ಭಾನುವಾರ, ಆಗಸ್ಟ್ 1, 2021
26 °C
ಕಳಪೆ ಬಿತ್ತನೆ ಆಲೂಗಡ್ಡೆ ವಿತರಣೆ ಆರೋಪ: ಹೊಲದಲ್ಲಿ ಕಮರಿದ ರೈತರ ಕನಸು–ಪರಿಹಾರ ನೀಡಲು ಆಗ್ರಹ

ಭೂಮಿಯಲ್ಲೇ ಕೊಳೆಯುತ್ತಿರುವ ಆಲೂಗಡ್ಡೆ

ಕೆ.ಎಸ್‌.ಸುನಿಲ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಆಲೂಗಡ್ಡೆ ಭೂಮಿಯಲ್ಲೇ ಕೊಳೆಯುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಅಂಗಮಾರಿ ರೋಗ, ಕಳಪೆ ಗುಣಮಟ್ಟದ ಆಲೂಗಡ್ಡೆ ವಿತರಣೆ ಹಾಗೂ ಕಡಿಮೆ ಬೆಲೆಯಿಂದ ಬೆಳೆಗಾರರು ನಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಈಗ ಸ್ಥಳೀಯರು ತಿನ್ನುವ ಆಲೂಗಡ್ಡೆಯನ್ನೇ ನಂಬಿ ಬಿತ್ತನೆ ಮಾಡಿದರು. ಅದು ಸಹ ಭೂಮಿಯಲ್ಲೇ ಕರಗುತ್ತಿರುವುದರಿಂದ ಚಿಂತಾಕ್ರಾಂತರಾಗಿದ್ದಾರೆ.

ಕಳೆದ ವರ್ಷ 10 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಈ ಬಾರಿ 15 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ. ಮೇ ಎರಡನೇ ವಾರದಿಂದ ಬಿತ್ತನೆ ಆರಂಭಗೊಂಡಿದ್ದು, ಈವರೆಗೂ ಅಂದಾಜು ಆರು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಸ್ಥಳೀಯ ಆಲೂಗಡ್ಡೆಯನ್ನೇ ಬಿತ್ತನೆಗೆ ನೀಡಿದ್ದು, ಗುಣಮಟ್ಟದ ಆಲೂ ಕ್ವಿಂಟಲ್‌ಗೆ ₹ 2,250 ಹಾಗೂ ದಪ್ಪ ಗಾತ್ರದ ಆಲೂ ಕ್ವಿಂಟಲ್‌ಗೆ ₹ 2,150 ದರ ನಿಗದಿಯಾಗಿತ್ತು.

‘ಆಲೂಗಡ್ಡೆ ಬಿತ್ತನೆ ಮಾಡಿ 26 ದಿನ ಕಳೆದರೂ ಮೊಳೆಕೆ ಒಡೆಯದೆ ಹೊಲದಲ್ಲಿಯೇ ಕೊಳೆಯುತ್ತಿದೆ. ಜಿಲ್ಲಾಡಳಿತ ಕಳಪೆ ಗುಣಮಟ್ಟದ ಬಿತ್ತನೆ ಆಲೂ ನೀಡಿ ಸಂಕಷ್ಟಕ್ಕೆ ಸಿಲುಕಿಸಿದೆ’ ಎಂಬುದು ರೈತರ ಆರೋಪ.

ಹಾಸನ ತಾಲ್ಲೂಕಿನ ಬೈಲಹಳ್ಳಿ, ಸಿಂಗಪಟ್ಟಣ, ನಂಜದೇವರ ಕಾವಲು, ಬೇಲೂರಿನ ಅರೇಹಳ್ಳಿ ಹೋಬಳಿ, ಅನಿಕೆ, ದೊಮ್ಮಹಳ್ಳಿ, ಅರಕಲಗೂಡು ತಾಲ್ಲೂಕಿನಲ್ಲಿ ಬೆಳೆ ಹಾನಿಯಿಂದ ರೈತರು ಕಣ್ಣೀರಿಡುತ್ತಿದ್ದಾರೆ.

ಹಿಂದೆ ಬಿತ್ತನೆ ಆಲೂಗಡ್ಡೆ ಖರೀದಿಸಿದ ಜೊತೆಗೆ ಸರ್ಕಾರ ಸಹಾಯಧನ ನೀಡುತ್ತಿತ್ತು. ರಿಯಾಯಿತಿ ದರದಲ್ಲಿ ಕ್ರಿಮಿನಾಶಕ ಔಷಧಿ, ರಸಗೊಬ್ಬರ ನೀಡಿತ್ತು. ಆದರೆ, ಈ ಬಾರಿ ನೀಡಲಿಲ್ಲ.

‘ಎಕರೆ ಆಲೂಗಡ್ಡೆ ಬೆಳೆಯಲು ಬಿತ್ತನೆ ಬೀಜ, ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರ, ಭೂಮಿ ಉಳುಮೆ, ಕೂಲಿ ಕಾರ್ಮಿಕರು ಎಲ್ಲವೂ ಸೇರಿ ಅಂದಾಜು ₹25 ಸಾವಿರ ಖರ್ಚು ಬರಲಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ರಚಿಸಿ, ಹಳ್ಳಿ ಹಳ್ಳಿಗೆ ಕಳುಹಿಸಿ ಸಮೀಕ್ಷೆ ನಡೆಸಬೇಕು. ನಷ್ಟಕ್ಕೊಳಗಾಗಿರುವವರಿಗೆ ಸಂಪೂರ್ಣ ಪರಿಹಾರ ವಿತರಿಸಬೇಕು’ ಎಂದು ಬೆಳೆಗಾರರು ಒತ್ತಾಯಿಸಿದರು.

ಪ್ರಸಕ್ತ ವರ್ಷ ಲಾಕ್‌ಡೌನ್‌ ನಿಂದಾಗಿ ಜಲಂಧರ್‌ನಿಂದ ಬಿತ್ತನೆ ಆಲೂಗಡ್ಡೆ ತರಿಸಿಕೊಳ್ಳಲಿಲ್ಲ. ಹಾಗಾಗಿ ಸ್ಥಳೀಯ ತಿನ್ನುವ ಆಲೂಗಡ್ಡೆಯನ್ನೇ ಬಿತ್ತನೆಗಾಗಿ ನೀಡಲಾಯಿತು. ಬಿತ್ತನೆ ಮಾಡಿದ 12 ದಿನಗಳ ಒಳಗೆ ಆಲೂ ಭೂಮಿಯಲ್ಲಿ ಚಿಗುರೊಡೆಯಬೇಕು. ಆದರೆ, 26 ದಿನಗಳ ಕಳೆದರೂ ಆಲೂ ಕಾಣಿಸಿಕೊಳ್ಳುತ್ತಿಲ್ಲ. ಭೂಮಿಯಲ್ಲೇ ಕರಗುತ್ತಿದ್ದು, ಸಾವಿರಾರು ಖರ್ಚು ಮಾಡಿ ಬಿತ್ತನೆ ಮಾಡಿದ ರೈತರು ಕಂಗಾಲಾಗಿದ್ದಾರೆ.

‘ಹಾಸನ ತಾಲ್ಲೂಕಿನ ಬೈಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 80 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಆಲೂಗಡ್ಡೆ ಕರಗಿದೆ. ತಿನ್ನುವ ಆಲೂಗಡ್ಡೆಯನ್ನೇ ಬಿತ್ತನೆಗಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ಕಳಪೆ ಗುಣಮಟ್ಟದ ಬಿತ್ತನೆ ಆಲೂಗಡ್ಡೆ ನೀಡಿರುವವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಮಹೇಶ್‌ ಆರೋಪಿಸಿದರು.

‘ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುವ ಮುನ್ನ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ರೈತರು, ವರ್ತಕರ ಸಭೆ ಕರೆದು ದೃಢಿಕರಣ, ದರ ನಿಗದಿ ಕುರಿತು ಚರ್ಚಿಸಲಾಗುತ್ತಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತ ವರ್ತಕರ ಜೊತೆಗೆ ಚರ್ಚಿಸಿ ನಿಗದಿ ಪಡಿಸಿದ ದರದಂತೆ ಮಾರಾಟ ಮಾಡಲಾಗಿದೆ’ ಎಂದು ದೂರಿದರು.

‘ದೊಡ್ಡಬಳ್ಳಾಪುರದಿಂದ ಬರುತ್ತಿದ್ದ ಗುಣಮಟ್ಟದ ಆಲೂಗಡ್ಡೆ ಬೆಳೆದು ಲಾಭ ಗಳಿಸುತ್ತಿದ್ದೆವು. ಆದರೆ, ಚೆನ್ನಾಗಿ ಫಸಲು ಬರುತ್ತದೆಂದು ಜಲಂಧರ್‌ ಆಲೂಗಡ್ಡೆಗೆ ಜೋತು ಬೀಳುವಂತೆ ಮಾಡಿದರು. ದೃಢೀಕೃತ ಆಲೂಗಡ್ಡೆ ಆರಂಭದ ಕೆಲ ವರ್ಷ ಚೆನ್ನಾಗಿ ಫಸಲು ಬಂತು. ಕೆಲ ವರ್ಷ ಬಳಿಕ ಹೊಂದಾಣಿಕೆಯಲಾಗಿಲ್ಲ. ಪ್ರತಿ ವರ್ಷ ನಷ್ಟ ಅನುಭವಿಸುವಂತಾಗಿದೆ’ ಎಂದು ಹನುಮಂತಪುರ ರೈತ ನಾಗರಾಜ್‌ ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು