ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಕ್ವಾರಂಟೈನ್‌ಗಳ ನಿಗಾಕ್ಕೆ ನೂತನ ಆ್ಯಪ್‌

ಮಲೆನಾಡು ತಾಂತ್ರಿಕ ಕಾಲೇಜಿನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಸಾಧನೆ
Last Updated 10 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಹಾಸನ: ಪತ್ರ್ಯೇಕ ವಾಸ (ಕ್ವಾರಂಟೈನ್‌)ದಲ್ಲಿರುವ ವ್ಯಕ್ತಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸಲು ನಗರದ ಮಲೆನಾಡು ತಾಂತ್ರಿಕ ಕಾಲೇಜಿನ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ಮೊಬೈಲ್‌ ಆ್ಯಪ್ ಸಿದ್ಧಪಡಿಸಿದ್ದಾರೆ.

ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥೆ ಗೀತಾ ಕಿರಣ್ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮನೋಜ್ ಹಾಗೂ ಆದರ್ಶ್ ಅವರು 'ಮೊಬೈಲ್ ಆ್ಯಪ್ ಫಾರ್ ಹೋಂ ಕ್ವಾರಂಟೈನ್' ಆ್ಯಪ್ ಸಿದ್ಧಪಡಿಸಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ ಗೌಡ ಅವರಿಗೆ ಸಲ್ಲಿಸಿದ್ದಾರೆ.

ಕಾಲೇಜಿಗೆ ರಜೆ ನೀಡಿರುವ ಹಿನ್ನೆಲೆಯಲ್ಲಿ ಗೀತಾ ಕಿರಣ್ ಮತ್ತು ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲೇ ಇದ್ದು, ಎರಡು ದಿನದಲ್ಲಿ ಆ್ಯಪ್ ಸಿದ್ದ ಪಡಿಸಿದ್ದಾರೆ. ಈ ಆ್ಯಪ್‌ ಮೂಲಕ ಜಿಲ್ಲೆಯ 55 ಕ್ವಾರಂಟೈನ್‍ಗಳ ಚಲನವಲನ ಎಸ್ಪಿಗೆ ತಿಳಿಯುತ್ತಿದೆ. ಆ್ಯಪ್‍ನ ಅಡ್ಮಿನ್ ಎಸ್ಪಿ ಒಬ್ಬರೇ ಆಗಿದ್ದು, ಬೇರೆ ಯಾರೂ ಇದರ ಕುರಿತು ವಿವರ ಪಡೆಯಲು ಸಾಧ್ಯವಿಲ್ಲ.

ಆ್ಯಪ್ ಕಾರ್ಯನಿರ್ವಹಣೆ?: ಕ್ವಾರಂಟೈನ್‌ ವ್ಯಕ್ತಿಯ ಮೊಬೈಲ್‌ಗೆ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಡಲಾಗುತ್ತದೆ. ಮನೆಗೆ ಹೋದ ತಕ್ಷಣವೇ ಆತನ ಫೋಟೊ, ಸ್ಥಳ, ಸಮಯ, ಮನೆ ವಿಳಾಸ ಎಲ್ಲವೂ ಅಡ್ಮಿನ್‍ಗೆ ತಲುಪುತ್ತದೆ. ನಂತರ ಪ್ರತಿ ಗಂಟೆಗೊಮ್ಮೆ ವ್ಯಕ್ತಿ ತನ್ನ ದಿನಚರಿ ಅಪ್‌ಡೇಟ್ ಮಾಡುತ್ತಿರಬೇಕು. ಗಂಟೆಗೊಮ್ಮೆ ಅಪ್‌ಡೇಟ್ ಮಾಡದಿದ್ದರೆ ಅಡ್ಮಿನ್‍ಗೆ ಸಂದೇಶ ರವಾನೆ ಆಗುತ್ತದೆ. ಆಗ ವ್ಯಕ್ತಿ ನಿಗದಿತ ಸ್ಥಳದಲ್ಲಿ ಇಲ್ಲ ಎಂದು ಸುಲಭವಾಗಿ ತಿಳಿಯಬಹುದು.

‘ಕೊರೊನಾ ವಿರುದ್ಧದ ಹೋರಾಟಕ್ಕೆ ನಮ್ಮದು ಸಣ್ಣ ಸೇವೆ ಇರಲಿ ಎಂಬ ಕಾರಣಕ್ಕೆ ಮೊಬೈಲ್ ಆ್ಯಪ್ ಸಿದ್ಧಪಡಿಸಿ ಪೊಲೀಸ್‌ ವರಿಷ್ಠಾಧಿಕಾರಿಗೆ ಸಲ್ಲಿಸಿದ್ದು, ಇದನ್ನು ಕ್ವಾರಂಟೈನ್‌ ವ್ಯಕ್ತಿಗಳಿಗೆ ಬಳಸುತ್ತಿದ್ದಾರೆ. ಕ್ವಾರಂಟೈನ್‍ಗೆ ಹೋಗುವ ಪ್ರತಿಯೊಬ್ಬರ ವಿವರವನ್ನು ಎಸ್ಪಿ ಗ್ರೂಪ್‍ಗೆ ಸೇರಿಸುತ್ತಾರೆ. ಆಗ ಅವರಿಗೆ ಏಕಾಂತವಾಸ ಮುಗಿದವರ ವಿವರವೂ ತಿಳಿಯುತ್ತದೆ. ಅವಧಿ ಮುಗಿದವರನ್ನು ಪಟ್ಟಿಯಿಂದ ತೆಗೆಯುವ ಆಯ್ಕೆಯೂ ಎಸ್ಪಿಗೆ ಇದೆ’ ಎಂದು ಗೀತಾ ಕಿರಣ್ ವಿವರಿಸಿದರು.‌

*
ಈಗಾಗಲೇ ಕ್ವಾರಂಟೈನ್‌ನಲ್ಲಿ ಇರುವವರ ಮೊಬೈಲ್‌ಗೆ ಈ ಆ್ಯಪ್‌ ಅಳವಡಿಸಿ ಬಳಸಲಾಗುತ್ತಿದೆ. ನಾನೇ ಅಡ್ಮಿನ್ ಆಗಿದ್ದು, ನಿಗಾ ವಹಿಸಲು ಅನುಕೂಲವಾಗಿದೆ.
-ಶ್ರೀನಿವಾಸ್‌ಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ,

*
ಕ್ವಾರಂಟೈನ್‍ನಲ್ಲಿ ಇರಬೇಕಿರುವ ವ್ಯಕ್ತಿ ಹೊರಗಡೆ ಹೋದರೆ ತಕ್ಷಣವೇ ಅಡ್ಮಿನ್‍ಗೆ ಅಲರ್ಟ್ ಬರುತ್ತದೆ. ಸುಲಭವಾಗಿ ಅವರನ್ನು ಪತ್ತೆ ಹಚ್ಚಬಹುದು.
-ಗೀತಾ ಕಿರಣ್, ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT