ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬೆ ದರ್ಶನಕ್ಕೆ ಭಕ್ತರ ಮಹಾಪೂರ

ಶಾಸಕ ರೇವಣ್ಣ, ಸಂಸದ ಪ್ರಜ್ವಲ್‌ ಮತ್ತು ಬ್ರಹ್ಮಾಂಡ ಗುರೂಜಿ ದರ್ಶನ
Last Updated 18 ಅಕ್ಟೋಬರ್ 2019, 13:48 IST
ಅಕ್ಷರ ಗಾತ್ರ

ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಶಕ್ತಿದೇವತೆ ದರ್ಶನ ಪಡೆದು ಪುನೀತರಾದರು.

ಶಾಸ್ತ್ರೋಕ್ತವಾಗಿ ಸಾರ್ವಜನಿಕ ದರ್ಶನ ಶುಕ್ರವಾರ ಬೆಳಗ್ಗೆಯಿಂದ ಆರಂಭಗೊಂಡಿತು. ಗರ್ಭಗುಡಿ ಬಾಗಿಲು ತೆರೆದ ಮೊದಲ ದಿನ ಸಾರ್ವಜನಿಕ ದರ್ಶನ ಇರಲಿಲ್ಲ. ಹಾಗಾಗಿ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಸಾಗಿ ದೇವಿಯ ದರ್ಶನ ಪಡೆದು ಧನ್ಯತಾಭಾವ ಮೆರೆದರು.

ಶನಿವಾರ ಮತ್ತು ಭಾನುವಾರ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಶಾಸಕ ಎಚ್‌.ಡಿ.ರೇವಣ್ಣ ಕುಟುಂಬದವರು ದೇವಿ ದರ್ಶನ ಪಡೆದರು. ಸಂಸದ ಪ್ರಜ್ವಲ್ ರೇವಣ್ಣ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, ಅವರ ಪುತ್ರ ಸೂರಜ್ ರೇವಣ್ಣ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಿಗೆ ರವಿಕೆ ಕಣ ಅರ್ಪಿಸಲಾಯಿತು.

ದಿ.ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ಪತ್ನಿ ಹಾಗೂ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ದರ್ಶನ ಪಡೆದರು.

ಗುರುವಾರವೇ ದೇವಿ ವಿಶ್ವರೂಪ ನೋಡಲು ಜನರು ಮುಗಿಬಿದ್ದಿದ್ದರು. ಗರ್ಭಗುಡಿ ಬಾಗಿಲು ತೆರೆದ ನಂತರ ಕೆಲ ಸಮಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸಂಜೆ ಧಾರ್ಮಿಕ ವಿಧಿವಿಧಾನಗಳ ರೀತಿ ದೇವಿಗೆ ಮಡಿವಾಳ ಸಮದಾಯದವರು ಹುಣಸಿನಕೆರೆಯಲ್ಲಿ ಮಡಿ ಮಾಡಿ ತಂದ ವಸ್ತ್ರಗಳು ಹಾಗೂ ಖಜಾನೆಯಿಂದ ತಂದಿರಿಸಿದ್ದ ಆಭರಣ ಧಾರಣೆ, ಪ್ರಥಮ ಪೂಜೆ, ಗರ್ಭಗುಡಿಗೆ ಸುಣ್ಣ ಬಳಿಯುವ ಕೆಲಸ ಮುಗಿಸಿದರು. ಬೆಳಗ್ಗೆ ನೈವೇದ್ಯ, ಅಭಿಷೇಕ ಜರುಗಿತು.

ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 20 ಲೀಟರ್‌ ಕ್ಯಾನ್‌ಗಳಲ್ಲಿ ಶುದ್ಧ ನೀರಿನ ಪೂರೈಕೆ ಮಾಡಲಾಗುತ್ತಿದೆ. ಸ್ವಯಂ ಸೇವಕರು, ಸ್ಕೌಟ್ಸ್‌, ಗೈಡ್ಸ್‌ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತಿರುವ ಭಕ್ತರ ಬಳಿಗೆ ಹೋಗಿ ಕುಡಿಯುವ ನೀರು ಹಾಗೂ ಮಜ್ಜಿಗೆ ಪೂರೈಸುತ್ತಿದ್ದಾರೆ.

ದೇವಾಲಯದ ಒಳ ಆವರಣದಲ್ಲಿ ತಾತ್ಕಾಲಿಕ ಔಷಧಾಲಯ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಎರಡು ಪಾಳಿಯಲ್ಲಿ 100ಕ್ಕೂ ಹೆಚ್ಚು ಸ್ವಯಂ ಸೇವಕರು ಭಕ್ತರಿಗೆ ನೆರವಾಗಲಿದ್ದಾರೆ. ಎರಡನೇ ದಿನ ₹ 300, ₹ 1000 ಟಿಕೆಟ ಹಾಗೂ ಲಾಡು ಮಾರಾಟದಿಂದ ₹7,26,400 ಹಣ ಸಂಗ್ರಹವಾಗಿದೆ.

ಸಂಜೆ ತುಂತುರು ಮಳೆಯಿಂದಾಗಿ ದರ್ಶನಕ್ಕೆ ಅಡ್ಡಿಯಾಯಿತು. ತುಂತುರು ಮಳೆಯ ನಡುವೆಯೇ ಭಕ್ತರು ದೇವಾಲಯದತ್ತ ಹೋಗುವುದನ್ನು ಮುಂದುವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT