ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬೆ ದರ್ಶನ ಪಡೆದ ಸಿ.ಎಂ ಕುಟುಂಬ

ದೇವಿ ನಂಬಿಕೆ ಬಗ್ಗೆ ಯಾರಿಗೂ ಸಂಶಯ ಬೇಡ: ಕುಮಾರಸ್ವಾಮಿ
Last Updated 2 ನವೆಂಬರ್ 2018, 14:26 IST
ಅಕ್ಷರ ಗಾತ್ರ

ಹಾಸನ: ಅಧಿದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನದ ಮೊದಲ ದಿನವಾದ ಶುಕ್ರವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಂಸದ ಎಚ್‌.ಡಿ. ಎಚ್.ಡಿ.ದೇವೇಗೌಡ ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಹಲವು ಭಕ್ತರು ದೇವಿಯ ದರ್ಶನ ಪಡೆದರು.

ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಮಗ ನಿಖಿಲ್‌ ಹೆಸರಿನಲ್ಲಿ ಕುಮಾರಸ್ವಾಮಿ ಅರ್ಚನೆ ಮಾಡಿಸಿದರು.

ಮಧ್ಯಾಹ್ನ ನೇರವಾಗಿ ಬೆಂಗಳೂರಿನಿಂದ ಬಂದ ಕುಮಾರಸ್ವಾಮಿಗೆ ಸಚಿವ ಎಚ್‌.ಡಿ.ರೇವಣ್ಣ, ಚನ್ನಮ್ಮ ದೇವೇಗೌಡ, ಗೌಡರ ಮಕ್ಕಳು, ಮೊಮ್ಮಕ್ಕಳು, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಸಾಥ್‌ ನೀಡಿದರು.

ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಕುಟುಂಬ ಸದಸ್ಯರೊಂದಿಗೆ ದೇವಿ ದರ್ಶನ ಪಡೆದಿದ್ದೇನೆ. ಇತ್ತೀಚೆಗೆ ಕೆಲವು ಸಂಘಟನೆಗಳೂ ದೇವಿಯ ನಂಬಿಕೆ ಬಗ್ಗೆ ಅಪಸ್ವರ ಎತ್ತಿವೆ. ಆದರೆ, ಪವಾಡ ಶಕ್ತಿ ಇಂದು, ನಿನ್ನೆಯದಲ್ಲ. ದೇವರ ಮೇಲಿನ ನಂಬಿಕೆ-ವಿಶ್ವಾಸವೇ ಸಾರ್ವಜನಿಕ ಜೀವನ ನಡೆಯಲು ಕಾರಣ. ಹೀಗಾಗಿ ಹಾಸನಾಂಬೆ ನಂಬಿಕೆ ಬಗ್ಗೆ ಯಾವುದೇ ಸಂಶಯ ಬೇಡ. ಅಪ ಪ್ರಚಾರವೂ ಬೇಡ ಎನ್ನುವುದು ವೈಯಕ್ತಿಕ ಅಭಿಪ್ರಾಯ. ದೇವರ ನಂಬಿಕೆಗೆ ಧಕ್ಕೆ ಉಂಟು ಮಾಡುವುದು ಬೇಡ’ ಎಂದು ಮನವಿ ಮಾಡಿದರು.

‘ಸಮಾಜದಲ್ಲಿ ಘಟಿಸುವ ಪ್ರತಿಯೊಂದಕ್ಕೂ ಒಂದೊಂದು ಶಕ್ತಿ ಕಾರಣ. ಹೀಗಾಗಿ ಯಾವುದೇ ಗೊಂದಲಕ್ಕೆ ಕಿವಿಗೊಡದೆ, ದೇವಿಯ ದರ್ಶನ ಮಾಡಿ’ ಎಂದು ಭಕ್ತರಲ್ಲಿ ತಿಳಿಸಿದರು.

‘ಇಡೀ ನಾಡು ಸುಭಿಕ್ಷವಾಗಿರಲಿ. ಜನರ ನೆಮ್ಮದಿ ಜೀವನ ಹಾಗೂ ಅವರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಶಕ್ತಿ ಕೊಡು’ ಎಂದು ದೇವಿಯಲ್ಲಿ ಬೇಡಿದ್ದೇನೆ ಎಂದರು.

ಸಾ.ರಾ.ಮಹೇಶ್ ಮಾತನಾಡಿ, ‘ನಮ್ಮದು ಎಲ್ಲವನ್ನೂ ಪೂಜ್ಯಭಾವನೆಯಿಂದ ಕಾಣುವ ವಿಭಿನ್ನ ಸಂಸ್ಕೃತಿ. ಹಾಗಾಗಿ ನನಗೂ ದೇವರ ಮೇಲೆ ಅಪಾರ ನಂಬಿಕೆ ಇದ್ದು, ಅದರಂತೆ ಇಂದು ಹಾಸನಾಂಬೆ ದರ್ಶನ ಪಡೆದಿದ್ದೇನೆ’ ಎಂದರು.

ಸರತಿ ಸಾಲಿನಲ್ಲಿ ಬಂದ ಭಕ್ತರು ಯಾವುದೇ ಅಡೆ ತಡೆ, ಇಲ್ಲದೆ ಸಲೀಸಾಗಿ ಸಾಗಿ ದೇವಿ ದರ್ಶನ ಪಡೆದು ಖುಷಿಪಟ್ಟರು.

ಶನಿವಾರ ಮತ್ತು ಭಾನುವಾರ ರಜೆ ದಿನ ಆಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT