ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಒಂದು ದಿನದ ದುಡಿಮೆ ಬಿಟ್ಟ ಚಾಲಕರು, ಭಕ್ತರಿಗೆ ಉಚಿತ ಆಟೊ ಸೇವೆ

Last Updated 24 ಅಕ್ಟೋಬರ್ 2019, 11:30 IST
ಅಕ್ಷರ ಗಾತ್ರ

ಹಾಸನ: ಶಕ್ತಿ ದೇವತೆ ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ನಗರದ ಆಟೊ ಚಾಲಕರು ಉಚಿತ ಪ್ರಯಾಣ ಸೇವೆ ಒದಗಿಸಿದ್ದಾರೆ.

ದೇವಿ ದರ್ಶನಕ್ಕೆ ಬರುವ ಭಕ್ತರಿಗಾಗಿ 20 ಆಟೊಗಳನ್ನು ಮೀಸಲಿಡಲಾಗಿದೆ. ಸರದಿ ಪ್ರಕಾರ ಪ್ರತಿ ಚಾಲಕರಿಗೂ ಒಂದೊಂದು ದಿನ ಉಚಿತ ಸೇವೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ತಮ್ಮ ಒಂದು ದಿನದ ದುಡಿಮೆಯನ್ನು ಹಾಸನಾಂಬೆಗೆ ಅರ್ಪಿಸಿದ್ದಾರೆ.

ಬಸ್‌ ನಿಲ್ದಾಣ, ರೈಲು ನಿಲ್ದಾಣ ಹಾಗೂ ವಿವಿಧ ಬಡಾವಣೆಗಳಿಂದ ಬರುವ ಭಕ್ತರನ್ನುಆಟೊದಲ್ಲಿ ಕರೆ ತರಲಾಗುತ್ತಿದೆ. ದೇವಿ ದರ್ಶನ ಪಡೆದು ತಮ್ಮ ಊರಿಗೆ ಹೋಗುವವರನ್ನು ಬಸ್‌ ನಿಲ್ದಾಣ, ರೈಲು ನಿಲ್ದಾಣಕ್ಕೆ ಬಿಡಲಾಗುತ್ತದೆ. ಆಟೊಗಳಿಗೆ ಉಚಿತ ಪ್ರಯಾಣ ಎಂಬ ಬರಹದ ಬ್ಯಾನರ್‌ ಹಾಕಲಾಗಿದೆ.

ಬೆಳಗ್ಗೆ 6 ರಿಂದ 9ರವರೆಗೆ ಉಚಿತ ಆಟೊ ಸೇವೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯಕ್ಕೆ ಹೋಗುವ ಭಕ್ತರನ್ನು ಆಟೊ ಚಾಲಕರು ಕೂಗಿ ಕರೆಯುತ್ತಿದ್ದ ದೃಶ್ಯ ಕಂಡು ಬಂತು.

ಆಟೊ ಚಾಲಕರ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ದಾವಣಗೆರೆ, ಶಿವಮೊಗ್ಗ, ಮೈಸೂರು, ಬೆಂಗಳೂರು ಭಾಗದಿಂದ ಭಕ್ತರು ಸಂತಸ ವ್ಯಕ್ತಪಡಿಸಿದರು.

ಆಟೊ ಚಾಲಕ ಮೋಹನ್‌ ಮಾತನಾಡಿ, ‘ಹಲವು ಚಾಲಕರು ಹತ್ತು ವರ್ಷಗಳಿಂದ ಉಚಿತ ಸೇವೆ ಒದಗಿಸುತ್ತಿದ್ದಾರೆ. ನಾನು ಮೂರು ವರ್ಷದಿಂದ ಒಂದು ದಿನದ ದುಡಿಮೆಯನ್ನು ದೇವಿಗೆ ಅರ್ಪಿಸುತ್ತಿದ್ದೇನೆ. ಒಂದು ದಿನವಾದರೂ ತಾಯಿ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ಸಮಾಧಾನ ಉಂಟು ಮಾಡಿದೆ’ ಎಂದು ವಿವರಿಸಿದರು.

‘ಪ್ರತಿ ದಿನ ಭಕ್ತರನ್ನು ಕರೆತರಲು ಹಾಗೂ ವಾಪಸ್‌ ಬಿಡಲು 20 ಆಟೊಗಳನ್ನು ಬಿಡಲಾಗಿದೆ. ಮುಂದಿನ ವರ್ಷ ಜಾತ್ರೆ ಮುಗಿಯವವರೆಗೂ ಪ್ರತಿ ದಿವೂ ಉಚಿತ ಸೇವೆ ಒದಗಿಸುವ ಕುರಿತು ಚಿಂತನೆ ನಡೆಸಲಾಗಿದೆ’ ಎಂದರು.

‘ತಾಯಿಗೆ ಒಂದು ದಿನ ಸೇವೆ ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಹಾಸನಾಂಬೆ ಬಗ್ಗೆ ಹೊರ ಜಿಲ್ಲೆಯ ಜನರು ಹೆಚ್ಚು ತಿಳಿಯಲಿ ಎಂಬ ಉದ್ದೇಶದಿಂದ ದೇವಿಯ ಮಹತ್ವ ಸಾರುವ ಹಾಡುಗಳನ್ನು ಪ್ರಯಾಣ ಸಂದರ್ಭದಲ್ಲಿ ಹಾಕಲಾಗುತ್ತದೆ’ ಎಂದು ಆಟೊ ಚಾಲಕ ಕಿರಣ್‌ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT