ಮಗನ ಹತ್ಯೆಗೆ ₹2 ಲಕ್ಷ ಸುಪಾರಿ ನೀಡಿದ ತಂದೆ

ಹಾಸನ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂದೆಯೇ ₹ 2 ಲಕ್ಷ ಸುಪಾರಿ ನೀಡಿ ಮಗನನ್ನು ಗುಂಡಿಕ್ಕಿ ಹತ್ಯೆ ಮಾಡಿಸಿದ ಪ್ರಕರಣ ಬೇಧಿಸಿರುವ ಚನ್ನರಾಯಪಟ್ಟಣ ಪೊಲೀಸರು, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ಜಿ.ಹೊಸೂರು ಗ್ರಾಮದ ಹೇಮಂತ (48), ಆತನ ಮಗ ಪ್ರಶಾಂತ್ (23), ಶ್ರವಣಬೆಳಗೊಳ ಹೋಬಳಿ ಹೊಸಳ್ಳಿ ಗ್ರಾಮದ ಕಾಂತರಾಜು (52), ಶ್ರೀಕಂಠನಗರದ ಸುನಿಲ್ (27),ಹೊಸೂರು ಗ್ರಾಮದ ಪ್ರಶಾಂತ್, ಸಾಣೇನಹಳ್ಳಿ ಗ್ರಾಮದ ನಂದೀಶ ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನ ನಾರಾಯಣಪುರ ಗ್ರಾಮದ ಎನ್.ಸಿ. ನಾಗರಾಜನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬಂದೂಕು, ಮಾರುತಿ ವ್ಯಾನ್, ಮೂರು ದ್ವಿಚಕ್ರ ವಾಹನ, ಐದು ಮೊಬೈಲ್ ಫೋನ್, ₹ 1.88 ಲಕ್ಷ ನಗದು ಸೇರಿ ₹ 7 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ತಿಳಿಸಿದರು.
ಚನ್ನರಾಯಪಟ್ಟಣ ತಾಲ್ಲೂಕಿನ ಜಿ.ಹೊಸೂರು ಗ್ರಾಮದ ಹೇಮಂತ್ ಮತ್ತು ಯಶೋದಮ್ಮ ದಂಪತಿ ಕೌಟುಂಬಿಕ ಕಲಹದಿಂದ ಪ್ರತ್ಯೇಕವಾಗಿ ವಾಸವಿದ್ದರು. ಹಿರಿಯ ಮಗ ಪುನೀತ್ ಜೊತೆಗೆ ಯಶೋಧಮ್ಮ ಬೇಡಿಗನಹಳ್ಳಿಯಲ್ಲಿ ವಾಸವಿದ್ದರೆ, ಕಿರಿಯ ಮಗ ಪ್ರಶಾಂತ್‌ನೊಂದಿಗೆ ತಂದೆ ಹೊಸೂರು ಗ್ರಾಮದಲ್ಲಿ ವಾಸವಿದ್ದರು.
ಯಶೋದಮ್ಮ ಅವರಿಗೆ ಜೀವನಾಂಶ ಕೊಡದ ಕಾರಣ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಈ ವಿಚಾರವಾಗಿ ಗ್ರಾಮಸ್ಥರು ಅನೇಕ ಬಾರಿ ರಾಜಿ ಸಂಧಾನ ಮಾಡಿಸಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪುನೀತ್ ಲಾಕ್‌ಡೌನ್ ಸಮಯದಲ್ಲಿ ಊರಿಗೆ ವಾಪಸ್ ಆಗಿದ್ದ. ಜಿ.ಹೊಸೂರು ಗ್ರಾಮದ ತನ್ನ ತಂದೆಯ ಜಮೀನಿನ ತೆಂಗಿನ ತೋಟದಲ್ಲಿ ಎರಡು ಬಾರಿ ತೆಂಗಿನಕಾಯಿ ಕೆಡವಿದ್ದ, ಅಲ್ಲದೇ ಹೇಮಂತ ಪರಸ್ತ್ರೀ ಸಹವಾಸ ಮಾಡಿದ್ದ ಕಾರಣಕ್ಕೆ ತಂದೆ, ಮಗನ ನಡುವೆ ಜಗಳ ನಡೆದಿತ್ತು. ಇದೇ ವಿಚಾರಕ್ಕೆ ಮಗನಿಗೆ ಒಂದು ಗತಿ ಕಾಣಿಸುವುದಾಗಿ ತಂದೆ ಹೇಳಿಕೊಂಡು ಓಡಾಡುತ್ತಿದ್ದ ಎಂದು ಎಸ್‌ಪಿ ವಿವರಿಸಿದರು.
ಪುನೀತ್ ಹತ್ಯೆಗಾಗಿ ಹೇಮಂತ್, ಪ್ರಶಾಂತ್ ಮತ್ತು ಕಾಂತರಾಜು ಆರೇಳು ತಿಂಗಳಿಂದ ಸಂಚು ರೂಪಿಸಿದ್ದಾರೆ. ಬಳಿಕ
ಸುನಿಲ್ ಮತ್ತು ನಂದೀಶನಿಗೆ ₹2 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಾರೆ. ಕೆ.ಆರ್.ಪೇಟೆಯ ಬಂದೂಕು ರಿಪೇರಿ ಮಾಡುವ ನಾಗರಾಜ್ ನಿಂದ ಬಂದೂಕು ಪಡೆದು, ಆ.27 ರ ಸಂಜೆ 6 ಗಂಟೆಗೆ ಜಿ.ಹೊಸೂರು ಮತ್ತು ಬೇಡಿಗನಹಳ್ಳಿ ನಡುವಿನ ಕೆರೆ ಏರಿಯ ಮೇಲೆ ಬೈಕ್‌ನಲ್ಲಿ ಬರುತ್ತಿದ್ದ ಪುನೀತ್ ಮೇಲೆ ಸುನಿಲ್ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದ ಎಂದು ಹೇಳಿದರು.
ಕೊಲೆ ಪ್ರಕರಣದಲ್ಲಿ ತಂದೆಯ ಮೇಲೆ ಅನುಮಾನ ಇದ್ದರೂ ಬಲವಾದ ಸಾಕ್ಷ್ಯಾಧಾರ ಸಿಗದ ಕಾರಣ ಕ್ರಮ ಕೈಗೊಳ್ಳಲು
ಸಾಧ್ಯವಾಗಿರಲಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಎರಡು ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಲಾಯಿತು. ಮಾಹಿತಿದಾರರು ನೀಡಿದ ಸುಳಿವಿನ ಮೇರೆಗೆ ಸುನಿಲ್ ಹಾಗೂ ನಂದೀಶನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣಕ್ಕಾಗಿ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಗನ ಹತ್ಯೆಗಾಗಿ ಚಿನ್ನಾಭರಣಗಳನ್ನು ಅಡವಿಟ್ಟು ₹ 2 ಲಕ್ಷ ತಂದಿದ್ದ ಹೇಮಂತ, ಮುಂಗಡವಾಗಿ ₹5001 ಮಾತ್ರ ನೀಡಿ, ಉಳಿದ ಹಣವನ್ನು ಮನೆಯಲ್ಲಿ ಇಟ್ಟಿದ್ದ ಎಂದು ತಿಳಿಸಿದರು.
ಕೃತ್ಯಕ್ಕೆ ಬಂದೂಕು ಪೂರೈಕೆ ಮಾಡಿದ ನಾಗರಾಜ್ ನಿಂದ ಐದು ಬಂದೂಕು ವಶಪಡಿಸಿಕೊಳ್ಳಲಾಗಿದೆ. ಈತ ನೀಡಿದ
ದಾಖಲೆಗಳು ಸರಿಯಾಗಿಲ್ಲ. ವಿಚಾರಣೆ ನಡೆಯುತ್ತಿದೆ ಎಂದರು.
ಆರೋಪಿ ಪತ್ತೆ ಕಾರ್ಯದಲ್ಲಿ ಡಿವೈಎಸ್ಪಿ ಲಕ್ಷ್ಮೇಗೌಡ, ಚನ್ನರಾಯಪಟ್ಟಣ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಹಾಸನ ಘಟಕ ಡಿಸಿಐಬಿ ಪೊಲೀಸ್ ಇನ್‌ಸ್ಪೆಕ್ಟರ್ ಇ.ವಿ. ವಿನಯ್, ಎಸ್‌ಐ ವಿನೋದ್ ರಾಜ್, ಹಿರೀಸಾವೆ ಠಾಣೆ ಪಿಎಸ್‌ಐ ಶ್ರೀನಿವಾಸ್ ಹಾಗೂ ಪ್ರೊಬೇಷನರಿ ಪಿಎಸ್‌ಐ ಸಿ.ಆರ್. ಕಾವ್ಯ, ಸಿಬ್ಬಂದಿಗಳಾದ ಎಎಸ್‌ಐ ಕುಮಾರಸ್ವಾಮಿ, ಜವರೇಗೌಡ, ಸುರೇಶ್, ಎಚ್.ಆರ್. ಜಯಪ್ರಕಾಶ ನಾರಾಯಣ, ಮಹೇಶ್, ಅರುಣ, ನಾಗೇಂದ್ರ, ಬೀರಲಿಂಗ, ಎಂ.ಎನ್. ಶರತ್‌ಕುಮಾರ, ವೈ.ಎನ್. ಗವೀಶ್, ಗೌರಮ್ಮ ಮಹೇಶ್ ಶ್ರಮಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.