ಮಂಗಳವಾರ, ಆಗಸ್ಟ್ 20, 2019
22 °C

ಗುರಿ ಸಾಧನೆಗೆ ನಿರಂತರ ಶ್ರಮ ಅಗತ್ಯ: ಜಿಲ್ಲಾಧಿಕಾರಿ ವೈಶಾಲಿ ಕಿವಿಮಾತು

Published:
Updated:
Prajavani

ಹಾಸನ: ಮನುಷ್ಯನ ಗುರಿ ಸಾಧನೆಗೆ ಆತ್ಮ ವಿಶ್ವಾಸ ಬಹು ಮುಖ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಹೇಳಿದರು.

ಜಿಲ್ಲಾಡಳಿತ ಮತ್ತು ಬಿ.ಜಿ.ಎಸ್ ಸ್ಟಡಿ ಸೆಂಟರ್‌ ವತಿಯಿಂದ ಆಯೋಜಿಸಿದ್ದ ‌ಐಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳನ್ನು ಎದುರಿಸಿದರೆ ಸಾಲದು. ಜೀವನದಲ್ಲಿ ಸಾಧಿಸುತ್ತೇನೆಂಬ ಛಲ, ಆತ್ಮ ವಿಶ್ವಾಸ ಹೊಂದಿರಬೇಕು. ವಿಷಯಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಗುರಿ ಸಾಧನೆಯತ್ತ ನಿರಂತರ ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಯನ ಸೂತ್ರಗಳನ್ನು ಬಳಸುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚು ಅಭ್ಯಾಸ ಮಾಡಬೇಕು. ಕಲಿಕೆಗೆ ವಿಷಯ ಮನನ ಹಾಗೂ ಸ್ಮರಣೆ ಬಹುಮುಖ್ಯ. ವಿದ್ಯೆ ಗಳಿಕೆಗೆ ಅಡ್ಡದಾರಿಗಳಿಲ್ಲ. ಶ್ರದ್ಧೆ, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ನುಡಿದರು.

ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯ ಅಳವಡಿಸಿಕೊಂಡರೆ ಸುಗಮವಾಗಿ ಗುರಿ ಸಾಧಿಸಲು ಸಾಧ್ಯ. ವಿದ್ಯೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಜ್ಞಾನ ಸಾಧನೆಯಿಂದ ಸುಗಮ ಜೀವನ ರೂಪಿಸಿಕೊಳ್ಳಬಹುದು ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ , ವ್ಯಾಟ್ಸ್ ಆ್ಯಪ್‌, ಅಂತರ್ಜಾಲಗಳ ಬಳಕೆ ಕಡಿಮೆಗೊಳಿಸಬೇಕು. ನಿತ್ಯ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ, ಹಾಸನ ಉಪವಿಭಾಗಾಧಿಕಾರಿ ಎಚ್.ಎಲ್ ನಾಗರಾಜು, ಜಿಲ್ಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ಈ ಕಾರ್ಯಾಗಾರದ ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ದರ್ಜೆಯ ಅಧಿಕಾರಿಗಳಾಗಿ ಹೊರಹೊಮ್ಮುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹೇಳಿದರು.

ಜಿಲ್ಲೆಯ ವಿವಿಧ ಭಾಗಗಳಿಂದ 500 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಯೂನಿವರ್ಸಲ್‌ ಕೋಚಿಂಗ್ ಸೆಂಟರ್‌ ನ ಶಿವರಾಜ್ ಹಾಗೂ ಐಎಎಸ್ ಟಾಪರ್‌ ಸಂಸ್ಥೆಯ ಸೋಮಶೇಖರ್‌, 2018ರ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ 240 ನೇ ರ‍್ಯಾಂಕ್ ಪಡೆದ ಎಚ್‌.ಆರ್‌. ಕೌಶಿಕ್ ಅವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ನೀಡಿದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸವಿತಾ, ಹರ್ಷ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ, ಜಿಲ್ಲಾ ಉದ್ಯೋಗಾಧಿಕಾರಿ ವಿಜಯಲಕ್ಷ್ಮಿ, ಆದಿ ಚುಂಚುನಗಿರಿ ಶಾಖಾ ಮಠದ ವ್ಯವಸ್ಥಾಪಕ ಚಂದ್ರಶೇಖರ್, ವಾರ್ತಾಧಿಕಾರಿ ವಿನೋದ್ ಚಂದ್ರ, ಸಕಲೇಶಪುರ ಉಪವಿಭಾಗಾಧಿಕಾರಿ ಕವಿತಾ ರಾಜರಾಂ, ಪತ್ರಕರ್ತ ಉದಯ್ ಕುಮಾರ್‌, ಬಿಜಿಎಸ್ ಶಾಲೆಯ ನಿರ್ದೇಶಕ ಎಚ್.ಎಲ್ ಕುಶಾಲಪ್ಪ ಇದ್ದರು.

Post Comments (+)