ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಲೋಕಸಭಾ ಕ್ಷೇತ್ರ: ಶೇ.77.17 ಮತ ಚಲಾವಣೆ, ಹಳೆ ದಾಖಲೆ ಅಳಿಸಿದ ಮತದಾರರು

ಕ್ಷೇತ್ರದ ಇತಿಹಾಸದಲ್ಲೇ ಅತಿ ಹೆಚ್ಚು ಮತದಾನ
Last Updated 2 ಮೇ 2019, 15:26 IST
ಅಕ್ಷರ ಗಾತ್ರ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಅತಿ ಹೆಚ್ಚು (ಶೇಕಡಾ 77.17) ಮತಗಳು ಚಲಾವಣೆಯಾಗಿವೆ.

1952ರಿಂದ 2014ರವರೆಗಿನ ಲೋಕಸಭಾ ಚುನಾವಣೆಗಳಲ್ಲಿ ಈ ವರೆಗೆ ಹಾಸನ ಕ್ಷೇತ್ರದಲ್ಲಿ 1989ರಲ್ಲಿ ಶೇಕಡಾ 73.50 ಮತ ಚಲಾವಣೆಯಾಗಿತ್ತು. ಈ ಬಾರಿ ಹಳೆಯ ಮತದಾನದ ದಾಖಲೆಗಳನ್ನು ಮತದಾರರು ಅಳಿಸಿ ಹಾಕಿದ್ದಾರೆ.

ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇಕಡಾ 72.72 ಮತದಾನವಾಗಿದೆ. ಹೊಳೆನರಸೀಪುರ 81.22,
ಅರಕಲಗೂಡು 81.48, ಸಕಲೇಶಪುರದಲ್ಲಿ 80.31 ಮತದಾನವಾಗಿದೆ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇಕಡಾ 3.67 ರಷ್ಟು ಹೆಚ್ಚು ಮತದಾನವಾಗಿದೆ.

ಅಭ್ಯರ್ಥಿಗಳ ಪ್ರಚಾರಕ್ಕಿಂತ ಚುನಾವಣಾ ಆಯೋಗ ಮತದಾನದ ಮಹತ್ವದ ಕುರಿತು ನಡೆಸಿದ ಪ್ರಚಾರ ಮತದಾನದ ಪ್ರಮಾಣ ಹೆಚ್ಚಲು ಸಹಕಾರಿಯಾಗಿದೆ.

ಶೇಕಡವಾರು ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ನೂರಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮ ಕೈಗೊಂಡಿತ್ತು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನೆ, ಜಾಗೃತಿ ಜಾಥಾ, ಬೀದಿ ನಾಟಕ, ಬಸ್‌ಗಳಿಗೆ ಫಲಕ, ಕಲಾ ತಂಡಗಳ ಮೆರವಣಿಗೆ, ಕರಪತ್ರ ವಿತರಣೆ ಸೇರಿದಂತೆ ಹತ್ತು-ಹಲವು ಕಾರ್ಯಕ್ರಮ ಮೂಲಕ ಮತದಾರನ ಮನಮುಟ್ಟುವ ಪ್ರಯತ್ನ ಮಾಡಿದರ ಪರಿಣಾಮ ಮತದಾನ ಪ್ರಮಾಣ ಹೆಚ್ಚಳವಾಗಿದೆ.

ಇನ್ನು ಫಲಿತಾಂಶದ ಕುತೂಹಲವಷ್ಟೇ ಬಾಕಿ ಉಳಿದಿದ್ದು, ಮೇ 23ರವರೆಗೆ ಫಲಿತಾಂಶದ ಲೆಕ್ಕಚಾರದಲ್ಲಿಯೇ ಕಾಲ ಕಳೆಯಬೇಕಿದೆ.

ಮತದಾನವಾಗಿರುವ ಕ್ಷೇತ್ರವಾರು ಅಂಕಿ ಅಂಶ ಪ್ರಕಾರ ಬಿಜೆಪಿ ಶಾಸಕರಿರುವ ಎರಡು ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಅದರಲ್ಲೂ ಜೆಡಿಎಸ್‌ ಪ್ರಾಬಲ್ಯ ಇರುವ ಅರಕಲಗೂಡು, ಸಕಲೇಶಪುರ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾನವಾಗಿರುವುದು ಮುಖಂಡರಿಗೆ ಸ್ವಲ್ಪ ಸಮಾಧಾನ ತಂದಿದೆ.

ಕಳೆದ ಬಾರಿ ಎ.ಮಂಜು ಅವರು ಮುನ್ನಡೆ ಸಾಧಿಸಿದ್ದ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಡಿಮೆ ಮತದಾನವಾಗಿದೆ. ಹಾಗಾಗಿ ಬಿಜೆಪಿ ನಾಯಕರಿಗೆ ಆತಂಕ ಕಾಡುವಂತಾಗಿದೆ.

60ರ ಹರೆಯದ ಎ.ಮಂಜು ಲೋಕಸಭಾ ಪ್ರವೇಶಿಸಲು ಎರಡನೇ ಬಾರಿ ಪ್ರಯತ್ನ ನಡೆಸಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಎಚ್.ಡಿ.ದೇವೇಗೌಡರ ಎದುರು ಒಂದು ಲಕ್ಷ ಮತಗಳ ಅಂತರದಿಂದ ಸೋಲು ಅನಭವಿಸಿದ್ದರು. ಆದರೆ, ಈ ಬಾರಿ ಗೌಡರ ಮೊಮ್ಮಗನ ಎದುರು ಬಿಜೆಪಿಯಿಂದ ಸ್ಪರ್ಧಿಸಿ, ಸಂಸತ್‌ ಪ್ರವೇಶಿಸುವ ಪ್ರಯತ್ನ ನಡೆಸಿದ್ದಾರೆ.

ಇನ್ನು 28ರ ಹರೆಯದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ಅವರು ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದಾರೆ. ಈವರೆಗೂ ಯಾವುದೇ ಚುನಾವಣೆ ಎದುರಿಸದ ಅವರು, ನೇರವಾಗಿ ಲೋಕಸಭೆ ಪ್ರವೇಶಿಸಲು ಮತದಾರರ ಆಶೀರ್ವಾದ ಬಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT