ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಗೆ ಡ್ಯಾನ್ಸ್‌ ಮಾಡಿಸಬೇಕೆನ್ನುವುದು ಗೊತ್ತು: ಅಧಿಕಾರಿಗಳಿಗೆ ಪ್ರೀತಂ ಗೌಡ ತರಾಟೆ

Last Updated 7 ಜೂನ್ 2019, 15:42 IST
ಅಕ್ಷರ ಗಾತ್ರ

ಹಾಸನ:‘ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಡಾನ್ಸ್ ಮಾಡ್ತಿರಾ ? ನಿಮ್ಮಿಂದ ಹೇಗೆ ಡಾನ್ಸ್ ಮಾಡಿಸಬೇಕೆನ್ನುವುದು ನನಗೂ ಗೊತ್ತು’ ಎಂದು ಶಾಸಕ ಪ್ರೀತಂ ಜೆ.ಗೌಡ ಅವರು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರಸಭೆ ಕುವೆಂಪು ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ನಗರಸಭೆ ಗಮನಕ್ಕೂ ತರದೆ ಎಷ್ಟೋ ಮಂದಿ ಅಕ್ರಮವಾಗಿ ನಗರದಲ್ಲಿ ಕಟ್ಟಡ ಕಟ್ಟಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಈಗ ಬಿ.ಎಂ.ರಸ್ತೆಯಲ್ಲಿ ಒತ್ತುವರಿಯಾದ ಕಟ್ಟಡಗಳನ್ನು ಒಡೆಯಬೇಕಾದ ಪರಿಸ್ಥಿತಿ ಬಂದಿದೆ. ಆರಂಭದಲ್ಲಿಯೇ ಅಧಿಕಾರಿಗಳು ನಾಗರಿಕರಿಗೆ ಎಚ್ಚರಿಕೆ ನೀಡಿದ್ದರೆ, ಈಗ ಕೋಟ್ಯಂತರ ರೂಪಾಯಿ ವೆಚ್ಚದ ಕಟ್ಟಡಗಳನ್ನು ಒಡೆಯಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

ನಗರದ ವಾಣಿಜ್ಯ ಕಟ್ಟಡಗಳ ತೆರಿಗೆಯನ್ನು ಸಮರ್ಪಕವಾಗಿ ವಸೂಲಿ ಮಾಡುತ್ತಿಲ್ಲ. 2013 ಕ್ಕಿಂತ ಮೊದಲು ನಗರಸಭೆಗೆ ವಾಣಿಜ್ಯ ಮತ್ತು ವಸತಿ ತೆರಿಗೆ ಎಷ್ಟಿತ್ತು. ಆನಂತರ ಎಷ್ಟು ಹೆಚ್ಚಳವಾಗಿದೆ ? ಆದಾಯ ಸಂಗ್ರಹಕ್ಕೆ ಏನು ಯೋಜನೆ ರೂಪಿಸಿಕೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು, ತಮಗೆ ಮಾಹಿತಿ ಕೊಡಿ ಎಂದು ಒತ್ತಾಯಿಸಿದರು.

ಬಾಕಿ ಇರುವ ತೆರಿಗೆಯನ್ನು ಇನ್ನು ಎರಡು ತಿಂಗಳಲ್ಲಿ ವಸೂಲಿ ಮಾಡುವುದಾಗಿ ಅಧಿಕಾರಿಗಳು ಉತ್ತರಿಸಿದರು.

ನಗರದಲ್ಲಿ ಬೇಕರಿಗಳು ಎಲ್ಲೆಂದರಲ್ಲಿ ಆರಂಭವಾಗುತ್ತಿವೆ. ಆದರೆ, ಆರೋಗ್ಯ ನಿರೀಕ್ಷಕರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಎಷ್ಟು ಬೇಕರಿಗಳಿವೆ ಎಂದು ಪ್ರಶ್ನಿಸಿದರು.

ಒಟ್ಟು 1250 ಬೇಕರಿಗಳು ಎಂಬ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಒಪ್ಪದ ಶಾಸಕರು, ಹಳೆಯ ವರದಿಯನ್ನೇ ನೀಡುತ್ತಿದ್ದೀರಿ. ಹೊಸ ಬೇಕರಿಗಳು ಆರಂಭವಾಗುತ್ತಲೇ ಇವೆ. ನಗರದಲ್ಲಿ 4350 ಕ್ಕೂ ಹೆಚ್ಚು ಬೇಕರಿ ಮತ್ತು ಹೋಟೆಲ್‍ಗಳಿವೆ. ಜೂ.15 ರೊಳಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತಾಳಬಾರದು. ಕಸ ಸಂಗ್ರಹಣೆಗೆ ಹೊಸ ಆಟೋ ಬಂದಿಲ್ಲ ಎಂದು ಸಬೂಬು ಹೇಳಕೂಡದು. ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಿದರು.

‘ಸ್ಥಳೀಯ ಶಾಸಕನಾದ ನನ್ನ ಗಮನಕ್ಕೂ ತರದೆ ನಗರಸಭೆಯ ಬಜೆಟ್ ಮಾಡಿದ್ದೀರಿ. ಬಜೆಟ್ ಸಭೆಗೆ ಶಾಸಕರನ್ನು ಕರೆಯುವ ಸೌಜನ್ಯವೂ ಬೇಡವೇ’ ಎಂದು ಬೇಸರ ವ್ಯಕ್ತಪಡಿಸಿದ ಪ್ರೀತಂ, ‘ನೀವು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ನೀವು (ಅಧಿಕಾರಿಗಳು) ಕುಣಿಯುವುದಾದರೆ ನಿಮ್ಮನ್ನು ಹೇಗೆ ಕುಣಿಸಬೇಕೆಂದು ನನಗೂ ಗೊತ್ತು’ ಎಂದು ಜೆಡಿಎಸ್ ಮುಖಂಡರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕುಡಿಯುವ ನೀರು ಪೂರೈಕೆಯ ಅಮೃತ್ ಯೋಜನೆ ಅನುಷ್ಠಾನ ವಿಳಂಬವಾಗುತ್ತಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿ ತ್ವರಿತವಾಗಿ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು. ನಗರಸಭೆ ಆಯುಕ್ತೆ ರೂಪಾಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT