ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಿದ ಹೆಂಚು, ಸಿಡಿಲಿಗೆ ಹಸು ಸಾವು

ಜಿಲ್ಲೆಯ ವಿವಿಧೆಡೆ ಗಾಳಿ ಸಹಿತ ರಭಸದ ಮಳೆ
Last Updated 21 ಏಪ್ರಿಲ್ 2021, 16:19 IST
ಅಕ್ಷರ ಗಾತ್ರ

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುಡುಗು , ಗಾಳಿ ಸಹಿತ ಬುಧವಾರ ಬಿರುಸಿನ ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಯಸಳೂರಿನಲ್ಲಿ ಮನೆಗಳ ಹೆಂಚು ಹಾರಿ ಹೋಗಿದ್ದರೆ, ವಡೂರಿನಲ್ಲಿ ಸಿಡಿಲು ಬಡಿದು ಹಸು ಮೃತಪಟ್ಟಿದೆ.

ಸಿಡಿಲು ಬಡಿತಕ್ಕೆ ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದ ನಾಗೇಶ್ ಎಂಬುವರಿಗೆ ಸೇರಿದ ನಾಲ್ಕು ವರ್ಷದ ನಾಟಿ ಹಸು ಮೃತಪಟ್ಟಿದೆ. ಹಸುವನ್ನು ಮೇಯಲು ಬಿಟ್ಟಿದ್ದ ವೇಳೆ ಈ ಘಟನೆ ಸಂಭವಿಸಿದೆ.

₹15 ಸಾವಿರ ಬೆಲೆಯ ಹಸು ಸಾವಿನಿಂದ ನಾಗೇಶ್ ಕುಟುಂಬಕ್ಕೆ ನಷ್ಟ ಉಂಟಾಗಿದ್ದು, ಸಂಬಂಧಪಟ್ಟವರು ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಬಾಳ್ಳುಪೇಟೆ ಪುಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ದೀಪಕ್, ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದರು.

ಯಸಳೂರು, ಉಚ್ಚಂಗಿ, ಚಂಗಡಿಹಳ್ಳಿ, ಕೆರೋಡಿ ಭಾಗದಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ಒಂದು ತಾಸಿಗೂ ಹೆಚ್ಚು ಗಾಳಿ ಸಹಿತ ರಭಸದ ಮಳೆಯಾಗಿದ್ದು, ಎರಡು ಮನೆಗಳ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ. ಜೋರು ಮಳೆಯಿಂದ ಚರಂಡಿಯ ನೀರು ಉಕ್ಕಿ ರಸ್ತೆ ಮೇಲೆ ಹರಿಯಿತು. ಇದರಿಂದ ಕೆಲ ಕಾಲ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಹೆತ್ತೂರು, ಹೊಂಗಡಹಳ್ಳ, ಜಾನೇಕೆರೆ, ಕೊಣ್ಣೂರು, ಸುಳ್ಳಕ್ಕಿ ಭಾಗದಲ್ಲಿ ಗಾಳಿ ಮಳೆಯಿಂದ ರೈತರು ಗದ್ದೆಯಲ್ಲಿ ಬೆಳೆದಿದ್ದ ಹಸಿರು ಮೆಣಸಿನಕಾಯಿ ಹಾಗೂ ತರಕಾರಿ ಗಿಡಗಳಿಗೂ ಹಾನಿ ಉಂಟಾಗಿದೆ. ಬೀನ್ಸ್‌ ಬಳ್ಳಿ ಹಬ್ಬಲು ನಿಲ್ಲಿಸಿದ್ದ ಗೂಟಗಳು ನೆಲಕ್ಕೆ ಉರುಳಿ ಬಿದ್ದಿದ್ದು, ರೈತರಿಗೆ ನಷ್ಟ ಉಂಟಾಗಿದೆ.

ಹಾಸನ ನಗರದ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಧ್ಯಾಹ್ನ ಗುಡುಗು ಸಹಿತ ಉತ್ತಮ ಮಳೆಯಾಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಆರಂಭಗೊಂಡ ಜಿಟಿಜಿಟಿ ಮಳೆ ಒಂದು ತಾಸಿಗೂ ಹೆಚ್ಚು ಸುರಿಯಿತು. ಸ್ವಲ್ಪ ಹೊತ್ತು ಬಿಡುವು ನೀಡಿ ಮತ್ತೆ ಸುರಿಯಿತು.

ರೈಲು ನಿಲ್ದಾಣ ರಸ್ತೆ, ಬಿ.ಎಂ. ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿಯೇ ತೊಯ್ದುಕೊಂಡು ಮನೆಗೆ ಹೋಗಲು ಬಸ್ ನಿಲ್ದಾಣಕ್ಕೆ ತೆರಳಿದರು.

ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಮಳೆ ನೀರು ನಿಂತು ಗ್ರಾಹಕರು ತೊಂದರೆ ಅನುಭವಿಸಬೇಕಾಯಿತು. ಮಹಾವೀರ ವೃತ್ತ ಸೇರಿದಂತೆ ಗಾಂಧಿ ಬಜಾರ್‌ ರಸ್ತೆ ಹಾಗೂ ತಗ್ಗು ಪ್ರದೇಶದಲ್ಲಿ ರಸ್ತೆಗಳು ಜಲಾವೃತ್ತಗೊಂಡಿದ್ದವು.

ಶ್ರವಣಬೆಳಗೊಳದಲ್ಲಿ ಮಧ್ಯಾಹ್ನ ಅರ್ಧ ತಾಸು ಗುಡುಗು ಸಹಿತ ರಭಸದ ಮಳೆ ಸುರಿಯಿತು. ಬೇಲೂರು, ಚನ್ನರಾಯಪಟ್ಟಣ, ಆಲೂರು ತಾಲ್ಲುಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT