ಮಂಗಳವಾರ, ಮಾರ್ಚ್ 9, 2021
31 °C
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ತಡೆ: ರೇವಣ್ಣ

ಅನುದಾನ ನೀಡದಿದ್ದರೆ ಸಿ.ಎಂ ಮನೆ ಮುಂದೆ ಧರಣಿ: ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಕಾಮಗಾರಿಗಳಿಗೆ ಸರ್ಕಾರ
ಅನುದಾನ ನೀಡದಿದ್ದರೆ ಜೆಡಿಎಸ್‌ ಶಾಸಕರೊಂದಿಗೆ ಜನವರಿ ಎರಡನೇ ವಾರದ ನಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದು ಶಾಸಕ ಎಚ್‌.ಡಿ ರೇವಣ್ಣ ಎಚ್ಚರಿಕೆ ನೀಡಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಗೆ ಹೊಸ ಕಾಮಗಾರಿ ಮಂಜೂರು ಮಾಡಿಲ್ಲ. ಮಂಜೂರಾಗಿದ್ದ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗೆ ಸ್ಥಳೀಯ ಶಾಸಕ ಸರ್ಕಾರಕ್ಕೆ ಪತ್ರ ಬರೆದ ಕಾರಣ ಅದನ್ನು ತಡೆ ಹಿಡಿಯಲಾಗಿದೆ. ಜಿಲ್ಲೆಯ ಆರು ಜನ ಜೆಡಿಎಸ್‌ ಶಾಸಕರ ಕ್ಷೇತ್ರಗಳ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. 18 ತಿಂಗಳಿನಿಂದ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಬೇರೆ ಜಿಲ್ಲೆಗಳಲ್ಲಿ ಕೋಟ್ಯಂತರ ರೂಪಾಯಿ ಕಾಮಗಾರಿಗಳು ನಡೆಯುತ್ತಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಎಚ್‌.ಡಿ. ಕುಮಾರಸ್ವಾಮಿ ಅವರು ಸಿ.ಎಂ ಆಗಿದ್ದಾಗ ಅನುಮೋದನೆಗೊಂಡಿದ್ದ ಹಾಸನದ ಗ್ರೀನ್‌ ಫಿಲ್ಡ್‌ ಏರ್‌ಪೋರ್ಟ್
ಸ್ಥಾಪಿಸುವ ಕಾಮಗಾರಿ, ಚಿಕ್ಕಮಗಳೂರು-ಬೇಲೂರು, ಬೇಲೂರು-ಆಲೂರು ನಡುವಿನ ರೈಲ್ವೆ ಮಾರ್ಗದ ಯೋಜನೆ, ನಗರದ ಚನ್ನಪಟ್ಟಣ ಕೆರೆಯ ಅಂಗಳದಲ್ಲಿ ವಿಹಾರಧಾಮ ಮತ್ತು ಉದ್ಯಾನ ನಿರ್ಮಾಣ ಕಾಮಗಾರಿ, ಹಾಸನದಲ್ಲಿ ನೂತನ ಕಾರಾಗೃಹ ಸ್ಥಾಪನೆ ಕಾಮಗಾರಿಯನ್ನು ತಡೆ ಹಿಡಿಯಲಾಗಿದೆ ಎಂದು ಮಾಹಿತಿ ನೀಡಿದರು.

ಗೊರೂರು ಹೇಮಾವತಿ ಜಲಾಶಯ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಗೆ ಒಳಪಡುವ ಹಾಸನ ಜಿಲ್ಲೆಯ ಸಕಲೇಶಪುರ,
ಅರಕಲಗೂಡು ಮತ್ತು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕೃಷಿ ಭೂಮಿಗೆ ನೀರುಣಿಸುವ ಕಾಮಗಾರಿಯನ್ನು
ತಡೆಹಿಡಿಯಲಾಗಿದೆ ಎಂದು ತಿಳಿಸಿದರು.

ಸೋಮನಹಳ್ಳಿ ಕಾವಲು ತೋಟಗಾರಿಕೆ ಕ್ಷೇತ್ರದಲ್ಲಿ ಹೊಸದಾಗಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸಲು ಸಚಿವ
ಸಂಪುಟದಲ್ಲಿ ಅನುಮೋದನೆ ದೊರೆತಿತ್ತು. ನಗರದ ಗಂಧದ ಕೋಟಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 500 ಸಂಖ್ಯಾ ಬಲದ ಬಾಲಕಿಯರ ವಸತಿ ನಿಲಯ ನಿರ್ಮಿಸುವ ಕಾಮಗಾರಿ ಸಹ ಸ್ಥಗಿತ ಮಾಡಲಾಗಿದೆ ಎಂದರು.

ಹಾಸನ ಕೆ.ಎಸ್‌.ಆರ್‌.ಟಿ.ಸಿ ಪ್ರಾದೇಶಿಕ ಕಾರ್ಯಗಾರವನ್ನು ₹45 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಟೆಂಡರ್‌ ಕರೆಯಲಾಗಿತ್ತು. ಹೊಳೆನರಸೀಪುರ ಪುರಸಭೆಯಿಂದ ಕೈಗೊಂಡಿರುವ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಪೀಠೋಪಕರಣ, ಪಾಠೋಪಕರಣ, ಶಿಕ್ಷಕರು ಮತ್ತು ಉಪನ್ಯಾಸಕರ ಕೊರತೆಯಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಶಿಕ್ಷಣಕ್ಕಾಗಿ ₹2 ಸಾವಿರ ಕೋಟಿ ಹೆಚ್ಚುವರಿ ಮೀಸಲಿಡಬೇಕು. ಬಡ ಮಕ್ಕಳಿಗೆ ತೊಂದರೆ ನೀಡಿದರೆ ಅವರ ಪೋಷಕರ ಶಾಪ ತಟ್ಟದೆ ಇರುವುದಿಲ್ಲ ಎಂದರು.

ಜ. 1 ರಿಂದ ತರಗತಿ ಪ್ರಾರಂಭಿಸುವ ಬದಲು ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಶಾಲೆ ಆರಂಭಿಸುವ ಔಚಿತ್ಯವೇನು ? ಖಾಸಗಿಯವರ ಮುಲಾಜಿಗೆ ಒಳಗಾಗಿ ಆಡಳಿತ ನಡೆಸುವುದು ಯಾವ ನ್ಯಾಯ? ಹೊಸದಾಗಿ 3 ಸಾವಿರ ಖಾಸಗಿ ಶಾಲೆ ಸ್ಥಾಪನೆಗೆ ಅನುಮತಿ ನೀಡುವ ಬದಲು ಸರ್ಕಾರಿ ಶಾಲೆಗಳನ್ನೇತೆರೆಯಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು