ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಹೊಯ್ಸಳೇಶ್ವರ ರಥೋತ್ಸವ 

ದೇಗುಲದಲ್ಲಿ ಮೊಳಗಿದ ಮಂತ್ರಘೋಷ: ಕಲಾ ತಂಡಗಳ ಆಕರ್ಷಣೆ
Last Updated 19 ನವೆಂಬರ್ 2019, 10:19 IST
ಅಕ್ಷರ ಗಾತ್ರ

ಹಳೇಬೀಡು: ಹೊಯ್ಸಳರ ರಾಜಧಾನಿ ದೋರಸಮುದ್ರ (ದ್ವಾರಸಮುದ್ರ) ಇಂದಿನ ಹಳೇಬೀಡಿನಲ್ಲಿ ಸೋಮವಾರ ಹೊಯ್ಸಳೇಶ್ವರ ಸ್ವಾಮಿ ರಥೋತ್ಸವ ವೈಭವದಿಂದ ಜರುಗಿತು.

ವಿವಿಧ ವಾದ್ಯ ಮೇಳ ಹಾಗೂ ಜನಪದ ಕಲಾತಂಡಗಳೊಂದಿಗೆ ರಥ ಸಾಗಿತು. ಹೊಯ್ಸಳೇಶ್ವರ ದೇವಾಯದಿಂದ ಆರಂಭವಾದ ರಥೋತ್ಸವ ಹೊಯ್ಸಳ ವೃತ್ತ, ದೇವಸ್ಥಾನ ರಸ್ತೆ ಮೂಲಕ ಕರಿಯಮ್ಮ ಮಹಾದ್ವಾರದವರೆಗೆ ಚಲಿಸಿ ಹಿಂದಿರುಗಿತು.

ರಥೋತ್ಸವ ಅಂಗವಾಗಿ ಹೊಯ್ಸಳೇಶ್ವರ ದೇವಾಲಯದಲ್ಲಿ ನಸುಕಿನಲ್ಲಿಯೇ ವಿಪ್ರರಿಂದ ವೇದಮಂತ್ರಘೋಷ, ಮೂಲದೇವರಿಗೆ ಮಹಾಭಿಷೇಕ, ಅಷ್ಟಾವಧಾನ ಸೇವೆ, ಪ್ರಾಕಾರೋತ್ಸವ, ಮಹಾಮಂಗಳಾರತಿ ಮುಗಿದ ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಲಾಯಿತು. ನಂತರ ಮಂಗಳವಾದ್ಯದೊಂದಿಗೆ ದೇವಾಲಯದ ಸುತ್ತ ಮೆರವಣಿಗೆ ಮಾಡಲಾಯಿತು. ಪಲ್ಲಕ್ಕಿ ಉತ್ಸವ ದೇವಾಲಯದ ಹೊರ ಆವರಣದಲ್ಲಿ ನಿಂತಿದ್ದ ಅಲಂಕೃತ ರಥದ ಬಳಿ ಬಂದು ನಿಂತಿತು. ಹೊಯ್ಸಳೇಶ್ವರ ಸ್ವಾಮಿಗೆ ಜೈ ಎಂಬ ಘೋಷಣೆಯೊಂದಿಗೆ ಸ್ವಾಮಿಯ ಉತ್ಸವಮೂರ್ತಿಯನ್ನು ರಥದಲ್ಲಿ ಇರಿಸಲಾಯಿತು.

ಆಗಮಿಕ ಅರ್ಚಕರ ತಂಡ ಪೂಜೆ ನೆರವೇರಿಸಿದ ನಂತರ ಸಂಪ್ರದಾಯದಂತೆ ವಿಶ್ವಕರ್ಮ ಸಮುದಾಯದವರು ಕದಳಿ ಬಲಿ ಅರ್ಪಿಸಿದರು. ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಕೆ.ಎಸ್.ಲಿಂಗೇಶ್ ಮೊದಲಾದ ಗಣ್ಯರು ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಘೋಷಣೆಗಳೊಂದಿಗೆ ರಥವನ್ನು ಎಳೆದರು.

ಗೊಂಬೆ ಕುಣಿತ, ಮಹಿಳಾ ವೀರಗಾಸೆ, ಸೋಮನಕುಣಿತ, ಚಿಟ್ಟಿಮೇಳ, ಕೋಲಾಟ ಮೊದಲಾದ ಜನಪದ ನೃತ್ಯಗಳನ್ನು ರಸ್ತೆಯ ಇಕ್ಕೆಲದಲ್ಲಿ ನಿಂತಿದ್ದ ಜನರು ನೋಡಿ ಸಂತಸಪಟ್ಟರು. ರಥೋತ್ಸವದ ನಂತರ ಭಕ್ತರು ಹೊಯ್ಸಳೇಶ್ವರ ಸ್ವಾಮಿಯ ದರ್ಶನ ಪಡೆದು, ಹಣ್ಣು– ಕಾಯಿ ಪೂಜೆ ಮಾಡಿಸಿದರು. ಪ್ರಧಾನ ಅರ್ಚಕ ಎಚ್.ಎಸ್.ಸುಬ್ರಹ್ಮಣ್ಯ ವಲ್ಲೀಶ್ ಹಾಗೂ ತಂಡ ಪೂಜಾ ವಿಧಾನ ನೆರವೇರಿಸಿತು. ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT