ಶನಿವಾರ, ಡಿಸೆಂಬರ್ 5, 2020
19 °C
ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ

ರಾಷ್ಟ್ರೀಯ ಹೆದ್ದಾರಿ 75ರ ದುರಸ್ತಿ; ಗುಂಡಿ ಮುಚ್ಚುವ ಕಾರ್ಯ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹಾಸನ–ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರ ದುರಸ್ತಿ ಕಾರ್ಯಕ್ಕೆ ಭಾನುವಾರ ಬೆಳಗ್ಗೆಯೇ ಚಾಲನೆ ನೀಡಲಾಗಿದೆ ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಹದಗೆಟ್ಟ ರಸ್ತೆಯಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದೆ. ಬಳಿಕ ಮರು ಡಾಂಬರೀಕರಣ ಮಾಡಲು ಸೂಚಿಸಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರ್‌.ಆರ್‌.ನಗರ ಹಾಗೂ ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿರುವುದರಿಂದ ಮತದಾರರು ಕೈ ಹಿಡಿಯಲಿದ್ದಾರೆ. ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿವಿಧ ಕಾಮಗಾರಿಗಳಿಗೆ ₹830 ಕೋಟಿ ಅನುದಾನ ನೀಡಿದ್ದಾರೆ. ಶಿರಾ ಕ್ಷೇತ್ರವನ್ನು ಶಿಕಾರಿಪುರ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಾಗಿ ಸಿ.ಎಂ. ಹೇಳಿದ್ದಾರೆ. ಈ ಕಾರಣಕ್ಕಾಗಿ ಜನರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದರು

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಇನ್ನೂ ಮೂರು ವರ್ಷ ಬಿ.ಎಸ್‌.ಯಡಿಯೂರಪ್ಪ ಅವರೇ ಸಿ.ಎಂ. ಆಗಿ ಮುಂದುವರಿಯುತ್ತಾರೆ. ಬಿಎಸ್‌ವೈ ನಾಯಕತ್ವದ ವಿರುದ್ಧ ಹೇಳಿಕೆ ನೀಡಿರುವವರ ವಿರುದ್ಧ ಕೇಂದ್ರದ ವರಿಷ್ಠರು ಕ್ರಮ ಕೈಗೊಳ್ಳುವರು. ಈಗ ಎಲ್ಲರೂ ಉ‍ಪಚುನಾವಣೆ ಕಡೆ ಗಮನ ಹರಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಕಲೇಶಪುರ ಹಾಗೂ ಆಲೂರು ತಾಲ್ಲುಕುಗಳಲ್ಲಿ ಕಾಫಿ ಬೆಳೆ ಮತ್ತು ಉಳಿದೆಡೆ ಮೆಕ್ಕೆಜೋಳ ಮಳೆ ಆರ್ಭಟಕ್ಕೆ ಸಿಲುಕಿ
ನಷ್ಟವಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಆನ್‌ಲೈನ್‌ ಮೂಲಕ ನಷ್ಟದ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿದ್ದೇನೆ. ಬೆಳೆ ನಷ್ಟಕ್ಕೆ ಎನ್‌ಡಿಆರ್‌ ಎಫ್‌ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುತ್ತದೆ ಎಂದು ವಿವರಿಸಿದರು.

ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಹಾಸನಾಂಬ ಜಾತ್ರಾ ಮಹೋತ್ಸವ ಮುಗಿದ ಬಳಿಕ
ಸಕಲೇಶಪುರದಲ್ಲಿ ಒಂದು ದಿನ ಅರಣ್ಯ ಸಚಿವರು ಹಾಗೂ ಸಂಬಂಧಪಟ್ಟವರ ಜತೆ ಚರ್ಚೆ ನಡೆಸಲಾಗುವುದು ಎಂದರು.

ಕೋವಿಡ್‌ ಹಿನ್ನಲೆಯಲ್ಲಿ ಹಾಸನಾಂಬೆ ಉತ್ಸವ ಸರಳವಾಗಿ ನಡೆಯಲಿದೆ. ಎಲ್ಲ ಭಕ್ತರೂ ಸರಳ ಆಚರಣೆಗೆ ಸಹಕಾರ ನೀಡಬೇಕು. ಕನ್ನಡದ ಮೊದಲ ಶಿಲಾ ಶಾಸನ ಪತ್ತೆಯಾದ ಹಲ್ಮಿಡಿಗೆ ಮೂಲಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಯಲ್ಲಿ ಅನ್ಯಾಯವಾಗಿದೆ ಎಂಬ ಜೆಡಿಎಸ್‌ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಎಲ್ಲಾ ವರ್ಗದವರಿಗೂ ಅವಕಾಶ ಸಿಗಬೇಕು. ಈ ವಿಚಾರ ಕೋರ್ಟ್‌ನಲ್ಲಿರುವುದರಿಂದ ಹೆಚ್ಚು ಮಾತನಾಡುವುದಿಲ್ಲ. ಹಾಸನ ನಗರಸಭೆ ಉಪಾಧ್ಯಕ್ಷ ಸ್ಥಾನ ಚುನಾವಣೆ ನಡೆಸುವ ಬಗ್ಗೆ ಚುನಾವಣಾಧಿಕಾರಿ ಕ್ರಮ ಕೈಗೊಳ್ಳುವರು ಎಂದು ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು