ಶನಿವಾರ, ಜುಲೈ 31, 2021
20 °C
ಇದು ಬೇಲೂರಿನ ಚನ್ನಕೇಶವಸ್ವಾಮಿ ವಿಗ್ರಹವಲ್ಲ

ಹಾಲೇಬೇಲೂರಿನ ಹೇಮಾವತಿ ನದಿಯಲ್ಲಿ ಸಿಕ್ಕಿದ್ದು ‘ವಾಸುದೇವ’ ವಿಗ್ರಹ

ಜಾನೇಕೆರೆ ಆರ್‌. ಪರಮೆಶ್‌ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ತಾಲ್ಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ದೊರೆತಿರುವ ವಿಗ್ರಹ ವಿಷ್ಣುವಿನ ಅವತಾರಗಳಲ್ಲಿ ಒಂದಾದ ವಾಸುದೇವ ವಿಗ್ರಹವಾಗಿದೆ. ಇಲ್ಲಿ ಸಿಕ್ಕಿರುವ ವಿಗ್ರಹವು ಬೇಲೂರಿನ ಚನ್ನಕೇಶವಸ್ವಾಮಿ ವಿಗ್ರಹ ಎಂದೇ ಸ್ಥಳೀಯರು ನಂಬಿದ್ದರು.

ಚನ್ನಕೇಶವಸ್ವಾಮಿ ವಿಗ್ರಹಕ್ಕೂ ವಾಸುದೇವ ವಿಗ್ರಹಕ್ಕೂ ಸ್ವಲ್ಪ ಸಾಮ್ಯತೆ ಇದೆ. ಆದರೆ, ಅನೇಕ ವ್ಯತ್ಯಾಸಗಳನ್ನು ವಿಗ್ರಹದಲ್ಲಿ ಗುರುತಿಸಬಹುದಾಗಿದೆ. ಬೇಲೂರು ಚನ್ನಕೇಶವನ ವಿಗ್ರಹದಲ್ಲಿ ಗದೆಯನ್ನು ಎಡಗೈಯಲ್ಲಿ ಹಿಡಿದಿದ್ದರೆ, ಹಾಲೇಬೇಲೂರಿನಲ್ಲಿ ದೊರೆತ ವಿಗ್ರಹದಲ್ಲಿ ಬಲಗೈನಲ್ಲಿ ಹಿಡಿಯಲಾಗಿದೆ. ಗದೆಯನ್ನು ಹೊರತುಪಡಿಸಿದರೆ ಉಳಿದ ಮೂರು ಆಯುಧಗಳು ಬೇರೆ ಬೇರೆಯವೇ ಆಗಿವೆ. ಬೇಲೂರಿನ ವಿಗ್ರಹ ಕೋಲು ಮುಖವಾದರೆ, ಈ ವಿಗ್ರಹ ಅಗಲ ಮುಖ ಹೊಂದಿದೆ. ಆದರೆ, ಬೇಲೂರು ದೇವಸ್ಥಾನ ಕಟ್ಟಿರುವ ಶಿಲ್ಪಕಲೆಯ ಶೈಲಿಯನ್ನೇ ಸಂಪೂರ್ಣವಾಗಿ ಹೋಲುವುದರಿಂದ ಹೊಯ್ಸಳರ ಕಾಲದಲ್ಲಿಯೇ ಈ ವಿಗ್ರಹದ ಕೆತ್ತನೆಯೂ ನಡೆದಿದೆ ಎಂದು ಹಾಸನ ಸರ್ಕಾರಿ ವಸ್ತುಸಂಗ್ರಹಾಲಯದ ಕ್ಯುರೇಟರ್‌ ಎಚ್‌.ಸಿ.ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಗ್ರಹ ಭಿನ್ನವಾಗಿದೆ: ತುಂಬಾ ಸುಂದರವಾದ ಕೆತ್ತನೆ ಹೊಂದಿರುವ ವಿಗ್ರಹದ ಮೂಗು, ಬಾಯಿ ಭಿನ್ನವಾಗಿದೆ. ಆಗಮ ಶಾಸ್ತ್ರದಲ್ಲಿ ಭಿನ್ನವಾದ ವಿಗ್ರಹವನ್ನು ಪೂಜೆ ಮಾಡುವಂತಿಲ್ಲ. ಹೀಗಾಗಿ, ಈ ಹಿಂದೆ ಹೇಮಾವತಿ ನದಿಯಲ್ಲಿ ವಿಸರ್ಜನೆ ಮಾಡಿರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ಹಿರಿಯರಿಂದ ಕೇಳಿ ಬಂದಿದೆ.

ಹೊಯ್ಸಳರು ಬೇಲೂರಿನ ಯಗಚಿ ನದಿ ದಡದಲ್ಲಿ ಚನ್ನಕೇಶವ ದೇವಸ್ಥಾನ ಕಟ್ಟುವುದಕ್ಕೂ ಮೊದಲು ಹೇಮಾವತಿ ನದಿ ದಡದ ಹಾಲೇಬೇಲೂರು ಗ್ರಾಮದಲ್ಲಿ ಚನ್ನಕೇಶವನ ದೇವಸ್ಥಾನ ನಿರ್ಮಾಣ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಅದಕ್ಕೆ ಪೂರಕವಾಗಿ ಈ ಗ್ರಾಮದಲ್ಲಿ 11ನೇ ಶತಮಾನದಿಂದಲೇ ಚನ್ನಕೇಶವಸ್ವಾಮಿ ದೇವಸ್ಥಾನ ಇದೆ. 12ನೇ ಶತಮಾನದಲ್ಲಿ ಹೊಯ್ಸಳರ ಆಳ್ವಿಕೆ ಇದ್ದಂತಹ ಸಂದರ್ಭದಲ್ಲಿ ಚನ್ನಕೇಶವನ ದೇವಸ್ಥಾನ ನಿರ್ಮಾಣ ಸಂದರ್ಭದಲ್ಲಿ ಚನ್ನಕೇಶವನ ವಿಗ್ರಹ ಭಿನ್ನವಾದ ಕಾರಣ ಹೊಯ್ಸಳರು ದೇವಸ್ಥಾನ ಕಟ್ಟಲಿಲ್ಲ. 1117ರಲ್ಲಿ ಬೇಲೂರಿನಲ್ಲಿ ಚನ್ನಕೇಶವನ ಬೃಹತ್‌ ದೇವಾಲಯ ನಿರ್ಮಾಣವಾಯಿತು ಎಂದು ಪೂರ್ವಜರು ಹೇಳುತ್ತಿದ್ದರು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ತಿಳಿಸಿದರು.

‘ಹೊಸ ದೇವಸ್ಥಾನದಲ್ಲಿ ವಿಗ್ರಹ ಇಡಲು ಅವಕಾಶ ಕೊಡಿ’: ‘ಗ್ರಾಮದಲ್ಲಿ 11ನೇ ಶತಮಾನದಲ್ಲಿಯೇ ನಿರ್ಮಾಣವಾಗಿದ್ದ ಚನ್ನ ಕೇಶವ ಸ್ವಾಮಿ ದೇವಸ್ಥಾನ ಸಂಪೂರ್ಣ ಶಿಥಿಲಾ ವಸ್ಥೆಯಲ್ಲಿದ್ದ ಕಾರಣ ಅದೇ ಸ್ಥಳದಲ್ಲಿ ಭವ್ಯವಾದ ಹೊಸ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದೇವೆ. ಕಾಕತಾಳೀಯ ಎಂಬಂತೆ ವಿಷ್ಣುವಿನ ಸುಂದರವಾದ ವಿಗ್ರಹ ಪತ್ತೆಯಾಗಿದೆ. ಅದನ್ನು ಯಾವುದೋ ವಸ್ತುಸಂಗ್ರಹಾಲಯದಲ್ಲಿ ಇಡುವುದು ಬೇಡ. ಭಿನ್ನವಾಗಿದ್ದರೂ ಚಿಂತೆಯಿಲ್ಲ, ಪೂಜೆ ಮಾಡುವುದಿಲ್ಲ. ಹೊಸ ದೇವಸ್ಥಾನದಲ್ಲಿ ಸುರಕ್ಷಿತವಾಗಿ ಸಾರ್ವಜನಿಕರ ದರ್ಶನಕ್ಕೆ ಇಡುತ್ತೇವೆ. ಜಿಲ್ಲಾಧಿಕಾರಿ ಇದಕ್ಕೆ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲೇಬೇಲೂರು ಕುಮಾರ್‌ ಮನವಿ ಮಾಡಿದ್ದಾರೆ.

‘ಮಾಚಲಾದೇವಿ ಕಟ್ಟಿಸಿದ್ದ ದೇವಸ್ಥಾನ’

ಶಾಸನದಲ್ಲಿ ಉಲ್ಲೇಖವಾಗಿರುವಂತೆ‌ ಹಾಲೇಬೇಲೂರು ದೇವಸ್ಥಾನವನ್ನು 1095 ಅಂದರೆ 11ನೇ ಶತಮಾನದಲ್ಲಿ ಉತ್ತರ ಕದಂಬ ವಂಶದ ಮಾಚಲಾದೇವಿ ಕಟ್ಟಿಸಿದ್ದು. ಹಾಲೇಬೇಲೂರಿನ ಮೊದಲು ಹೆಸರು ‘ಮಹಗ್ರಾಹಾರ ಹರುವ ಬೆಲುಹೂರು’ ನಂತರ ‘ಹಳೇ ಬೇಲೂರು’ ಆಗಿರುವ ಕುರಿತು ದಾಖಲೆ ಇದೆ ಎಂದು ಉಪವಿಭಾಗಾಧಿಕಾರಿ ಎಂ. ಗಿರೀಶ್ ನಂದನ್‌ ತಿಳಿಸಿದರು.

ಮರಳು ತೆಗೆಯಲು ತಡೆ

ಹೇಮಾವತಿ ನದಿಯಲ್ಲಿ 12ನೇ ಶತಮಾನದ ವಿಗ್ರಹ ಪತ್ತೆ ಆಗಿರುವುದರಿಂದ ಈ ಸ್ಥಳದಲ್ಲಿ ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆ ಸರ್ವೆ ನಡೆಸಿ ಉತ್ಖನನ ನಡೆಸುವವರೆಗೂ ತಾತ್ಕಾಲಿಕ ವಾಗಿ ಮರಳು ತೆಗೆಯ ದಂತೆ ನಿರ್ಬಂಧಿಸ ಲಾಗಿದೆ ಎಂದು ಗ‌ಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗಮಧು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು