ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು: ಶಿಲ್ಪ ತಯಾರಿಕೆಗೆ ಹೈಟೆಕ್ ಸ್ಪರ್ಶ

ಶಿಲ್ಪಿಗಳ ಕೈಯಲ್ಲಿ ಅರಳುತ್ತಿದೆ ನವೀನ ಮಾದರಿಯ ಕಲೆ
Last Updated 21 ಮಾರ್ಚ್ 2023, 6:34 IST
ಅಕ್ಷರ ಗಾತ್ರ

ಹಳೇಬೀಡು: ಭಕ್ತಿ ಪ್ರಧಾನ ವಿಗ್ರಹಗಳ ತಯಾರಿಕೆಯಲ್ಲಿ ಹೆಸರು ಗಳಿಸಿದ್ದ ಹಳೇಬೀಡಿನ ಶಿಲ್ಪಿಗಳ ಕಲೆಗೆ ಹೈಟೆಕ್ ಸ್ಪರ್ಶ ಬಂದಿದೆ. ದೇವರ ವಿಗ್ರಹ ತಯಾರಿಸುತ್ತಿದ್ದ ಶಿಲ್ಪಿಗಳು ಮಾಡರ್ನ್ ಆರ್ಟ್‌ನಲ್ಲಿ ಪರಿಣಿತರಾಗಿದ್ದಾರೆ.

ಮೈಸೂರಿನ ಅಭಿವೃದ್ದಿ ಕರಕುಶಲ ಸೇವಾ ಕೇಂದ್ರದ ಆಶ್ರಯದಲ್ಲಿ ಹಳೇಬೀಡಿನ 30 ಶಿಲ್ಪಿಗಳು ಮಾಡರ್ನ್‌ ಕಲೆಯ ತರಬೇತಿ ಪಡೆದಿದ್ದಾರೆ. ಶಿವಲಿಂಗ. ಗಣೇಶ, ಬುದ್ಧ, ಶಿವ ಮೊದಲಾದ ಮೂರ್ತಿ ತಯಾರಿಸುತ್ತಿದ್ದ ಶಿಲ್ಪಿಗಳು, ಅಭರಣ ವಸ್ತ್ರ ವಿನ್ಯಾಸದ ದೇವತೆಗಳ ವಿಗ್ರಹ ತಯಾರಿಸುವುದರಲ್ಲಿ ಪರಿಣತಿ ಸಾಧಿಸಿದ್ದಾರೆ. ಇತ್ತಿಚೀನ ದಿನಗಳಲ್ಲಿ ಮಹಾಪುರುಷರ ವಿಗ್ರಹಗಳನ್ನು ಸಹ ತಯಾರಿಸಿ ಪ್ರಸಿದ್ದಿ ಪಡೆದಿದ್ದಾರೆ. ಆಧುನಿಕ ಕಾಲಕ್ಕೆ ತಕ್ಕಂತೆ ಇಂದಿನ ಪೀಳಿಗೆಯ ಜನ ಇಷ್ಟ ಪಡುವಂ% ವಿಭಿನ್ನವಾದ ಕಲೆಯನ್ನು ಕಲ್ಲಿನಲ್ಲಿ ಅರಳಿಸುತ್ತಿದ್ದಾರೆ. ವಿಶಿಷ್ಟ ವಿನ್ಯಾಸದ ವಿಭಿನ್ನ ವಿಗ್ರಹ ತಯಾರಿಸುವ ಕಲೆಯನ್ನು ಶಿಲ್ಪಿಗಳು ಕರಗತ ಮಾಡಿಕೊಂಡಿದ್ದಾರೆ.

ಗುಜರಾತಿನ ಡಿಸೈನರ್ ರಾಜೇಶ್ ಪ್ರಜಾಪತಿ ಶಿಲ್ಪಿಗಳಿಗೆ ಮಾಡರ್ನ್‌ ಕಲೆ ಹೇಳಿಕೊಟ್ಟಿದ್ದಾರೆ. ಕಲ್ಲಿನಲ್ಲಿ ಅರಳಿಸುವಂತಹ 30 ಕಲೆ, ಶಿಲ್ಪಿಗಳಿಗೆ ಕರಗತವಾಗಿದೆ.

ಕ್ಯಾಂಡಲ್, ಪೆನ್, ಅಗರಬತ್ತಿ ಸ್ಟ್ಯಾಂಡ್‌ಗಳು ವಿಭಿನ್ನವಾಗಿ ಅರಳುತ್ತಿವೆ. ಹೊಸ ವಿನ್ಯಾಸ ಹಾಗೂ ವಿಶಿಷ್ಟ ವಾಸ್ತು ಶೈಲಿಯಲ್ಲಿ ನಿರ್ಮಿಸಿದ, ಇಂದಿನ ಕಾಲದ ಮನೆಯಲ್ಲಿ ಬಳಕೆ ಮಾಡುವಂತಹ ಹತ್ತಾರು ನಮೂನೆಯ ವಸ್ತುಗಳನ್ನು ಶಿಲ್ಪಿಗಳು ತಯಾರಿಸುತ್ತಿದ್ದಾರೆ. ಜಾಗೃತಿ ಮೂಡಿಸುವ, ಜೀವನೋತ್ಸಾಹ ಬಿಂಬಿಸುವ, ಸ್ನೇಹ, ಪ್ರೀತಿ ಮೊದಲಾದ ಬಾಂಧವ್ಯ ಸೂಚಿಸುವ ಶಿಲ್ಪಗಳನ್ನು ತಯಾರಿಸಲಾಗುತ್ತಿದೆ. ನಗರದಿಂದ ಬರುವ ಪ್ರವಾಸಿಗರು ಮಾತ್ರವಲ್ಲದೆ, ಹಳ್ಳಿಯಲ್ಲಿ ವಿಶಿಷ್ಟ ವಿನ್ಯಾಸದ ಮನೆ ನಿರ್ಮಾಣ ಮಾಡಿಕೊಂಡವರು ವಿಶಿಷ್ಟ ಕಲೆಯ ಶಿಲ್ಪಗಳನ್ನು ಖರೀದಿಸುತ್ತಿದ್ದಾರೆ.

‘ಆನೆಯ ಬೆನ್ನಿನ ಮೇಲೆ ಕ್ಯಾಂಡಲ್ ಸ್ಟ್ಯಾಂಡ್ ಹಾಗೂ ದೊಡ್ಡ ಆನೆ ತನ್ನ ಮರಿಯನ್ನು ಎತ್ತಿ ಆಟವಾಡಿಸುವ ವಿಗ್ರಹ ಜನ ಮನ್ನಣೆಗಳಿಸಿವೆ. ರಾಗಿ ಬೀಸುವ ಕಲ್ಲು, ರುಬ್ಬವ ಕಲ್ಲು, ದೋಸೆ ಹಾಗೂ ಪಡ್ಡಿನ ಕಾವಲಿಗಳು, ಅಡುಗೆ ಮನೆಯಲ್ಲಿ ಬಳಸು ವುದಕ್ಕೆ ಮಾತ್ರವಲ್ಲದೆ, ಆಕರ್ಷಕವಾಗಿ ಜೋಡಿಸುವಂತೆ ಪುಟ್ಟದಾಗಿಯೂ ಮೂಡುತ್ತಿವೆ. ಶಿಲ್ಪಿಗಳ ಕೆಲಸದಲ್ಲಿ ದಿನದಿಂದ ದಿನಕ್ಕೆ ಹೊಸತನ ಕಾಣುತ್ತಿದೆ’ ಎನ್ನುತ್ತಾರೆ ಶಿಕ್ಷಕ ತಿಪ್ಪೇಸ್ವಾಮಿ.

ಕಲಾಕೃತಿಗಳಿಗೆ ಸೂಕ್ತ ಮಾರುಕಟ್ಟೆ
ನವೀನ ಮಾದರಿಯಲ್ಲಿ ತಯಾರಿಸಿದ ಶಿಲ್ಪಗಳ ಮಾರಾಟಕ್ಕೆ ಅಭಿವೃದ್ದಿ ಕರಕುಶಲ ಸೇವಾ ಕೇಂದ್ರದಿಂದ ಸೂಕ್ತವಾದ ಮಾರುಕಟ್ಟೆ ಕಲ್ಪಿಸಲಾಗಿದೆ.

‘ಕಲ್ಲು, ಮರ, ಬಿದುರು ಮೊದಲಾದ ವಸ್ತುವಿನಿಂದ ತಯಾರಿಸಿದ ಕಲಾಕೃತಿ ಮಾರಾಟಕ್ಕೆ ಗಾಂಧಿ ಶಿಲ್ಪ ಬಜಾರ್ ತೆರೆಯಲಾಗಿದೆ. 65 ಕೇಂದ್ರಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕಲಾಕೃತಿಗಳ ಮಾರಾಟಕ್ಕೆ ಬಜಾರ್‌ಗೆ ಬರುವವರಿಗೆ ಖರ್ಚು ವೆಚ್ಚ ಭರಿಸಲಾಗುವುದು. ಬಜಾರ್ ನಡೆಯುವ ದಿನಾಂಕಕ್ಕಿಂತ ಮೊದಲೆ ಬುಕ್ಕಿಂಗ್ ಮಾಡಬೇಕಾಗುತ್ತದೆ. ಆನ್‌ಲೈನ್‌ನಲ್ಲಿಯೂ ಬುಕ್ಕಿಂಗ್ ಮಾಡಬಹುದು. ಕೇಂದ್ರದಿಂದ ತರಬೇತಿ ಪಡೆದು ತಯಾರಿಸಿದ ಕಲಾಕೃತಿಗಳು ಅಂತರರಾಷ್ಟ್ರಿಯ ಮಟ್ಟದಲ್ಲಿಯೂ ಮಾನ್ಯತೆ ಪಡೆಯುತ್ತಿವೆ. ಕಾಲಕ್ರಮೇಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲಾಕೃತಿಗಳು ವ್ಯಾಪಿಸಲಿವೆ’ ಎಂದು ಅಭಿವೃದ್ದಿ ಕರಕುಶಲ ಸೇವಾ ಕೆಂದ್ರದ ಸಹಾಯಕ ನಿರ್ದೇಶಕ ಸುನೀಲ್ ಕುಮಾರ್ ಹೇಳುತ್ತಾರೆ.

*
ಪ್ರವಾಸಿ ತಾಣಗಳಲ್ಲಿ ನಿರಂತರ ಕಲಾಕೃತಿ ಪ್ರದರ್ಶನ ಹಾಗೂ ಮಾರಾಟ ಕೇಂದ್ರ ಆರಂಭವಾಗಬೇಕು. ಪ್ರವಾಸೋಧ್ಯಮ ಇಲಾಖೆ ಈ ನಿಟ್ಟಿನಲ್ಲಿ ಕೈಜೋಡಿಸಬೇಕು.
-ಮುತ್ತುರಾಜ್, ಶಿಲ್ಪಿ

*
ಮೈಸೂರಿನ ಅಭಿವೃದ್ದಿ ಕರಕುಶಲ ಸೇವಾ ಕೇಂದ್ರ ನಮ್ಮ ಕುಲ ಕಸುಬಿಗೆ ಹೊಸತನ ನೀಡಿದೆ. ಹಳೆಯ ಶಿಲ್ಪಗಳೊಂದಿಗೆ ನವೀನ ಮಾದರಿ ಕಲೆಗೂ ಬೇಡಿಕೆ ಬರುತ್ತಿದೆ. -ಮೂರ್ತಿ, ಹೊಯ್ಸಳ ಶಿಲ್ಪಿಗಳ ಸಂಘದ ಅಧ್ಯಕ್ಷ

*
ಕಾಲಕ್ಕೆ ತಕ್ಕಂತೆ ಶಿಲ್ಪಿಗಳ ವೃತ್ತಿಯಲ್ಲಿ ಹಳೆಯದರ ಜೊತೆಗೆ ಹೊಸ ಬದುಕು ಕಟ್ಟಿಕೊಳ್ಳಲು ಮೈಸೂರಿನ ಅಭಿವೃದ್ದಿ ಕರಕುಶಲ ಸೇವಾ ಕೇಂದ್ರ ನೆರವಾಗಿರುವುದು ಶ್ಲಾಘನೀಯ.
-ಗೌರಮ್ಮ ಗೋವಿಂದಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT