ಸೋಮವಾರ, ಡಿಸೆಂಬರ್ 9, 2019
17 °C

ಸಂತ್ರಸ್ತರ ಹೆಸರಿನಲ್ಲಿ ಭೂಕಬಳಿಕೆ: ತನಿಖೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ (ಹಾಸನ ಜಿಲ್ಲೆ): ಹೇಮಾವತಿ ಜಲಾಶಯ ಯೋಜನೆಯ ಸಂತ್ರಸ್ತರ ಹೆಸರಿನಲ್ಲಿ ಭೂಕಬಳಿಕೆ ನಡೆದಿರುವ ಪ್ರಕರಣದ ತನಿಖೆ ನಡೆಸಿ, ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಹಾಸನ ಜಿಲ್ಲಾಧಿಕಾರಿಗೆ ಕಂದಾಯ ಸಚಿವ ಆರ್.ಅಶೋಕ್‌ ಸೂಚಿಸಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಭೂ ಕಬಳಿಕೆ ಆಗಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಲಭ್ಯ ಮಾಹಿತಿ ಪ್ರಕಾರ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದ್ದು, 3ರಿಂದ 4 ಸಾವಿರ ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಒಂದೇ ಪ್ರಮಾಣಪತ್ರಕ್ಕೆ ಒಬ್ಬರೇ ವ್ಯಕ್ತಿಗೆ ಎರಡರಿಂದ ಮೂರು ಬಾರಿ ಭೂಮಿ ಮಂಜೂರು ಮಾಡಲಾಗಿದೆ’ ಎಂದರು.

‘ಈ ಅಕ್ರಮದ ಬಗ್ಗೆ ತಿಂಗಳೊಳಗೆ ತನಿಖೆ ನಡೆಸಿ, ಇದರಲ್ಲಿ ಯಾರ್‍ಯಾರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರಿಗೆ ಸೂಚಿಸಲಾಗಿದೆ. ಪ್ರಾಥಮಿಕ ವರದಿ ಬಂದ ಬಳಿಕ ಭ್ರಷ್ಟಾಚಾರ ನಿಗ್ರಹ ದಳ ಅಥವಾ ಲೋಕಾಯುಕ್ತ ಸಂಸ್ಥೆಯಿಂದ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ಸರ್ಕಾರಿ ಭೂಮಿ ಕಬಳಿಕೆ ಮಾಡುವುದು ಅಪರಾಧ. ಮುಳುಗಡೆ ಸಂತ್ರಸ್ತರಿಗೆ ನ್ಯಾಯಯುತವಾಗಿ ಪರಿಹಾರ ಸಿಗಬೇಕು. ಇದರಲ್ಲಿ ಯಾರೇ  ಭಾಗಿಯಾಗಿದ್ದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಪ್ರಜಾವಾಣಿ’ಯ ಆ.25ರ ಸಂಚಿಕೆಯಲ್ಲಿ ‘ಸಂತ್ರಸ್ತರ ಹೆಸರಿನಲ್ಲಿ ಭೂ ಕಬಳಿಕೆ’ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟವಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು