ಮಂಗಳವಾರ, ಡಿಸೆಂಬರ್ 10, 2019
25 °C
ಶುಲ್ಕ ವಸೂಲಿ

ಹಾಸನ-ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ: ಟೋಲ್ ಕೇಂದ್ರ ಆರಂಭಕ್ಕೆ ಸಿದ್ಧತೆ

ಜಿ. ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

ಅರಕಲಗೂಡು (ಹಾಸನ ಜಿಲ್ಲೆ): ತಾಲ್ಲೂಕಿನ ನಿಲುವಾಗಿಲು ಗ್ರಾಮದ ಬಳಿ ರಾಜ್ಯ ಹೆದ್ದಾರಿ 21ರಲ್ಲಿ ಟೋಲ್ ಸಂಗ್ರಹ ಕೇಂದ್ರ ತೆರೆಯಲು ಸಿದ್ಧತೆ ನಡೆದಿದ್ದು, ವಾಹನ ಸವಾರರನ್ನು ಆತಂಕಕ್ಕೀಡುಮಾಡಿದೆ.

ತಾಲ್ಲೂಕಿನಲ್ಲಿ ಹಾದು ಹೋಗಿರುವ ಹಳೇಬೀಡು- ಆನೆಚೌಕೂರು ರಾಜ್ಯ ಹೆದ್ದಾರಿಯಾದ ಹಾಸನ- ಪಿರಿಯಾಪಟ್ಟಣ ಮಾರ್ಗದ 73.63 ಕಿ.ಮೀ. ಉದ್ದದ ರಸ್ತೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ವತಿಯಿಂದ ₹220 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣದ ವೇಳೆ ಆದ ಒಪ್ಪಂದದಂತೆ ಈ ಮಾರ್ಗದ 3 ಕಡೆಗಳಲ್ಲಿ ಟೋಲ್ ಸಂಗ್ರಹ ಕೇಂದ್ರ ತೆರೆಯಲಾಗುತ್ತಿದೆ.

ಹಾಸನ ತಾಲ್ಲೂಕಿನ ಗೊರೂರು, ಅರಕಲಗೂಡು ತಾಲ್ಲೂಕಿನ ನಿಲುವಾಗಿಲು, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಬಳಿ ಟೋಲ್ ಸಂಗ್ರಹ ಕೇಂದ್ರ ತಲೆ ಎತ್ತುತ್ತಿದ್ದು, ವಾಹನ ಸವಾರರಿಗೆ ಟೋಲ್ ಶುಲ್ಕದ ಬರೆ ಬೀಳಲಿದೆ.

ರಾಜ್ಯ ಹೆದ್ದಾರಿ ಮಾರ್ಗದ ಆಸುಪಾಸು ಬಹುತೇಕ ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಸನದ ಗೊರೂರು ಮಾರ್ಗದಲ್ಲಿ ಬರುವ ಕಾಫಿ ವರ್ಕ್ಸ್, ಬಟ್ಟೆ ಕೈಗಾರಿಕೆಗಳಿಗೆ  ಕಾರ್ಮಿಕರು ಬರುತ್ತಾರೆ. ಇದಲ್ಲದೆ ರಾಮನಾಥಪುರದಲ್ಲಿ ಎರಡು ತಂಬಾಕು ಮಾರುಕಟ್ಟೆಗಳು, ಪಿರಿಯಾಪಟ್ಟಣದ ಕಗ್ಗುಂಡಿಯಲ್ಲಿನ ತಂಬಾಕು ಮಾರುಕಟ್ಟೆಗಳು ಈ ರಸ್ತೆ ಬದಿಯಲ್ಲೇ ಇದ್ದು, ಬಹಳಷ್ಟು ರೈತರು ಹೊಗೆಸೊಪ್ಪು ಬೇಲ್‌ಗಳನ್ನು ಮಾರುಕಟ್ಟೆಗೆ ಸಾಗಿಸುತ್ತಾರೆ. ಮೊದಲೇ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿ ತತ್ತರಿಸುತ್ತಿರುವ ರೈತಾಪಿ ವರ್ಗದ ಜನರಿಗೆ ಟೋಲ್ ಶುಲ್ಕ ವಸೂಲಿ ಭಾರಿ ಹೊರೆಯಾಗುವ ಆತಂಕ ಎದುರಾಗಿದೆ.

ಹಲವಾರು ದಶಕಗಳಿಂದ ಈ ಮಾರ್ಗದ ರಸ್ತೆ ದುರಸ್ತಿ ಕಾಣದೆ ಕಿಷ್ಕಿಂಧೆಯಾಗಿ ಗುಂಡಿ, ಹೊಂಡಗಳ ಸಾಮ್ರಾಜ್ಯವಾಗಿತ್ತು.

ರಸ್ತೆಗೆ ವಾಹನಗಳು ಇಳಿಯಲಾರದಷ್ಟು ಹದಗೆಟ್ಟು ಆಗಾಗ್ಗೆ ಅಪಘಾತಗಳು ಸಂಭವಿಸಿದ್ದವು. ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು ಸರಣಿ ಪ್ರತಿಭಟನೆ ನಡೆಸಿದರೂ ಅಭಿವೃದ್ಧಿ ಕಾಣದ ರಸ್ತೆ ಸಂಚಾರದಿಂದ ಜನರು ರೋಸಿ ಹೋಗಿದ್ದರು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಎ. ಮಂಜು ಹಾಗೂ ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರು ಆಸಕ್ತಿ ವಹಿಸಿದ್ದರಿಂದ ರಸ್ತೆ ಅಭಿವೃದ್ಧಿ ಕಂಡಿತ್ತು.

ಆದರೆ ಆರಂಭದಿಂದಲೂ ಕಾಮಗಾರಿ ಗುಣಮಟ್ಟ ಕುರಿತು ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿದ್ದವು. ಕೆಲ ತಿಂಗಳ ಹಿಂದೆ ತಾಲ್ಲೂಕಿನಲ್ಲಿ ಈ ರಸ್ತೆ ಹಾದುಹೋಗಿರುವ ಪ್ರದೇಶದ ನ್ಯೂನತೆಗಳನ್ನು ಸರಿಪಡಿಸುವಂತೆ ಶಾಸಕ ಎ.ಟಿ. ರಾಮಸ್ವಾಮಿ ಅವರು ಖುದ್ದು ಗುತ್ತಿಗೆದಾರರು, ಕೆಆರ್‌ಡಿಸಿಎಲ್ ಅಧಿಕಾರಿಗಳನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ರಸ್ತೆ ಕಾಮಗಾರಿಯನ್ನು ಮಾತ್ರ ಕಳೆದ ವರ್ಷವೇ ಪೂರ್ಣಗೊಳಿಸಲಾಗಿದೆ. ಉತ್ತರ ಭಾರತದ ಕಾರ್ಮಿಕರು ಕಳೆದ 6 ತಿಂಗಳಿನಿಂದ ಟೋಲ್ ಸಂಗ್ರಹ ಕೇಂದ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಕಾಮಗಾರಿ ಕೊನೆಯ ಹಂತದಲ್ಲಿದೆ. ನೌಕರರ ವಸತಿ ಗೃಹಗಳು ನಿರ್ಮಾಣ ಹಂತದಲ್ಲಿವೆ. ರಸ್ತೆಯ ಇಕ್ಕೆಲಗಳಲ್ಲಿ ನಾಮಫಲಕಗಳನ್ನು ಅಳವಡಿಸಿದ್ದರೂ ದರ ನಮೂದಿಸಿಲ್ಲ. ಡಿಸೆಂಬರ್ ತಿಂಗಳ ಕೊನೆಯ ವೇಳೆಗೆ ಕರ ವಸೂಲಿ ಕಾರ್ಯ ಪ್ರಾರಂಭಗೊಳ್ಳುವ ನಿರೀಕ್ಷೆ ಇದ್ದು, ವಾಹನ ಸವಾರರಿಗೆ ಟೋಲ್ ಹೊರೆ ಬೀಳುವ ಸಂಕಷ್ಟ ಎದುರಾಗಿದೆ.

ಟೋಲ್ ಸಂಗ್ರಹಕ್ಕೆ ಸ್ಥಳಿಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಬಹುತೇಕ ಈ ರಸ್ತೆಯಲ್ಲಿ ರೈತರ ಉತ್ಪನ್ನಗಳ ಸಾಗಣೆಯಾಗುತ್ತಿದ್ದು, ಕರ ವಸೂಲಿಯಿಂದ ತೊಂದರೆ ಆಗಲಿದೆ ಎನ್ನುವುದು ವಿರೋಧಕ್ಕೆ ಮುಖ್ಯ ಕಾರಣವಾಗಿದೆ.

‘ಹಾಸನ- ಪಿರಿಯಾಪಟ್ಟಣ ಮಾರ್ಗದ ರಸ್ತೆ ನಿರ್ಮಾಣದ ವೇಳೆಯೇ ಸರ್ಕಾರ ಗುತ್ತಿಗೆದಾರ ಕಂಪನಿಯೊಂದಿಗೆ ಟೋಲ್ ಸಂಗ್ರಹಕ್ಕೆ ಒಪ್ಪಿಗೆ ನೀಡಿದೆ. ಅದರಂತೆ ಟೋಲ್ ಸಂಗ್ರಹ ಕೇಂದ್ರಗಳು ನಿರ್ಮಾಣ ಆಗುತ್ತಿದ್ದು, ಕಾಮಗಾರಿ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಕರ ವಸೂಲಿ ಆರಂಭವಾಗಲಿದೆ’ ಎಂದು ಕೆಆರ್‌ಡಿಸಿಎಲ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್  ಮಂಜುನಾಥ್ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು