ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆದಾಯ ಕಸಿದ ಅಧಿಕ ಮಳೆ: ಕಾಫಿ, ಏಲಕ್ಕಿ ಬೆಳೆಗಾರರಲ್ಲಿ ಚಿಂತೆಯ ಕಾರ್ಮೋಡ

ಆರ್. ಜಗದೀಶ್ ಹೊರಟ್ಟಿ
Published : 12 ಆಗಸ್ಟ್ 2024, 7:20 IST
Last Updated : 12 ಆಗಸ್ಟ್ 2024, 7:20 IST
ಫಾಲೋ ಮಾಡಿ
Comments

ಹೆತ್ತೂರು: ಮಲೆನಾಡು ಭಾಗದಲ್ಲಿ ನಿರಂತರ ಮಳೆಗೆ ಕಾಫಿ, ಕಾಳುಮೆಣಸು, ಅಡಿಕೆ ಬೆಳೆ ಅರ್ಧಕ್ಕಿಂತ ಅಧಿಕ ನಾಶವಾಗಿದ್ದು, ಬೆಳೆಗಾರರ ಮುಖದಲ್ಲಿ ಆತಂಕ ಆವರಿಸಿದೆ.

ಹೆತ್ತೂರು, ಯಸಳೂರು ಹೋಬಳಿಯಲ್ಲಿ ದುಪ್ಪಟ್ಟು ಮಳೆಯಾಗಿದ್ದು, ಬಿಡುವು ನೀಡದ ಮಳೆಯಿಂದಾಗಿ ಈ ಭಾಗದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ. ವಾಣಿಜ್ಯ ಬೆಳೆಗಳು ಭಾರಿ ಪ್ರಮಾಣದಲ್ಲಿ ನೆಲ ಸೇರಲು ಇದು ಪ್ರಮುಖ ಕಾರಣವಾಗಿದೆ. ಹೋಬಳಿಯ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಲಾ, ಮಾಲ್ಮಾನೆ ಗ್ರಾಮದಲ್ಲಿ ಶನಿವಾರ ಸಂಜೆ ಕೇವಲ 2 ಗಂಟೆಯಲ್ಲಿ 16 ಸೆ.ಮೀ. ಮಳೆಯಾಗಿದೆ.

ಸಾಮಾನ್ಯವಾಗಿ ಸೂಕ್ಷ್ಮ ಬೆಳೆಯಾಗಿರುವ ರೋಬಸ್ಟ ಕಾಫಿಗೆ ಫೆಬ್ರುವರಿ ತಿಂಗಳಿನಿಂದ ಹದ ಮಳೆಯ ಅವಶ್ಯಕತೆ ಇದ್ದು, ಪ್ರತಿ 20 ದಿನಕ್ಕೊಮ್ಮೆ ಮಳೆಯಾದರೆ ಉತ್ತಮ ಫಸಲು ನಿರೀಕ್ಷಿಸಬಹುದು. ಆದರೆ, ಕಾಫಿ ಕೊಯ್ಲಿನ ನಂತರ ಮಳೆ ಆಗದಿದ್ದರೆ ಅಥವಾ ಹನಿ ನೀರಾವರಿ ವ್ಯವಸ್ಥೆ ಮಾಡದಿದ್ದರೆ ರೋಬಸ್ಟ ತೋಟಗಳಲ್ಲಿ ನಿರೀಕ್ಷಿತ ಫಸಲು ಪಡೆಯುವುದು ಅಸಾಧ್ಯ.

ಈ ಬಾರಿ ಮುಂಗಾರು ಆರಂಭದಲ್ಲಿ ಉತ್ತಮವಾಗಿರಲಿಲ್ಲ. ನೀರಿನ ಕೊರತೆಯ ನಡುವೆಯೂ ಸಾಕಷ್ಟು ಬೆಳೆಗಾರರು ಹನಿ ನೀರಾವರಿ ವ್ಯವಸ್ಥೆ ಮಾಡಿದ್ದರು. ಆದರೆ, ಮೇ ತಿಂಗಳಿನಲ್ಲಿ ಏಕಾಏಕಿ ಹಿಡಿದ ಮಳೆ, ಮೂರು ತಿಂಗಳು ಕಳೆದರೂ ಬಿಡುವು ನೀಡಲಿಲ್ಲ. ಇದರಿಂದಾಗಿ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದ ಬಹುತೇಕ ಕಾಫಿ ತೋಟದಲ್ಲಿ ಶೇ 60ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ರೋಬಸ್ಟ ಕಾಫಿ ನೆಲ ಸೇರಿದೆ.

ಏಪ್ರಿಲ್‌ವರೆಗೆ ಮಳೆ ಅಗತ್ಯವಿಲ್ಲದ ಅರೇಬಿಕ ಕಾಫಿಗೆ ಸಾಮಾನ್ಯವಾಗಿ ಹನಿ ನೀರಾವರಿ ವ್ಯವಸ್ಥೆ ಮಾಡುವುದು ಅಪರೂಪ. ಆದರೆ, ಎಕರೆಗೆ ಇಂತಿಷ್ಟೇ ಇಳುವರಿ ತೆಗೆಯಬೇಕು ಎಂಬ ಮನಸ್ಥಿತಿ ಹೊಂದಿರುವ ಬೆಳೆಗಾರರು ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಹನಿ ನೀರಾವರಿ ವ್ಯವಸ್ಥೆ ಮಾಡಿರುವ ತೋಟಗಳಲ್ಲಿ ಈಗಾಗಲೇ ಅರೇಬಿಕ ಕಾಫಿ ಕಾಯಿಯಲ್ಲಿ ಬೀಜ ಮೂಡಿದ್ದು, ಬಹುತೇಕ ತೋಟಗಳಲ್ಲಿ ಇನ್ನೊಂದು ತಿಂಗಳಿನಲ್ಲಿ ಕೊಯ್ಲಿಗೆ ಬರಲಿದೆ.

ಇಂತಹ ಸ್ಥಿತಿಯಲ್ಲಿ ಹೆಚ್ಚಿನ ಗಾಳಿ ಬೀಸುತ್ತಿರುವುದು ಬೆಳೆಗಾರರ ಪಾಲಿಗೆ ಕಂಟಕವಾಗಿದ್ದು, ಅರೇಬಿಕ ಗಿಡದ ರೆಂಬೆಗಳೇ ಮುರಿದು ನೆಲ ಸೇರುತ್ತಿವೆ. ರೋಬಸ್ಟ ಕಾಫಿಗಿಂತಲು ಹೆಚ್ಚಿನ ಪ್ರಮಾಣದಲ್ಲಿ ಅರೇಬಿಕ ಕಾಫಿ ನೆಲ ಸೇರುತ್ತಿದೆ. ಅರೇಬಿಕ ಕಾಫಿಗೆ 125 ಸೆ.ಮೀ.ನಿಂದ 175 ಸೆ.ಮೀ. ಮಳೆ ಅಗತ್ಯವಿದೆ. ಆದರೆ ಈ ಬಾರಿಯ ಮಳೆ ಅರೇಬಿಕ ಕಾಫಿಗೂ ಶಾಪವಾಗಿ ಕಾಡುತ್ತಿದೆ.

ಮಳೆ-ಗಾಳಿಗೆ ವನಗೂರು ಗ್ರಾಮದ ರವಿರಾಜ್ ಅವರ ಕಾಫಿ ತೋಟದಲ್ಲಿ ಕಾಫಿ ಫಸಲು ಉದುರುತ್ತಿದೆ.
ಮಳೆ-ಗಾಳಿಗೆ ವನಗೂರು ಗ್ರಾಮದ ರವಿರಾಜ್ ಅವರ ಕಾಫಿ ತೋಟದಲ್ಲಿ ಕಾಫಿ ಫಸಲು ಉದುರುತ್ತಿದೆ.
ಹೆತ್ತೂರು ಸಮೀಪದ ಯಡಕೇರಿ ಗ್ರಾಮದ ಶ್ರೀಕಾಂತ್ ಅವರ ತೋಟದಲ್ಲಿ ಕಾಫಿ ಗಿಡಗಳು ಮುರಿದು ಬಿದ್ದಿವೆ.
ಹೆತ್ತೂರು ಸಮೀಪದ ಯಡಕೇರಿ ಗ್ರಾಮದ ಶ್ರೀಕಾಂತ್ ಅವರ ತೋಟದಲ್ಲಿ ಕಾಫಿ ಗಿಡಗಳು ಮುರಿದು ಬಿದ್ದಿವೆ.
ಒಂದು ವರ್ಷ ಅತಿವೃಷ್ಟಿ ಮತ್ತೊಮ್ಮೆ ಅನಾವೃಷ್ಟಿ. ಕಾಫಿ ಕಾಳುಮೆಣಸು ಏಲಕ್ಕಿ ಬೆಳೆಗಳಿಗೆ ಕಾಂಡ ಕೊರಕ ಕೊಳೆ ರೋಗ ಕೊಕ್ಕೆಕಂದು ರೋಗ ಬಾಧಿಸುತ್ತಿವೆ.
ಎಚ್.ಜೆ ದೇವರಾಜ್‌ ಬೆಳೆಗಾರರ ಸಂಘದ ಹೋಬಳಿ ಘಟಕದ ಅಧ್ಯಕ್ಷ

ಅಧಿಕ ಮಳೆಯಿಂದ ಹಾನಿ ‘ಸಾಮಾನ್ಯವಾಗಿ ರೋಬಸ್ಟ ಕಾಫಿಗೆ 175 ಸೆ.ಮೀ.ನಿಂದ 200 ಸೆ.ಮೀ. ಮಳೆ ಉತ್ತಮ. ಆದರೆ 300ರಿಂದ 400 ಸೆ.ಮೀ. ಮಳೆಯಾಗಿದ್ದು ವಾಡಿಕೆಗಿಂತ ಶೇ 150 ರಷ್ಟು ಅಧಿಕವಾಗಿದೆ’ ಎಂದು ಗ್ರಾಮಸ್ಥ ನಂದನ್ ಹೇಳುತ್ತಾರೆ. ‘ಅತಿ ಮಳೆ ತೇವ ರೋಬಸ್ಟ ಕಾಫಿಗೆ ಕೊಳೆರೋಗ ಬರಲು ಪ್ರಮುಖ ಕಾರಣವಾಗಿದೆ. ಜುಲೈನಲ್ಲಿ ಹೆತ್ತೂರು ಹೋಬಳಿಯ ದುದ್ದುವಳಿ ಗ್ರಾಮದಲ್ಲಿ 285 ಸೆ.ಮೀ ಮಳೆಯಾಗಿದೆ’ ಎಂದು ಹೇಳಿದರು.

ಎಲೆಗಳು ಇಲ್ಲ ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಗ್ರಾಮದ ಹಲವೆಡೆ ಅಧಿಕ ಮಳೆ ಹಾಗೂ ಭಾರಿ ಗಾಳಿಯಿಂದಾಗಿ ರೋಬಸ್ಟ ಗಿಡಗಳಲ್ಲಿ ಎಲೆಯೂ ಉಳಿಯದಂತೆ ಉದುರಿದ್ದು ಇನ್ನೂ ಫಸಲು ಉಳಿಸಿಕೊಳ್ಳುವುದು ದೂರದ ಮಾತು ಎನ್ನುವಂತಾಗಿದೆ. ಪಶ್ಚಿಮ ಘಟ್ಟಗಳ ಅಂಚಿನಲ್ಲಿ ಇರುವ ಕಡ್ರಹಳ್ಳಿ ಹಿಚ್ಚನಹಳ್ಳಿ ಹಂಡಳ್ಳಿ ಮಂಕನಹಳ್ಳಿ ಬಾಳೆಹಳ್ಳ ಹೊಂಗಡಹಳ್ಳ ವಣಗೂರು ಹೊಸಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಫಿ ಕಾಳುಮೆಣಸು ಎಲೆಗಳು ಸಹ ಉದುರಿ ಗಿಡಗಳು ಬರಲು ಕಡ್ಡಿಗಳಂತಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT