ಬೆಂಗಳೂರು–ಮಂಗಳೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತ: ಮಾರ್ಗ ಬದಲಿಸಿದ ಸಿಎಂ

ಮೈಸೂರು: ಕೊಡಗು ಹಾಗೂ ಹಾಸನದಲ್ಲಿ ವರುಣನ ಆರ್ಭಟ ಹೆಚ್ಚಿದ ಕಾರಣ ಅರಣ್ಯ ಪ್ರದೇಶಗಳ ಬಳಿ ಹೆದ್ದಾರಿಗೆ ಗುಡ್ಡ ಕುಸಿದು ವಾಹನ ಸಂಚಾರ ಬಂದ್ ಆಗಿತ್ತು.
ಹಾಸನದ ಸಕಲೇಶಪುರದಲ್ಲಿ ಭಾನುವಾರ ಸಂಜೆಯಿಂದ ಸುರಿದ ಭಾರಿ ಮಳೆ ಹಾಗೂ ಬೀಸುಗಾಳಿಗೆ ಬೆಂಗಳೂರು– ಮಂಗಳೂರು ಹೆದ್ದಾರಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರ ನಿಲುಗಡೆಯಾಗಿತ್ತು. ಇಲ್ಲಿನ ದೊಡ್ಡತಪ್ಪಲೆ ಬಳಿ ಗುಡ್ಡವೇ ರಸ್ತೆಗೆ ಕುಸಿದು, ಸೋಮವಾರ ಬೆಳಿಗ್ಗೆ ನೂರಾರು ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಗಿತ್ತು.
ಸಕಲೇಶಪುರ- ಹಾನುಬಾಳು ನಡುವಿನ ವೆಂಕಟಹಳ್ಳಿ– ಹಾನುಬಾಳು, ಆಲವಳ್ಳಿ ಕಡಗರವಳ್ಳಿ ರಸ್ತೆ, ಕಾಡಮನೆ ರಸ್ತೆಯಲ್ಲಿಯೂ ಮರಗಳು ಉರುಳಿದ್ದವು. ಸಂಜೆವರೆಗೂ ಮಣ್ಣು ತೆರವು ಕಾರ್ಯಾಚರಣೆ ನಡೆದು, ಬಳಿಕ ವಾಹನ ಸಂಚಾರ ಆರಂಭವಾಯಿತು.
ಕೊಡಗು: ಕೊಡಗಿನಲ್ಲಿ ಸುರಿದ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 275ರ ಮದೆನಾಡು ಗ್ರಾಮದ ಬಳಿ ಗುಡ್ಡ ಕುಸಿದು ಮಡಿಕೇರಿ– ಮಂಗಳೂರು ಹೆದ್ದಾರಿ ಬಂದ್ ಆಗಿತ್ತು. ಹೆದ್ದಾರಿಯಲ್ಲಿ ಸುಮಾರು 100 ಮೀಟರ್ ಉದ್ದಕ್ಕೂ ಮಣ್ಣು ಬಿದ್ದಿದ್ದ ಕಾರಣ, ಸ್ಥಳದ ಎರಡು ಬದಿಯಲ್ಲೂ ವಾಹನಗಳು ನಿಂತು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು.
ವಾಹನಗಳು ಮಣ್ಣಿನ ಅಡಿ ಸಿಲುಕಿರುವ ಸಂಶಯ ವ್ಯಕ್ತವಾಗಿತ್ತು. ಆದರೆ, ಯಾವುದೇ ಅನಾಹುತವಾಗಿಲ್ಲ. ಮಂಗಳೂರಿಗೆ ತೆರಳಬೇಕಿದ್ದ ವಾಹನಗಳನ್ನು ಕುಶಾಲನಗರದಲ್ಲೇ ತಡೆದು ಹಾಸನ ಹಾಗೂ ಶನಿವಾರಸಂತೆ ಮಾರ್ಗವಾಗಿ ಕಳುಹಿಸಲಾಯಿತು. ಐದು ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ಮಣ್ಣು ತೆರವುಗೊಳಿಸಲಾಯಿತು.
ಅಂತರರಾಜ್ಯ ಸಂಚಾರವೂ ಬಂದ್
ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು– ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲೂ ಭೂಕುಸಿತವಾಗಿದೆ. ಕೊಡಗಿನ ಗಡಿಗ್ರಾಮ ಮಾಕುಟ್ಟದ ಬಳಿ ಬೆಟ್ಟದ ಮೇಲಿಂದ ಬೃಹತ್ ಬಂಡೆಯೊಂದು ರಸ್ತೆಗೆ ಉರುಳಿರುವ ಕಾರಣ ವಾಹನ ಸಂಚಾರ ಬಂದ್ ಆಗಿದೆ.
ಮಾರ್ಗ ಬದಲಿಸಿದ ಕುಮಾರಸ್ವಾಮಿ
ಸೋಮವಾರ ಸಕಲೇಶಪುರ- ಶಿರಾಡಿ ಘಾಟ್ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಬೇಕಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಭೂಕುಸಿತ ಹಿನ್ನೆಲೆಯಲ್ಲಿ ಮಾರ್ಗ ಬದಲಿಸಿ ಮೂಡಿಗೆರೆ– ಚಾರ್ಮಾಡಿ ಘಾಟ್ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.