ಶನಿವಾರ, ಡಿಸೆಂಬರ್ 7, 2019
18 °C
ಮುಂಗಾರು ಅಬ್ಬರ: ಭರ್ತಿಗೆ 20 ಅಡಿ ಅಷ್ಟೇ ಬಾಕಿ

ಹೇಮಾವತಿ ಜಲಾಶಯಕ್ಕೆ ಜೀವಕಳೆ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಹಾಸನ ತಾಲ್ಲೂಕಿನ ಗೊರೂರು ಬಳಿಯ ಹೇಮಾವತಿ ಜಲಾಶಯ.

ಹಾಸನ: ಮುಂಗಾರು ಅಬ್ಬರದಿಂದ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹೇಮಾವತಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆ ಭರ್ತಿಯಾಗುವ ನೀರಿಕ್ಷೆ ರೈತರಲ್ಲಿ ಚಿಗುರಿದೆ.

ಹೇಮೆ ಒಡಲು ತುಂಬಿ ನಾಲ್ಕು ವರ್ಷಗಳೇ ಕಳೆದಿವೆ. ಜಲಾಶಯ ಭರ್ತಿಯಾಗದ ಕಾರಣ ಕೆಲ ವರ್ಷಗಳಿಂದ ಹಾಸನ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳ ಲಕ್ಷಾಂತರ ರೈತರು ಭತ್ತ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ.

ಹೇಮೆ ತುಂಬಿದಾಗಲೆಲ್ಲಾ ಭತ್ತದ ಬೆಳೆಯಿಂದಾಗಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಬರಡಾಗಿವೆ. ಈ ಬಾರಿ ಮುಕ್ಕಾಲು ಭಾಗ ಭರ್ತಿಯಾಗಿರುವುದರಿಂದ ಅಚ್ಚಕಟ್ಟು ಪ್ರದೇಶದ ಎಕರೆಯಲ್ಲಿನ ಮುಂಗಾರು ಬೆಳೆಗೆ ನೀರು ಸಿಗುವ ಆಶಾಭಾವ ಹೊಂದಿ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

‘ಮುಂಗಾರು ಇದೇ ರೀತಿ ಜೂನ್‌, ಜುಲೈ ಪೂರ್ತಿ ಅಬ್ಬರಿಸಿದರೇ ಹೇಮಾವತಿ ಜಲಾಶಯ ಭರ್ತಿಯಾಗುವುದರಲ್ಲಿ ಅನುಮಾನ ಇಲ್ಲ. ಈ ಬಾರಿಯಾದರೂ ಭತ್ತ ಬೆಳೆಯಲು ಅವಕಾಶ ಮಾಡಿಕೊಟ್ಟರೆ ಸಾಕು’ ಎನ್ನುತ್ತಾರೆ ರೈತ ರಾಮೇಗೌಡ.

ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದೆ. ಜಿಲ್ಲೆಯ ಕೆರೆ, ಕಟ್ಟೆಗಳು ಮೈದುಂಬಿವೆ. ಜೂನ್‌ ತಿಂಗಳಲ್ಲಿ ಜಲಾಶಯಕ್ಕೆ ದಾಖಲೆ ಒಳ ಹರಿವಿದ್ದು,  12 ರಂದು 29,379, 13 ರಂದು 37946, 14 ರಂದು 37479 ಕ್ಯುಸೆಕ್‌ ಒಳ ಹರಿವಿತ್ತು. ಒಂದೇ ದಿನ 6 ಅಡಿ ನೀರು ಸಂಗ್ರಹವಾಗಿತ್ತು. ಕ್ರಮೇಣ ಒಳ ಹರಿವಿನ ಪ್ರಮಾಣ ಕಡಿಮೆ ಆಗತೊಡಗಿ, ಪ್ರಸ್ತುತ 4199 ಕ್ಯುಸೆಕ್‌ಗೆ ಇಳಿದಿದೆ. ಜೂನ್‌ 22 ಕ್ಕೆ ಜಲಾಶಯದ ಮಟ್ಟ 2901.33 ಅಡಿ ತಲುಪಿ, ಶೇಕಡಾ 70 ರಷ್ಟು ನೀರು ಸಂಗ್ರಹವಾಗಿದೆ.

ಕಳೆದ ವರ್ಷ ಮಳೆ ಇಲ್ಲದೆ ಜಲಾಶಯ ತುಂಬಲಿಲ್ಲ. ಜಿಲ್ಲೆಯಲ್ಲಿ ಬರ ಆವರಿಸಿದ್ದರಿಂದ ಸರ್ಕಾರ ಜಿಲ್ಲೆಯ ಎಂಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿತ್ತು. ಹಾಸನ ನಗರದ ಜನರಿಗೆ ಕುಡಿಯುವ ನೀರಿಲ್ಲದ ಕಾರಣ ಬೇಲೂರಿನ ಯಗಚಿ ಜಲಾಶಯದ ನೀರು ಬಳಕೆ ಮಾಡಿಕೊಳ್ಳಲಾಗಿತ್ತು.

6,720 ಹೆಕ್ಟೇರ್‌ ಕೃಷಿ ಭೂಮಿಗೆ ನೀರು
ಹಾಸನ ತಾಲ್ಲೂಕಿನ ಗೊರೂರಿನಲ್ಲಿರುವ ಜಲಾಶಯದಿಂದ ಹಾಸನ ಜಿಲ್ಲೆ ಮಾತ್ರವಲ್ಲದೇ ಮಂಡ್ಯ, ಮೈಸೂರು, ಜಿಲ್ಲೆಗಳ 6,720 ಹೆಕ್ಟೇರ್‌ ಕೃಷಿ ಭೂಮಿಗೆ ನೀರು ಒದಗಿಸಲಾಗುತ್ತಿದೆ. ಈ ಅಣೆಕಟ್ಟೆಯಿಂದ ಬಾಗೂರು ನವಿಲೆ ನಾಲೆ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. 

ವಿವಿಧ ಏತ ನೀರಾವರಿ ಯೋಜನೆಗಳು ಸೇರಿದಂತೆ ಹೇಮಾವತಿ ಯೋಜನೆ 7 ಲಕ್ಷ ಎಕರೆ ಅಚ್ಚುಕಟ್ಟು ಹೊಂದಿದೆ. ಹೇಮಾವತಿ ಬಲ ಮೇಲ್ದಂಡೆ ನಾಲೆ (ಬೋರಣ್ಣಗೌಡ ನಾಲೆ) 97 ಕಿ.ಮೀ. ಉದ್ದವಿದ್ದು, ಅರಕಲಗೂಡು ತಾಲ್ಲೂಕು ಹಾಗೂ ಹೊಳೆ ನರಸೀಪುರ ತಾಲ್ಲೂಕಿನ 56,000 ಎಕರೆ ಅಚ್ಚುಕಟ್ಟು ಹೊಂದಿದೆ. 

ಹೇಮಾವತಿ ಬಲದಂಡೆ ನಾಲೆ (ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ನಾಲೆ) 91 ಕಿ.ಮೀ. ಉದ್ದವಿದ್ದು, 20,000 ಎಕರೆ ಅಚ್ಚುಕಟ್ಟು ಹೊಂದಿದೆ. ಇನ್ನು ಯೋಜನೆಯ ಬಹುದೊಡ್ಡ ನಾಲೆ ಎಂದರೆ ಹೇಮಾವತಿ ಎಡದಂಡೆ ನಾಲೆ (ಎ.ಜಿ.ರಾಮಚಂದ್ರರಾವ್‌ ನಾಲೆ) 212 ಕಿ.ಮೀ. ಉದ್ದವಿದ್ದು, ಹಾಸನ, ಹೊಳೆನರಸೀಪುರ, ಚನ್ನರಾಯಪಟ್ಟಣ, ಮಂಡ್ಯ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಯ 4,35000 ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ. ವಿವಿಧ ಏತ ನೀರಾವರಿ ಯೋಜನೆಗಳಿಂದಲೂ 36,000 ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ.

 ನಾಲೆಗಳಿಗೆ ನೀರು
‘ಹೇಮಾವತಿ ಹಾಗೂ ಯಗಚಿಯ ಎಲ್ಲ ನಾಲೆಗಳಲ್ಲಿ ಹೂಳು ತೆಗೆದು ನೀರು ಹರಿಸಲಾಗುವುದು. ನಾಲೆಗಳ ದುರಸ್ತಿ, ಹೂಳೆತ್ತುವಿಕೆ ಸೇರಿದಂತೆ ಯಾವುದೇ ಕೆಲಸಗಳಿದ್ದರೂ ತುರ್ತು ಕಾಮಗಾರಿಗಳ ಪಟ್ಟಿಯಲ್ಲಿ ಸೇರಿಸಿ, ಕೆಲಸ ಮಾಡಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ಅಂಕಿ ಅಂಶ

2922 ಅಡಿ 
ಜಲಾಶಯದ ಗರಿಷ್ಠ ನೀರಿನ ಮಟ್ಟ

2901.33 ಅಡಿ
ಇಂದಿನ ನೀರಿನ ಮಟ್ಟ

2857.65 
ಕಳೆದ ವರ್ಷ ಇದೇ ಅವಧಿಗೆ ಇದ್ದ ನೀರು

37.103 ಟಿಎಂಸಿ
ನೀರು ಸಂಗ್ರಹ ಸಾಮರ್ಥ್ಯ

20.56 ಟಿಎಂಸಿ
ಇಂದಿನ ನೀರಿನ ಸಂಗ್ರಹ

1.98 ಟಿಎಂಸಿ
ಕುಡಿಯುವ ನೀರಿಗೆ ಬಳಸುವ ನೀರಿನ ಪ್ರಮಾಣ

4199 ಕ್ಯುಸೆಕ್‌
ಜಲಾಶಯದ ಒಳ ಹರಿವು

678 ಕ್ಯುಸೆಕ್‌
ಕಳೆದ ವರ್ಷ ಇದೇ ಅವಧಿಗೆ ಒಳ ಹರಿವು

265 ಕ್ಯುಸೆಕ್‌
ಹೊರ ಹರಿವು

150 ಕ್ಯುಸೆಕ್‌
ಕಳೆದ ಬಾರಿ ಇದೇ ಅವಧಿಗೆ ಹೊರ ಹರಿವು

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು