ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಮೈ ಕೊರೆಯುವ ಚಳಿಗೆ ನಡುಗಿದ ಜನತೆ

ಜಿಲ್ಲೆಯಲ್ಲಿ ಉಷ್ಣಾಂಶ ಕುಸಿತ, ನಸುಕಿನಿಂದಲೇ ಅತ್ಯಧಿಕ ಮಂಜು ಕವಿದ ವಾತಾವರಣ
Last Updated 22 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಹಾಸನ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಉಷ್ಣಾಂಶ ಕುಸಿದಿದ್ದು, ಮೈಕೊರೆಯುವ ಚಳಿಗೆ ಸಾರ್ವಜನಿಕರು ನಡುಗುತ್ತಿದ್ದಾರೆ.

ನಸುಕಿನಿಂದಲೇ ಅತ್ಯಧಿಕ ಮಂಜು ಆವರಿಸಿಕೊಳ್ಳುತ್ತಿದೆ. ಬುಧವಾರ ಬೆಳಿಗ್ಗೆ ಹಾಸನ ನಗರ, ಸಕಲೇಶಪುರ, ಆಲೂರು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮಂಜು ಕವಿದಿದ್ದು, ‘ಬಡವರ ಊಟಿ’ ಮಂಜಿನ ನಗರಿಯಂತೆ ಕಂಡು ಬಂತು.

ಎರಡರಿಂದ ಮೂರಡಿ ಅಂತರದಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗದಷ್ಟು ಪ್ರಮಾಣದಲ್ಲಿಮಂಜು ದಟ್ಟವಾಗಿ ಕವಿದಿತ್ತು. ವಾಹನ ಸವಾರರು ಹೆಡ್‌ಲೈಟ್‌ ಬೆಳಕಿನಲ್ಲೂ ಸಂಚರಿಸಲುಪರದಾಡಿದರು.

ನಗರದಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ತೆರಳುವ ಜನರು ಸ್ವೆಟರ್‌, ಟೋಪಿಗಳನ್ನು ಧರಿಸಿರುವ ದೃಶ್ಯ ಕಂಡು ಬಂತು. ಅಕ್ಟೋಬರ್, ನವೆಂಬರ್‌ನಲ್ಲೂ ಅಕಾಲಿಕ ಮಳೆಯಿಂದಾಗಿ ನದಿ, ತೊರೆಗಳಲ್ಲಿ ನೀರು ಹರಿಯುತ್ತಿದೆ. ಕೆರೆಗಳು ಭರ್ತಿಯಾಗಿವೆ. ಇದರಿಂದಾಗಿ ತೇವಾಂಶ ವಾತಾವರಣ ಹೆಚ್ಚಳ ವಾಗಿದ್ದು, ಚಳಿ ಮೈ ಕೊರೆಯುತ್ತಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರು ಬೆಳಿಗ್ಗೆ ಮತ್ತು ಸಂಜೆ ಬೆಂಕಿ ಹೊತ್ತಿಸಿಕೊಂಡುಮೈ ಕಾಯಿಸಿಕೊಳ್ಳುತ್ತಾ ಚಳಿಯಿಂದ ರಕ್ಷಣೆ ಪಡೆಯುತ್ತಿದ್ದಾರೆ. ಉದ್ಯಾನ, ಕ್ರೀಡಾಂಗಣಗಳಲ್ಲಿ ವಿಹಾರ ಮಾಡುತ್ತಿದ್ದವರ ಸಂಖ್ಯೆ ಕಡಿಮೆ ಆಗಿದೆ. ವಿಪರೀತ ಚಳಿಗೆ ಜಿಲ್ಲೆಯ ಜನರುಹಾಸಿಗೆಯಿಂದ ಮೇಲೇಳಲು ಕಷ್ಟ ಪಡುತ್ತಿದ್ದಾರೆ.

ಹವಾಮಾನ ಇಲಾಖೆ ಮಾಹಿತಿ ಅನ್ವಯ ಸರಾಸರಿ ಕನಿಷ್ಠ ಉಷ್ಣಾಂಶ ನಾಲ್ಕೈದುದಿನಗಳಿಂದ 11 ರಿಂದ 12 ಡಿಗ್ರಿ ಸೆಲ್ಸಿಯಸ್‌ ನಿಗದಿಯಾಗಿತ್ತು. ಡಿ. 20ರಂದು 11 ಡಿಗ್ರಿಸೆಲ್ಸಿಯಸ್‌ ಇದ್ದ ತಾಪಮಾನ, ಡಿ.21 ಮತ್ತು 22ರಂದು 12 ಡಿಗ್ರಿ ಸೆಲ್ಸಿಯಸ್‌ದಾಖಲಾಗಿತ್ತು.

ಜನರ ಉಡುಗೆ, ತೊಡಗೆಯಲ್ಲೂ ಬದಲಾವಣೆ ಆಗಿದ್ದು, ಸ್ವೆಟರ್‌, ಟೋಪಿಗಳು ಧರಿಸಿಓಡಾಡುತ್ತಿದ್ದಾರೆ. ಬಹುತೇಕರು ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ. ಈ ಬಾರಿಹೆಚ್ಚು ಮಳೆಯಿಂದಾಗಿ ಚಳಿ ಡಿಸೆಂಬರ್‌ವರೆಗೂ ಚಳಿ ಕಾಡುತ್ತಿದೆ. ಸಂಜೆ ಮತ್ತು ರಾತ್ರಿ ಶೀತ ಗಾಳಿ ಎಲ್ಲೆಡೆಬೀಸುತ್ತಿರುವ ಕಾರಣ ಜನರು ಮನೆಯಿಂದ ಹೊರ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.

‘ವಿಪರೀತ ಚಳಿಯಿಂದ ಮುಂಜಾನೆ ವಾಯು ವಿಹಾರಕ್ಕೆ ಹೋಗುತ್ತಿಲ್ಲ. ದಟ್ಟವಾದ ಮಂಜುಆವರಿಸಿರುತ್ತದೆ. ಎದುರು ಬರುವವರು ಕಾಣುವುದಿಲ್ಲ. ಮಧ್ಯಾಹ್ನವೂ ಚಳಿಯ ವಾತಾವರಣ ಇರುತ್ತದೆ. ವೈದ್ಯರ ಸಲಹೆಯಂತೆ ಸಂಜೆ ವೇಳೆ ವಾಯು ವಿಹಾರಕ್ಕೆ ಹೋಗುತ್ತಿದ್ದೇನೆ ’ ಎಂದುಹಿರಿಯ ನಾಗರಿಕರಾದ ರೇಣುಕಾ ತಿಳಿಸಿದರು.

‘ಚಳಿಗಾಲದಲ್ಲಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ನಿರ್ಲಕ್ಷ್ಯ ಮಾಡಿದರೆ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ವೃದ್ಧರು ಮಕ್ಕಳು ಬೆಚ್ಚನೆಯ ಉಡುಪು ಧರಿಸಬೇಕು. ಹೊರಗಿನತಿಂಡಿ ತಿನಿಸು, ಎಣ್ಣೆ ಪದಾರ್ಥ ಮತ್ತು ಮಾಂಸಹಾರ ಸೇವನೆ ಹೆಚ್ಚಾಗಿ ಮಾಡಬಾರದು.ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ತರಕಾರಿಗಳು, ಹಣ್ಣು, ಕಾಳಿನ ಪದಾರ್ಥ ಸೇವಿಸಬೇಕು. ಬಿಸಿ ನೀರು ಸೇವನೆ ಆರೋಗ್ಯಕ್ಕೆ ಒಳ್ಳೆಯದು’ ಎಂದು ವೈದ್ಯ ಸತೀಶ್ ಕುಮಾರ್‌ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT