ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಮತ್ತೆ ಎಚ್‌ಡಿಸಿಸಿ ಚುಕ್ಕಾಣಿ

ಬಿಜೆಪಿ ಆಸೆಗೆ ತಣ್ಣೀರು: ನಾಲ್ಕು ಅಭ್ಯರ್ಥಿಗಳಿಗೂ ಗೆಲುವು
Last Updated 25 ಸೆಪ್ಟೆಂಬರ್ 2020, 16:04 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಚ್‌ಡಿಸಿಸಿ) ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ನಾಲ್ವರು ಅಭ್ಯರ್ಥಿಗಳು ಗೆಲ್ಲುವ ಸಾಧಿಸಿದ್ದಾರೆ. ಈ ಮೂಲಕ ಬ್ಯಾಂಕ್‌ನಲ್ಲಿ ಜೆಡಿಎಸ್ ಮತ್ತೊಮ್ಮೆ ಬಿಗಿ ಹಿಡಿತ ಸಾಧಿಸಿದೆ.

ಒಟ್ಟು 13 ನಿರ್ದೇಶಕರ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು. ಉಳಿದ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅದರಂತೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಪೊಲೀಸ್ ಬಿಗಿ ಭದ್ರತೆಯ ನಡುವೆ ಮತದಾನ ನಡೆಯಿತು. ಜೆಡಿಎಸ್ ಬೆಂಬಲಿತರಾದ ಪಟೇಲ್ ಶಿವರಾಂ, ಗಿರೀಶ್ ಎಚ್.ಸಿ., ಬಿದರಕೆರೆ ಜಯರಾಂ ಮತ್ತು ಬಂಡಿಗೌಡ್ರು ರಾಜಣ್ಣ ಆಯ್ಕೆಯಾದರು.

ಈ ಬಾರಿ ಬ್ಯಾಂಕ್ ಚುನಾವಣೆಯಲ್ಲಿ ಖಾತೆ ತೆರೆಯಬೇಕು ಎಂದು ನಿರ್ಧರಿಸಿ ನಾಲ್ಕು ಕಡೆಗಳಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಬೆಂಬಲಿತರಿಗೆ ತೀವ್ರ ನಿರಾಶೆಯಾಗಿದೆ.

ತೀವ್ರ ಪೈಪೋಟಿಯ ಕಣವಾಗಿದ್ದ ಪಟ್ಟಣ ಸಹಕಾರ ಬ್ಯಾಂಕ್ ಮತ್ತು ವ್ಯವಸಾಯೇತರ ಪತ್ತಿನ ಸಹಕಾರ ಸಂಘ ಕ್ಷೇತ್ರದಿಂದ ಗಿರೀಶ್ ಚನ್ನವೀರಪ್ಪ ಗೆಲುವು ಸಾಧಿಸಿದ್ದಾರೆ. ಗಿರೀಶ್ 27 ಮತ ಪಡೆದರೆ ಪ್ರತಿಸ್ಪರ್ಧಿ ಸಾಹಿತಿ ನಾಗೇಶ್ 6 ಪಡೆದರು.

ಹಾಸನ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಪಟೇಲ್ ಶಿವರಾಂ 29 ಮತ ಪಡೆದು ಗೆಲುವಿನ ನಗೆ ಬೀರಿದರು. ಪ್ರತಿಸ್ಪರ್ಧಿ ಎ.ವಿ.ದೇವೇಂದ್ರ 6 ಮತ ಪಡೆಯಲಷ್ಟೇ ಶಕ್ತರಾದರು.

ಅರಸೀಕೆರೆ ತಾಲೂಕು ಕೃಷಿ ಪತ್ತಿನ ಸಹಕಾರ ಸಂಘದಿಂದ ರಾಜಣ್ಣ ಬಿ. 18 ಮತ ಪಡೆ ವಿಜೇತರಾದರೆ, ಇವರ ವಿರುದ್ಧ ಕಣಕ್ಕಿಳಿದಿದ್ದ ವಕೀಲ ಮೋಹನ್ ಕುಮಾರ್ 6 ಮತ ಪಡೆದರು.

ಬ್ಯಾಂಕಿನ ಕಾರ್ಯವ್ಯಾಪ್ತಿಯ ಎಲ್ಲಾ ಇತರೆ ಸಹಕಾರಿ ಸಂಘಗಳ ಕ್ಷೇತ್ರದಿಂದ ಬಿದರೆಕೆರೆ ಜಯರಾಂ 20 ಮತ ಪಡೆದು ಜಯಶಾಲಿಯಾದರೆ, ಬ್ಯಾಂಕ್ ನ ನಿವೃತ್ತ ಅಧಿಕಾರಿ ಪುಟ್ಟರಾಜೇಗೌಡ 7 ಮತ ಪಡೆದು ಪರಾಭವಗೊಂಡರು.

ಅವಿರೋಧ ಆಯ್ಕೆಯಾದವರು: ಚನ್ನರಾಯಪಟ್ಟಣ ವಿಎಸ್‌ಎಸ್‌ಎನ್ ನಿಂದ ಹಾಲಿ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ, ಅರಕಲಗೂಡು ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೇತ್ರದಿಂದ ಹೊನ್ನವಳ್ಳಿ ಸತೀಶ್, ಬೇಲೂರು ವಿಎಸ್‌ಎಸ್‌ಎನ್‌ನಿಂದ ಎಂ.ಎ.ನಾಗರಾಜ್, ಹೊಳೆನರಸೀಪುರ ವಿಎಸ್‌ಎಸ್‌ಎನ್ ನಿಂದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪುತ್ರ ಡಾ.ಸೂರಜ್, ಟಿಎಪಿಸಿಎಂಸ್ ಕ್ಷೇತ್ರದಿಂದ ದುದ್ದಹೋಬಳಿ ಚನ್ನೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಮತ್ತು ಪಾಪಣ್ಣಿ (ದೇವೇಗೌಡ), ಗ್ರಾಹಕರ ಕ್ಷೇತ್ರದಿಂದ ಹೊನ್ನಶೆಟ್ಟಿಹಳ್ಳಿ ಪುಟ್ಟಸ್ವಾಮಿಗೌಡ, ಆಲೂರು, ಸಕಲೇಶಪುರ ವ್ಯವಸಾಯೋತ್ಪನ್ನ ಸಹಕಾರಿ ಕ್ಷೇತ್ರದಿಂದ ಜಗದೀಶ್ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT