ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬ ಜಾತ್ರಾ ಮಹೋತ್ಸವ ಸಂಪನ್ನ

ಮುಂದಿನ ವರ್ಷದ ದರ್ಶನ ಅ. 17, ಮೂರು ಲಕ್ಷ ಭಕ್ತರಿಗೆ ದರುಶನ ಕರುಣಿಸಿದ ಶಕ್ತಿದೇವತೆ
Last Updated 9 ನವೆಂಬರ್ 2018, 13:33 IST
ಅಕ್ಷರ ಗಾತ್ರ

ಹಾಸನ: ವರ್ಷಕ್ಕೊಮ್ಮೆಯಷ್ಟೇ ದರ್ಶನ ನೀಡುವ ಅಧಿದೇವತೆ ಹಾಸನಾಂಬೆಯ ಗರ್ಭಿಗುಡಿಯ ಬಾಗಿಲನ್ನು ಶುಕ್ರವಾರ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು.

ಮಧ್ಯಾಹ್ನ 1.18 ಕ್ಕೆ ವಿಶ್ವರೂಪ ದರ್ಶನ ಬಳಿಕ ಭಕ್ತರ ಜೈಕಾರ ಹಾಗೂ ಮಂಗಳ ವಾದ್ಯದ ನಡುವೆ ದೇವಿಯ ಗರ್ಭಗುಡಿ ಬಾಗಿಲು ಬಂದ್ ಮಾಡುವುದರೊಂದಿಗೆ ಈ ವರ್ಷದ ದರ್ಶನೋತ್ಸವಕೆ ವಿಧ್ಯುಕ್ತ ತೆರೆ ಬಿದ್ದಿತು. ಮುಂದಿನ ವರ್ಷ ಅ. 17 ರಿಂದ 29 ರ ವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯಲಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಕಡಿಮೆಯಾಗಿದ್ದು, ಕಾಣಿಕೆ ರೂಪದಲ್ಲಿ ಬರುವ ಆದಾಯವೂ ಇಳಿಮುಖವಾಗುವ ಸಾಧ್ಯತೆ ಇದೆ. ನ. 1 ರಿಂದ 9ರವರೆಗೆ ಲಕ್ಷಾಂತರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದಳು.

ಬಾಗಿಲು ಮುಚ್ಚುವ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್‌ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್‌ ಗೌಡ, ದೇವಸ್ಥಾನ ಆಡಳಿತಾಧಿಕಾರಿ ಎಚ್.ಎಲ್.ನಾಗರಾಜ್‌, ತಹಶೀಲ್ದಾರ್ ಶಿವಶಂಕರಪ್ಪ ಅಧಿಕಾರಿಗಳು ಹಾಜರಿದ್ದರು.

ಕೊನೆ ದಿನವೂ ದರ್ಶನ ಪಡೆಯಲು ಸಹಸ್ರಾರು ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ನೂರಾರು ಭಕ್ತರ ಪೈಕಿ ಕೆಲವರಿಗೆ ದರ್ಶನ ಭಾಗ್ಯ ಸಿಕ್ಕರೆ, ಮತ್ತೆ ಕೆಲವರು ದೇವಿ ಕಾಣಲಾಗದೆ ನಿರಾಶೆಯಿಂದ ಮರಳಿದರು. ಈ ಸಲವೂ ನೇರ ಹಾಗೂ ವಿಶೇಷ ದರ್ಶನಕ್ಕೆ ₹ 300 ಹಾಗೂ ₹ 1,000 ಬೆಲೆಯ ಟಿಕೆಟ್ ವ್ಯವಸ್ಥೆ ಮಾಡಲಾಗಿತ್ತು.

ದೇವಿಗೆ ಧಾರಣೆ ಮಾಡಿದ್ದ ಆಭರಣ ಕಳಚಿದ ನಂತರ ಗರ್ಭಗುಡಿ ಬಾಗಿಲು ಮುಚ್ಚಲಾಯಿತು. ಈ ವೇಳೆ ದೀಪ ಪ್ರಜ್ವಲಿಸುತ್ತಿತ್ತು. ಎಲ್ಲರ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಿದ ನಂತರ ಬೀಗ ಜಡಿದು, ಸೀಲ್ ಮಾಡಿ ಅದರ ಕೀ ಯನ್ನು ತಹಶೀಲ್ದಾರ್‌ ಸುಪರ್ದಿಗೆ ನೀಡಲಾಯಿತು. ಮುಂದಿನ ವರ್ಷ ಬಾಗಿಲು ತೆರೆಯುವರೆಗೂ ಜಿಲ್ಲಾ ಖಜಾನೆಯಲ್ಲಿ ಕೀ ಭದ್ರವಾಗಿರಲಿದೆ.

ಈ ಬಾರಿಯ ಉತ್ಸವದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಂಸದ ಎಚ್.ಡಿ.ದೇವೇಗೌಡರು ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಸಿನಿಮಾ ರಂಗದ ಗಣ್ಯರು ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT