ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಕೋಗಿಲೆ’ ಅಂಗಳದಲ್ಲಿ ಚಂದನ್

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ಸಂ ಗೀತ ಅಂದರೆ ಉಸಿರು. ಇದು ಬದುಕನ್ನು ಕಟ್ಟಿಕೊಡುತ್ತದೆ ಎಂಬುದನ್ನು ನಿರೂಪಿಸಿದ್ದು ಕನ್ನಡದ ಹುಡುಗ ಚಂದನ್ ಶೆಟ್ಟಿ. ಕನ್ನಡದಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ರ್‍ಯಾಪ್ ಸಂಗೀತವನ್ನು ಮತ್ತೆ ಜೀವಂತಗೊಳಿಸಿದ್ದು ಇವರೇ. ಸಂಗೀತವನ್ನೇ ಜೀವನವನ್ನಾಗಿಸಿಕೊಂಡಿರುವ ಈ ಹುಡುಗ ಈಗ ‘ಕನ್ನಡ ಕೋಗಿಲೆ’ ಎಂಬ ಹಾಡಿನ ರಿಯಾಲಿಟಿ ಷೋ ಒಂದನ್ನು ಆರಂಭಿಸಲಿದ್ದಾರೆ.

ಚಂದನ್ ನೇತೃತ್ವದಲ್ಲಿ ಮೂಡಿ ಬರಲಿರುವ ಈ ರಿಯಾಲಿಟಿ ಷೋ ಜೂನ್ ಮೊದಲ ವಾರದಿಂದ ಆರಂಭವಾಗಲಿದೆ. ಮೈಸೂರು, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಮಂಗಳೂರು ಮುಂತಾದ ಕಡೆ ಈ ಷೋನ ಆಡಿಷನ್ ನಡೆಯುತ್ತಿದ್ದು ಮೆಗಾ ಆಡಿಷನ್ ಬೆಂಗಳೂರಿನಲ್ಲಿ ನಡೆಯಲಿದೆ.

ಕಲರ್ಸ್ ಕನ್ನಡ ವಾಹಿನಿಯ ಸಹಭಾಗಿತ್ವದಲ್ಲಿ ಪ್ರಸಾರವಾಗುವ ಈ ಷೋ ಉಳಿದ ರಿಯಾಲಿಟಿ ಷೋಗಳಿಗಿಂತ ಭಿನ್ನ ಎನ್ನುವುದು ಚಂದನ್ ಅಭಿಪ್ರಾಯ. ಕನ್ನಡದ ಒಂದಿಷ್ಟು ಹಾಡುಗಾರರು ಪ್ರತಿಭೆಗಳನ್ನು ಆಯ್ಕೆ ಮಾಡಲು ಆಡಿಷನ್‌ನಲ್ಲಿ ಭಾಗವಹಿಸುತ್ತಿದ್ದು, ಚಂದನ್‌ ಕೂಡ ಅವರಲ್ಲಿ ಒಬ್ಬರು. ಆಡಿಷನ್‌ಗಾಗಿ ಚಂದನ್ ಅವರು ಸರಿಸುಮಾರು ಎರಡು ಸಾವಿರ ಕಿಲೊ ಮೀಟರ್‌ನಷ್ಟು ಪ್ರಯಾಣ ಮಾಡಲಿದ್ದಾರೆ.

ಸುಮಾರು ಮೂರು ತಿಂಗಳ ಕಾಲ ನಡೆಯಲಿರುವ ಈ ಷೋನಲ್ಲಿ 15ರಿಂದ 18 ಮಂದಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 6 ವರ್ಷದವರಿಂದ ಆರಂಭಿಸಿ 60 ವರ್ಷ ವಯಸ್ಸಾಗಿರುವವರು ಭಾಗವಹಿಸಬಹುದು.

ಚಂದನ್ ಕಣ್ಣಲ್ಲಿ ಕನ್ನಡ ಕೋಗಿಲೆ
ಚಂದನ್ ಬಿಗ್‌ಬಾಸ್‌ಗೆ ಹೋಗುವ ಮೊದಲೇ ಹಾಡಿನ ರಿಯಾಲಿಟಿ ಷೋ ಮಾಡುವ ಬಗ್ಗೆ ವಾಹಿನಿಯವರ ಜೊತೆ ಮಾತನಾಡಿದ್ದರು. ಬಿಗ್‌ಬಾಸ್‌ ಮುಗಿದ ನಂತರ ಷೋ ನಡೆಸುವ ಭರವಸೆಯನ್ನು ವಾಹಿನಿ ಅವರಿಗೆ ನೀಡಿತ್ತು. ಬೇರೆ ರಿಯಾಲಿಟಿ ಷೋ‌ಗಳಿಗಿಂತ ಇದು ಭಿನ್ನವಾಗಿರಬೇಕು ಹಾಗೂ ಆಗಿರುತ್ತದೆ ಎನ್ನುವುದು ಅವರ ಭರವಸೆಯ ಮಾತು.

‘ಇದು ಸಾಮಾನ್ಯ ರಿಯಾಲಿಟಿ ಷೋಗಳಂತೆ ಇರುತ್ತದೆ. ಆದರೆ ಹಾಡಿನಲ್ಲಿ ಭಿನ್ನತೆ ಇರುತ್ತದೆ. ಅಂದರೆ ಸಂಗೀತದಲ್ಲಿ ಹೊಸ ಫ್ಲೇವರ್ ಇರುತ್ತದೆ. ಹಳೆಯ ಹಾಡಿನ ಕಂಪನ್ನು ಹಾಳು ಮಾಡದಂತೆ ಈಗಿನ ಟ್ರೆಂಡ್‌ಗೆ ಹೊಂದಿಕೊಳ್ಳುವಂತೆ ಮಾಡಬೇಕು ಎಂದುಕೊಂಡಿದ್ದೇವೆ’ ಎನ್ನುವ ಮೂಲಕ ಕಾರ್ಯಕ್ರಮದ ಸ್ವರೂಪ ವಿವರಿಸುತ್ತಾರೆ ಚಂದನ್.

‘ನಾನು ಓದುತ್ತಿದ್ದ ಕಾಲದಲ್ಲಿ ಯಾವುದೇ ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರಲಿಲ್ಲ. ಸಂಗೀತ ಎನ್ನುವುದು ನನ್ನ ಕ್ಷೇತ್ರ, ನನ್ನ ವೃತ್ತಿ. ನಾನು ಇದರಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡವನು. ನಮ್ಮಲ್ಲಿನ ಅನೇಕ ಪ್ರತಿಭೆಗಳು ಗುರುತಿಸುವವರಿಲ್ಲದೇ ಕಮರಿ ಹೋಗುತ್ತಿವೆ. ಅಂತಹ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಚೆನ್ನಾಗಿ ತರಬೇತಿ ನೀಡಿ, ಅವರನ್ನು ಸ್ವತಂತ್ರ ಕಲಾವಿದರನ್ನಾಗಿ ಮಾಡಬೇಕು ಎಂಬುದು ನನ್ನದೊಂದು ಆಸೆ. ಏಕೆಂದರೆ ಕರ್ನಾಟಕದಲ್ಲಿ ಸಂಗೀತ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಬೆಳೆದು ಮೇಲೆ ಬಂದವರು ತುಂಬಾ ಕಡಿಮೆ ಜನ. ಆದರೆ ಸಂಗೀತದಲ್ಲಿ ಹೆಸರು, ಹಣ ಎಲ್ಲವನ್ನೂ ಗಳಿಸಬಹುದು. ಇತ್ತೀಚೆಗೆ ಸಂಗೀತದಲ್ಲಿ ಈ ಒಂದು ಟ್ರೆಂಡ್ ಸೃಷ್ಟಿಯಾಗಿದೆ. ಅದಕ್ಕೆ ನಾನೇ ಉತ್ತಮ ಉದಾಹರಣೆ. ಅದರಲ್ಲಿ ಹಣ ಮಾಡಬಹುದು, ಭವಿಷ್ಯ ಕಟ್ಟಿಕೊಳ್ಳಬಹುದು ಎಂಬುದಕ್ಕೆ ನಾನೇ ಸಾಕ್ಷಿ. ನಮ್ಮ ಕರ್ನಾಟಕದ ಮಕ್ಕಳು ಸಂಗೀತದಲ್ಲಿ ಒಂದಷ್ಟು ಹೆಸರು ಗಳಿಸಿದರೆ ಅದರಿಂದ ನಮ್ಮ ಕನ್ನಡ ಭಾಷೆಗೂ ಹೆಮ್ಮೆ’ ಎಂದು ತಮ್ಮ ಕಾರ್ಯಕ್ರಮದ ಹಿಂದಿನ ಉದ್ದೇಶವನ್ನು ಚಂದನ್ ಸುದೀರ್ಘವಾಗಿ ವಿವರಿಸಿದರು.

‘ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ವಯಸ್ಸಿನ ಮಿತಿಯನ್ನು ಕಿರಿದುಗೊಳಿಸದಿರುವುದಕ್ಕೆ ಕಾರಣ ಏನು’ ಎಂದು ಇವರಲ್ಲಿ ಕೇಳಿದರೆ: ‘ಎಷ್ಟೋ ಜನ ಇಂದು ಎಲೆಮರೆಯ ಕಾಯಿಗಳಂತೆ ತಮ್ಮಲ್ಲಿರುವ ಪ್ರತಿಭೆಯನ್ನು ತಮ್ಮಲ್ಲೇ ಹುದುಗಿಸಿಕೊಂಡಿರುತ್ತಾರೆ. ಅವರಿಗೆ ಪ್ರತಿಭೆ ತೋರಿಸಲು ಸರಿಯಾದ ವೇದಿಕೆ ಸಿಕ್ಕಿರುವುದಿಲ್ಲ. ಉದಾಹರಣೆಗೆ ಹೇಳಬೇಕು ಎಂದರೆ ನಟ ಗಡ್ಡಪ್ಪ. ತಿಥಿ ಸಿನಿಮಾ ಬರುವವರೆಗೂ ಅವರು ಯಾರು ಎಂಬುದು ಜನರಿಗೆ ತಿಳಿದಿರಲಿಲ್ಲ. ಆ ಸಿನಿಮಾದಲ್ಲಿನ ನಟನೆ ಇಳಿ ವಯಸ್ಸಿನ ಅವರನ್ನು ಸೂಪರ್ ಸ್ಟಾರ್ ಆಗಿಸಿತ್ತು. ವಯಸ್ಸಿನ ಹಂಗಿಲ್ಲದೇ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಬೆಳಕಿಗೆ ತರಬೇಕು. ಆಡಿಷನ್ ನಡೆಸಿದಾಗ ನಮಗೆ ಅಂತಹ ಅನೇಕ ಪ್ರತಿಭಾನ್ವಿತರು ಸಿಕ್ಕಿದ್ದರು. ಅವರಲ್ಲಿ ಎಷ್ಟೋ ಜನ ಜನಪದ ಹಾಡುಗಾರರಿದ್ದರು. ನಮ್ಮಲ್ಲಿ ಜನಪದ ಹಾಡುಗಳನ್ನು ಒಮ್ಮೆಯೂ ಕೇಳದವರಿದ್ದಾರೆ. ಅಂತಹವರಿಗೆ ಈ ಕಾರ್ಯಕ್ರಮ ಜನಪದದ ಸೊಗಡನ್ನು ತಿಳಿಸಲಿದೆ. ಅಲ್ಲದೇ ಜನಪದವನ್ನು ಮತ್ತೆ ಮುಖ್ಯಭೂಮಿಕೆಗೆ ತಂದ ಹೆಮ್ಮೆ ನಮ್ಮದಾಗುತ್ತದೆ’ ಎನ್ನುತ್ತಾರೆ.

ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡುವ ಚಂದನ್, ‘ಇದರಲ್ಲಿನ ದೃಶ್ಯಗಳು, ಸೆಟ್ ಎಲ್ಲವೂ ಭಿನ್ನವಾಗಿರುತ್ತದೆ. ಒಟ್ಟಾರೆಯಾಗಿ, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಒಟ್ಟಾಗಿ ಕುಳಿತು ಈ ಕಾರ್ಯಕ್ರಮ ನೋಡಬಹುದು. ಆದರೆ ಕಾರ್ಯಕ್ರಮದ ನಿರ್ಣಾಯಕರು, ನಿರೂಪಕರು ಯಾರು, ಕಾರ್ಯಕ್ರಮ ಉಳಿದ ಷೋಗಳಿಗಿಂತ ಹೇಗೆ ಭಿನ್ನ ಎಂಬುದೆಲ್ಲವನ್ನು ನೀವು ಕಾದು ನೋಡಬೇಕು’ ಎನ್ನುವ ಮೂಲಕ ಕುತೂಹಲ ಉಳಿಸಿ, ಮಾತು ಮುಗಿಸುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT