ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಪಕ್ಕ ಕಟ್ಟಡ: ಪರವಾನಗಿ ನೀಡಬೇಡಿ

ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಗ್ರಾಮ ಪಂಚಾಯಿತಿಗೆ ಸುತ್ತೋಲೆ
Last Updated 23 ಸೆಪ್ಟೆಂಬರ್ 2021, 3:38 IST
ಅಕ್ಷರ ಗಾತ್ರ

ಹಳೇಬೀಡು: ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿರುವ ಹಳೇಬೀಡಿನ ಬೇಲೂರು- ಬಾಣಾವರ ರಸ್ತೆಯ ಮಧ್ಯರೇಖೆಯಿಂದ 40 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಿಸಲು ಪರವಾನಗಿ ನೀಡಬಾರದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಗ್ರಾಮ ಪಂಚಾಯಿತಿಗೆ ಆದೇಶ ಬಂದಿದ್ದು, ಈಗಾಗಲೇ ಹೆದ್ದಾರಿಯಾಗಿ ಪರಿವರ್ತನೆಯಾಗಿರುವ ರಸ್ತೆ ಮತ್ತಷ್ಟು ವಿಸ್ತರಣೆಯಾಗಲಿದೆ ಎಂಬ ಭಯ ಬೇಲೂರು ಬಾಣಾವರ ರಸ್ತೆಯ ಕಟ್ಟಡ ಮಾಲೀಕರನ್ನು ಕಾಡುತ್ತಿದೆ.

ರಸ್ತೆಬದಿ ನಿರ್ಮಿಸಿರುವ ಕಟ್ಟಡದಲ್ಲಿ ಸಾಕಷ್ಟು ಮಂದಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಟ್ಟಡ ಬಾಡಿಗೆ ಕೊಟ್ಟು ಕೆಲವರು ದುಡಿಮೆ ಕಂಡುಕೊಂಡಿದ್ದಾರೆ. ಈಗ ಗ್ರಾಮ ಪಂಚಾಯಿತಿಗೆ ಆದೇಶ ಬಂದಿರುವುದರಿಂದ ಕಟ್ಟಡ ಮಾಲೀಕರು ಚಿಂತೆಗೀಡಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಿಂದ ತೀರ್ಪು ಬಂದಿದೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಟ್ಟಡ ನಿರ್ಮಾಣ ಮಾಡಬಾರದು. ರಸ್ತೆ ಮಧ್ಯದಿಂದ 40 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಿಸಲು ಅವಕಾಶ ಅನುಮತಿ ಕೊಟ್ಟರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೋರ್ಟ್ ಆದೇಶದಲ್ಲಿ ಸೂಚಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡಲು ನಿವೇಶನ ಮಾಲೀಕರು ಒತ್ತಾಯಿಸಿದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆದ್ದಾರಿ ವಿಸ್ತರಣೆ ಆಗಬೇಕಾಗಿದೆ. ಹೆದ್ದಾರಿಯಲ್ಲಿ
ಅಪಘಾತ ಆಗದಂತೆ ವಿಭಜಕ ನಿರ್ಮಿಸಬೇಕು. ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತವನ್ನು ವಿಸ್ತರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ.

‘ಕಟ್ಟಡಗಳನ್ನು ಕೆಡವಿ ರಸ್ತೆ ವಿಸ್ತರಣೆ ಮಾಡುವುದಕ್ಕಿಂತ ಹಳೇಬೀಡು ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸಬೇಕು. ಹೆದ್ದಾರಿ ಬದಿಯ ಕಟ್ಟಡ ಮಾಲೀಕರ ನಿದ್ದೆಗೇಡಿಸದೆ, ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಬೇಕು’ ಎನ್ನುತ್ತಾರೆ ಬೇಲೂರು ರಸ್ತೆ ನಿವಾಸಿ ಶೇಖರ್.

‘ಹಳೇಬೀಡಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಟ್ಟಡ ನಿರ್ಮಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ನೀಡುತ್ತಿಲ್ಲ. ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡವರು ಮುಂದಿನ ದಿನದಲ್ಲಿ ತೊಂದರೆ ಅನುಭವಿಸಲೇಬೇಕು. ರಾಷ್ಟ್ರೀಯ ಹೆದ್ದಾರಿ ಬದಿಯ ಕಟ್ಟಡ ಹಾಗೂ ನಿವೇಶನ ಮಾಲೀಕರು ಎಚ್ಚರವಹಿಸಬೇಕು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT