ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ, ರಸ್ತೆಯಲ್ಲೇ ನೀರು: ಪರದಾಟ

ಕುಸಿದ ಬಾಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಾವಣಿ; ಮನೆಗೆ ನುಗ್ಗಿದ ನೀರು
Last Updated 25 ಅಕ್ಟೋಬರ್ 2021, 3:32 IST
ಅಕ್ಷರ ಗಾತ್ರ

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆಯಿಂದ ಸಾರ್ವಜನಿಕರು ಪರದಾಡುವಂತಾಯಿತು.

ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಒಂದು ತಾಸು ಸುರಿಯಿತು. ಇದರಿಂದನಗರದ ಬಹುತೇಕ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು.

ವಿವಿಧೆಡೆ ಯುಜಿಡಿ ಕಾಮಗಾರಿಗೆ ರಸ್ತೆ ಅಗೆದು ಬಿಟ್ಟಿದ್ದು, ಕಸ್ತೂರಬಾ ರಸ್ತೆ ಸೇರಿದಂತೆ ವಿವಿಧೆಡೆರಸ್ತೆ ಕೆಸರುಮಯವಾಗಿತ್ತು. ಮಹಾವೀರ ವೃತ್ತ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ರಸ್ತೆಯಲ್ಲಿ ನೀರು ಹರಿದು ವಾಹನ ಸವಾರರು ಪರದಾಡುವಂತಾಯಿತು.

ನಗರದ ಎನ್‌.ವೃತ್ತ, ಬಿಎಸ್‌ಎನ್‌ ಎಲ್‌ ಕಚೇರಿ ಮುಂಭಾಗ ತಮ್ಮ ಊರುಗಳಿಗೆ ತೆರಳಲು ಬಸ್‌ ಹಾಗೂ ಇತರೆ ಖಾಸಗಿ ವಾಹನಗಳಿಗೆ ಕಾಯುತ್ತಿದ್ದ ಪ್ರಯಾಣಿಕರು ಮಳೆ ಬಂದಿದ್ದರಿಂದ ಪರದಾಡಬೇಕಾಯಿತು. ಸಂಜೆಯ ನಂತರವೂ ತುಂತುರು ಮಳೆ ಇದ್ದ ಕಾರಣ ಬೀದಿಬದಿ ವ್ಯಾಪಾರಿಗಳು, ಕಟ್ಟಿನಕೆರೆ ಮಾರುಕಟ್ಟೆ ಕಸ್ತೂರ ಬಾ ರಸ್ತೆಯ ಬೀದಿಬದಿ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳಿಗೆ ತೊಂದರೆ ಉಂಟಾಯಿತು.

ಜಿಲ್ಲೆಯಲ್ಲಿ ಮೆಕ್ಕೆಜೋಳ ಕಟಾವು ಹಂತಕ್ಕೆ ಬಂದಿದ್ದು, ಕೆಲವು ದಿನಗಳಿಂದ ನಿರಂತರವಾಗಿ ಬರುತ್ತಿರುವ ಮಳೆಯಿಂದ ಮೊಳಕೆ ಒಡೆಯುವ ಮತ್ತು ಫಂಗಸ್‌ ಬರುವ ಸಾಧ್ಯತೆ ಇದ್ದು, ಬೆಳೆ ಹಾಳಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ. ಇನ್ನೂ ಕೆಲವರು ಈಗಾಗಲೇ ಜೋಳ ಕಟಾವು ಮಾಡಿದ್ದು, ಮಳೆಯಿಂದಾಗಿ ಜೋಳ ಒಣಗಿಸಲು ಸಮಸ್ಯೆ ಎದುರಿಸಬೇಕಾಗಿದೆ.

ರಾತ್ರಿ ವೇಳೆ ಕುಸಿದ ಶಾಲಾ ಕಟ್ಟಡ

ಗಂಡಸಿ: ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಒಂದು ವರ್ಷದ ಹಿಂದೆಯೇ ಶಿಥಿಲಗೊಂಡಿದ್ದ ಗಂಡಸಿ ಹೋಬಳಿ ಬಾಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಸಿದುಬಿದ್ದಿದೆ.

ಈ ಶಾಲೆ ಕಟ್ಟಡದಲ್ಲಿ 1 ರಿಂದ 7ನೇ ತರಗತಿ ವರೆಗೆ 60 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕೋವಿಡ್‌ ಕಾರಣಕ್ಕೆ 1 ರಿಂದ 5ರ ವರೆಗೆ ತರಗತಿ ಆರಂಭವಾಗಿಲ್ಲ. 6 ರಿಂದ 7ನೇ ತರಗತಿ ವರೆಗೆ 28 ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಹಾಜರಾಗುತ್ತಿದ್ದಾರೆ. ಶನಿವಾರ ರಾತ್ರಿ ಶಾಲಾ ಕಟ್ಟಡದ ಚಾವಣಿ ಕುಸಿದು ಬಿದ್ದಿರುವುದರಿಂದ ಭಾರಿ ಅಪಾಯದಿಂದ ಪಾರಾಗಿದ್ದಾರೆ.

‘ಶಾಲಾ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು ಅರಸೀಕೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಸಂಪರ್ಕಿಸಿ ಶಾಲೆಯ ಮೂರು ಕೊಠಡಿಗಳು ಶಿಥಿಲಗೊಂಡಿವೆ ಮಕ್ಕಳ ಹಿತದೃಷ್ಟಿಯಿಂದಶಾಲಾ ಕಟ್ಟಡ ದುರಸ್ತಿ ಮಾಡಿಸಿ ಎಂದು ಮನವಿ ಮಾಡಿದ್ದೇವು. ಆದರೂ ಅಧಿಕಾರಿಗಳು ಸ್ವಂದಿಸದ ಕಾರಣ ಶಾಲಾ ಕಟ್ಟಡ ಕುಸಿದಿದೆ’ ಎಂದು ಪೋಷಕರು ಮತ್ತು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಗಂಡಸಿಯಲ್ಲಿ 8.9 ಸೆಂ.ಮೀ ಮಳೆ

ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆಯವರೆಗೆ ದಾಖಲಾದ ಮಳೆಯಲ್ಲಿ ಅರಸೀಕೆರೆ ತಾಲ್ಲೂಕಿನ ಗಂಡಸಿ 8.9 ಸೆಂ.ಮೀ ಮಳೆಯಾಗಿದ್ದು, ಹೋಬಳಿವಾರು ವಿವರ ಈ ರೀತಿ ಇದೆ.

ಹಾಸನ ತಾಲ್ಲೂಕಿನ ಶಾಂತಿಗ್ರಾಮ 1.6 ಸೆಂ.ಮೀ ಗೊರೂರು 2.5, ಕಟ್ಟಾಯ 1.4, ಸಾಲಗಾಮೆ 2.7, ಕಸಬಾ 2.4, ದುದ್ದ 3 ಸೆಂ.ಮೀ, ಹೊಳೆನರಸೀಪುರ 3.6 ಮಿ.ಮೀ, ಹಳೇಕೋಟೆ 1.2 ಸೆಂ.ಮೀ, ಹಳ್ಳಿಮೈಸೂರು 6.2 ಮಿ.ಮೀ. ಸಕಲೇಶಪುರ ತಾಲ್ಲೂಕಿನ ಹೊಸೂರು 1.0 ಮಿ.ಮೀ, ಮಾರನಹಳ್ಳಿ 1.1 ಮಿ.ಮೀ, ಬಾಳ್ಳುಪೇಟೆ 0.3, ಅರಸೀಕೆರೆ ತಾಲ್ಲೂಕಿನ ಕಸಬಾ 2.7 ಸೆಂ.ಮೀ, ಜಾವಗಲ್ 2.7 ಸೆಂ.ಮೀ, ಬಾಣಾವರ 6 ಸೆಂ.ಮೀ, ಗಂಡಸಿ 8.9 ಸೆಂ.ಮೀ, ಕಣಕಟ್ಟೆ 3.3 ಸೆಂ.ಮೀ, ಮಳೆಯಾಗಿದೆ.

ಆಲೂರು 1.0, ಕುಂದೂರು 0.4 ಮಿ.ಮೀ, ಬೇಲೂರು 1.1 ಸೆಂ.ಮೀ, ಹಳೇಬೀಡು 5.8 ಸೆಂ.ಮೀ, ಹಗರೆ 2.4 ಸೆಂ.ಮೀ, ಬಿಕ್ಕೋಡು 7.6 ಸೆಂ.ಮೀ, ಗೆಂಡೆಹಳ್ಳಿ 5.0 ಮಿ.ಮೀ, ಚನ್ನರಾಯಪಟ್ಟಣ ತಾಲ್ಲೂಕು ಕಸಬಾ ಹೋಬಳಿ 1.5 ಸೆಂ.ಮೀ, ಉದಯಪುರ 2.7 ಸೆಂ.ಮೀ, ಬಾಗೂರು 3.5 ಸೆಂ.ಮೀ, ನುಗ್ಗೆಹಳ್ಳಿ 1.8 ಸೆಂ.ಮೀ, ಹಿರಿಸಾವೆ 1.5 ಸೆಂ.ಮೀ, ಶ್ರವಣಬೆಳಗೊಳ 3.2 ಸೆಂ.ಮೀ ಮಳೆಯಾಗಿದೆ.

ಅರಕಲಗೂಡು ತಾಲ್ಲೂಕು ಕಸಬಾ 7.3, ಕೊಣನೂರು 1.8, ಬಸವಾಪಟ್ಟಣ 1.2, ಮಲ್ಲಿಪಟ್ಟಣ 1.0 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT