ಹೊಳೆನರಸೀಪುರ: ಸೈಕಲ್ ಪ್ರವಾಸ ಮಾಡಿ ಗಿನ್ನಿಸ್ ದಾಖಲೆ ಬರೆಯಲು ಹೊರಟಿರುವ ಕೊಯಮತ್ತೂರಿನ ಮುತ್ತು ಸ್ವೆಲ್ವಂ ಸೈಕಲ್ ಪ್ರವಾಸ ಮಾಡುತ್ತಾ ಇಲ್ಲಿಗೆ ಆಗಮಿಸಿದಾಗ ಪುನೀತ್‍ರಾಜ್‍ಕುಮಾರ್ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿ ಮುಂದಿನ ಪ್ರಯಾಣಕ್ಕೆ ಸಹಾಯ ನೀಡಿದರು.
ಮುತ್ತು ಸೆಲ್ವಂ ಮಾತನಾಡಿ, 1111 ದಿನಗಳ ಸೈಕಲ್ ಪ್ರವಾಸವನ್ನು 2021ರ ಡಿಸೆಂಬರ್ 21ರಂದು ಪ್ರಾರಂಭಿಸಿ, 2025ರ ಜನವರಿ 5ರಂದು ಮುಕ್ತಾಯಗೊಳಿಸಲು ಉದ್ದೇಶಿಸಿದ್ದೇನೆ. ಈಗಾಗಲೇ 19 ಸಾವಿರ ಕಿ.ಮೀ. ಕ್ರಮಿಸಿದ್ದು ನನ್ನ ಉದ್ದೇಶಿತ ಪ್ರವಾಸದ ದೂರ 36,300 ಕಿಲೋ ಮೀಟರ್. ಪ್ರವಾಸದಲ್ಲಿ 34 ರಾಜ್ಯಗಳು ಹಾಗೂ 733 ಜಿಲ್ಲೆಗಳಿಗೆ ಭೇಟಿ ನೀಡಿ, ಗಿನ್ನೀಸ್ ದಾಖಲೆ ಮಾಡುವ ಗುರಿ ಹೊಂದಿದ್ದೇನೆ. ಬೆಂಗಳೂರಿನಲ್ಲಿ ಅಪ್ಪು ಮನೆಗೆ ತೆರಳಿ, ಅಶ್ವಿನಿ ಪುನೀತ್ ಅವರನ್ನು ಭೇಟಿ ಮಾಡಿ ಪ್ರವಾಸದ ಉದ್ದೇಶ ತಿಳಿಸಿದಾಗ ಪ್ರವಾಸದಲ್ಲಿ ಸಹಾಯವಾಗಲಿ ಎಂದು ಪುನೀತ್‍ರಾಜ್‍ಕುಮಾರ್ ಬಳಸಿದ್ದ ಕೂಲಿಂಗ್ ಗ್ಲಾಸ್ ಕೊಡುಗೆ ನೀಡಿದರು. ಅದು ನನ್ನ ಪ್ರವಾಸವನ್ನು ತಂಪಾಗಿಸುತ್ತಿದೆ ಎಂದರು.
ತಮಿಳುನಾಡು ಮೂಲದವರಾಗಿದ್ದರೂ ಅಪ್ಪು ಮೇಲಿನ ಪ್ರೀತಿ ಹಾಗೂ ಗೌರವದ ಸಂಕೇತವಾಗಿ ಸೈಕಲಿಗೆ ಅಪ್ಪುವಿನ ಭಾವಚಿತ್ರ ಲಗ್ಗತ್ತಿಸಿ, ಗಂಧದಗುಡಿ ಚಿತ್ರದ ಅಪ್ಪು ಭಾವಚಿತ್ರವಿರುವ ಟಿಶರ್ಟ್ ಧರಿಸಿ, ಸೈಕಲ್ ಪ್ರವಾಸ ಮಾಡುತ್ತಿರುವುದು ಅಪ್ಪು ಮೇಲಿನ ಅಭಿಮಾನಕ್ಕೆ ಸಾಕ್ಷಿಹೇಳಿತು.
ತಾಲೂಕು ಕಚೇರಿ, ಡಿವೈಎಸ್ಪಿ ಕಚೇರಿ, ಪುರಸಭೆ, ತಾ.ಪಂ. ಕಚೇರಿಗಳಿಗೆ ತೆರಳಿ ಅಧಿಕಾರಿಗಳಿಂದ ದಾಖಲೆ ಪುಸ್ತಕಕ್ಕೆ ಸಹಿ ಪಡೆದು, ಫೋಟೊ ಕ್ಲಿಕ್ಕಿಸಿಕೊಂಡು, ಪ್ರವಾಸವನ್ನು ಸಾಕ್ಷೀಕರಿಸಿಕೊಂಡರು. ಪಟ್ಟಣದ ಒಕ್ಕರಣೆಬಾವಿ ಬೀದಿಯ ಎಚ್.ಎಸ್.ಸುನೀಲ್, ಗುಂಡಣ್ಣ, ಛಾಯಾಗ್ರಾಹಕ ಸಂಘದ ನರಸಿಂಹ, ಚೇತನ್, ಅಶ್ವತ್, ಮಹೇಶ ಇತರರು ಮುತ್ತುಸೆಲ್ವಂ ಪ್ರಯಾಣಕ್ಕೆ ಶುಭಕೋರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.