ಹನಿ ನೀರಿನ ಮಹತ್ವದ ಅರಿವು ಮೂಡಿಸಿ

ಮಂಗಳವಾರ, ಜೂಲೈ 23, 2019
20 °C
ಸ್ಕೌಟ್, ಗೈಡ್‌ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ

ಹನಿ ನೀರಿನ ಮಹತ್ವದ ಅರಿವು ಮೂಡಿಸಿ

Published:
Updated:
Prajavani

ಹಾಸನ: ಜಲಶಕ್ತಿ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ನೀರಿನ ಸಂರಕ್ಷಣೆ, ಸದ್ಬಳಕೆ ಹಾಗೂ ಅದರ ಮಹತ್ವ ಕುರಿತು ಇತರರಿಗೂ ಮಾಹಿತಿ ನೀಡುವಂತೆ ಸ್ಕೌಟ್, ಗೈಡ್‌ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು.

ಭಾರತೀಯ ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಶಾಖೆ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ತೃತೀಯ ಸೋಪಾನ ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ, ಮಾನಸಿಕ ಸದೃಢತೆಗೆ ಸ್ಕೌಟ್ಸ್‌,ಗೈಡ್ಸ್‌ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಬೇಕು. ಅಗತ್ಯವಿರುವ ಮೂಲ ಸೌಕರ್ಯ ಒದಗಿಸುವುದಾಗಿ ಭರವಸೆ ನೀಡಿದರು.

ನೀರಿನ ಸಮಸ್ಯೆ ಅರಿತು ಕೇಂದ್ರ ಸರ್ಕಾರ ಜಲಶಕ್ತಿ ಎಂಬ ಮಹತ್ವದ ಯೋಜನೆ ಜಾರಿಗೆ ತಂದಿದ್ದು, ಹನಿ ನೀರಿನ ಸದ್ಬಳಕೆ ಈ ಯೋಜನೆಯ ಉದ್ದೇಶವಾಗಿದೆ. ಹನಿ ನೀರಿನ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವಲ್ಲಿ ಯುವಶಕ್ತಿಯ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಎಚ್.ಎಲ್ ನಾಗರಾಜ್ ಮಾತನಾಡಿ, ಜಲಕ್ಷಾಮ ನಿಯಂತ್ರಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಕುಸಿಯುತ್ತಿರುವ ಅಂತರ್ಜಲವನ್ನು ಮರುಪೂರಣ ಮಾಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಲ ಸಂರಕ್ಷಣಾ ವಿಧಾನಗಳನ್ನು ಎಲ್ಲರೂ ಅರಿತು ಬಾಳಬೇಕಿದೆ. ಜಲವಿಲ್ಲದೆ ಜೀವ ಸಂಕುಲವಿಲ್ಲ ಎಂಬ ಮಾತಿನಂತೆ ನೀರಿಲ್ಲದೆ ಯಾವ ಜೀವಿಗಳು ಬದುಕಲು ಸಾಧ್ಯವಿಲ್ಲ. ನೀರನ್ನು ಸೃಷ್ಠಿಸುವ ಶಕ್ತಿ ಇರುವುದು ಕೇವಲ ನಿಸರ್ಗಕ್ಕೆ ಮಾತ್ರ ಎಂದು ಅವರು ತಿಳಿಸಿದರು.

ನಿಸರ್ಗಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ ಜೀವ ಸಂಕುಲಗಳ ನಾಶ ಖಚಿತ. ಆದ್ದರಿಂದ ಪರಿಸರ ಕಾಳಜಿಯ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಜಲಸಂರಕ್ಷಣೆ ಕುರಿತು ಪ್ರತಿಯೊಬ್ಬರು ಯೋಚಿಸಬೇಕಿದೆ ಎಂದರು.

ಸ್ಕೌಟ್ ಮತ್ತು ಗೈಡ್ಸ್ ನ ವಾರ್ಷಿಕ ಯೋಜನೆಯ ಕಾರ್ಯಕ್ರಮದ ಪುಸ್ತಕ ಬಿಡುಗಡೆ ಮಾಡಲಾಯಿತು. ರಾಜ್ಯ ಮಟ್ಟದ ಪ್ರಮಾಣ ಪತ್ರವನ್ನು ಫಲಾನುಭವಿಗಳಿಗೆ ಪಾಷಾ ವಿತರಿಸಿದರು.

ಸ್ಕೌಟ್ಸ್‌ ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತ ವೈ.ಎಸ್. ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ಜಂಟಿ ಕಾರ್ಯದರ್ಶಿ ಕಾಂಚನಾ, ಜಿಲ್ಲಾ ಆಯುಕ್ತ ಪ್ರಕಾಶ್ ಎಸ್. ಯಾಜಿ, ಶಿಬಿರದ ನಾಯಕರಾದ ಎಂ.ಎಸ್. ಪ್ರಕಾಶ್, ವನಜಾಕ್ಷಿ, ಜಿಲ್ಲಾ ತರಬೇತಿ ಆಯುಕ್ತೆ ಕಾಮೇಶ್ವರಿ ಭಟ್, ಜಿಲ್ಲಾ ಸಂಘಟಕಿ ಪ್ರಿಯಾಂಕ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !