಅನೇಕ ಕಡೆ ಭೂಕುಸಿತ ಉಂಟಾಗಿ ರಸ್ತೆ ಮಾರ್ಗ ಬಂದ್ ಆಗಿದೆ.

ಹಾಗೆಯೇ ಬೆಂಗಳೂರು– ಮಂಗಳೂರು ರೈಲ್ವೆ ಸಂಚಾರವೂ ತಾತ್ಕಾಲಿಕ ಸ್ಥಗಿತಗೊಂಡಿದೆ. ಸಕಲೇಶಪುರ ತಾಲ್ಲೂಕಿನ ಶಿರವಾಗಿಲು-ಎಡಕುಮೇರಿ ಬಳಿ ರೈಲು ಹಳಿಯ ಮೇಲೆ ಗುಡ್ಡ ಕುಸಿದಿರುವುದರಿಂದ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಹೋಗಬೇಕಿದ್ದ ಪ್ರಯಾಣಿಕರ ರೈಲನ್ನು ಹಾಸನದಲ್ಲೇ ನಿಲುಗಡೆ ಮಾಡಿ, ಪ್ರಯಾಣಿಕರಿಗೆ ಟಿಕೆಟ್ ಹಣ ವಾಪಸ್ ನೀಡಿ ರಸ್ತೆ ಮಾರ್ಗದ ಮೂಲಕ ಕಳಿಸಿಕೊಡಲಾಯಿತು.

ಇದೇ ತಾಲ್ಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಕುಸುಮಾ-ರಾಜು ಎಂಬುವರ ಮನೆ ಕುಸಿದಿದೆ. ಅನೇಕ ಕಡೆ ವಿದ್ಯುತ್ ಕಂಬ ಧರೆಗುರುಳಿವೆ. ಶುಕ್ರವಾರಸಂತೆ ಬಳಿ ಗುಡ್ಡ ಕುಸಿದು ಕೆಲ ಹೊತ್ತು ಕೂಡುರಸ್ತೆ-ಕೊಡ್ಲಿಪೇಟೆ ಮಾರ್ಗ ಬಂದ್ ಆಗಿತ್ತು. ಹಾಗೆಯೇ ಉಚ್ಚಂಗಿ ಬಳಿ ಕಾಫಿ ತೋಟದ ಒಂದು ಭಾಗ ರಸ್ತೆ ಮೇಲೆ ಕುಸಿದಿದ್ದರಿಂದ ಬಿಸಿಲೆಘಾಟ್-ಅರಕಲಗೂಡು ಮಾರ್ಗ ಬಂದ್ ಆಗಿದೆ.

ಮತ್ತೊಂದೆಡೆ ಹೆತ್ತೂರು ಹೋಬಳಿ ಯಡಕೆರೆ ಸೇತುವೆ ಸಂಪೂರ್ಣ ಮುಳುಗಡೆ ಆಗಿರುವುದರಿಂದ ಹಾಸನ-ಕೊಡಗು ಜಿಲ್ಲೆ ನಡುವಿನ ಸಂಪರ್ಕ ಕಡಿತಗೊಂಡಿದೆ. ಗೊದ್ದು ಗ್ರಾಮದ ಹೊಳೆ ತುಂಬಿ ಹತ್ತಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿವೆ.

ಕೆಲ ದಿನಗಳ ಹಿಂದಷ್ಟೇ ಆರಂಭವಾಗಿದ್ದ ಶಿರಾಡಿಘಾಟ್ ಮಾರ್ಗದ ಅನೇಕ ಕಡೆ ಪದೇ ಪದೇ ಗುಡ್ಡ ಕುಸಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಜೆಸಿಬಿಗಳ ಮೂಲಕ ಮಣ್ಣು ತೆರವು ಮಾಡಿ ನಿಧಾನಗತಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದ್ದರೂ, ಮತ್ತೆ ಮತ್ತೆ ಭೂಕುಸಿತ ಆಗುತ್ತಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದರಿಂದ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ಮಂಗಳೂರಿನಿಂದ ಬೆಂಗಳೂರು, ಹಾಗೆಯೇ ಬೆಂಗಳೂರಿನಿಂದ ಮಂಗಳೂರಿಗೆ ಹೋಗಬೇಕಿದ್ದ ಪ್ರಯಾಣಿಕರು ಊಟ-ಆಶ್ರಯ-ಶೌಚಾಲಯ ಇಲ್ಲದೇ ನರಳಾಡುವಂತಾಗಿದೆ. ಎಷ್ಟೋ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತವಾಗಿ, ಅರ್ಧ ದಾರಿಯಿಂದ ವಾಪಸ್ ಆಗಬೇಕಾಯಿತು.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !