‘ಹುಡಾ’ ಅಧ್ಯಕ್ಷ ರಾಜೇಗೌಡ

ಸೋಮವಾರ, ಮಾರ್ಚ್ 25, 2019
28 °C
ಮಾದರಿ ನಗರಾಭಿವೃದ್ಧಿ ಪ್ರಾಧಿಕಾರ: ಭರವಸೆ

‘ಹುಡಾ’ ಅಧ್ಯಕ್ಷ ರಾಜೇಗೌಡ

Published:
Updated:
Prajavani

ಹಾಸನ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷರಾಗಿ ಜೆಡಿಎಸ್‌ ಹಿರಿಯ ಮುಖಂಡ ಕೆ.ಎಂ.ರಾಜೇಗೌಡ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಅಪಾರ ಬೆಂಬಲಿಗರ ಜತೆ ಮಧ್ಯಾಹ್ನ 12.30ಕ್ಕೆ ಪ್ರಾಧಿಕಾರಕ್ಕೆ ಬಂದ ರಾಜೇಗೌಡರನ್ನು ಜೆಡಿಎಸ್ ಮಹಿಳಾ ಮುಖಂಡರು ಆರತಿ ಎತ್ತಿ ಸ್ವಾಗತಿಸಿದರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಮುಖಂಡರು, ಸಂಬಂಧಿಕರು, ಅಭಿಮಾನಿಗಳು ಶುಭಕೋರಿದರು.

ಬಳಿಕ ಮಾತನಾಡಿದ ಅವರು, ‘ಅನಿರೀಕ್ಷಿತವಾಗಿ ನನಗೆ ಈ ಸ್ಥಾನ ದೊರೆತಿದೆ. ಮುಂಬರುವ ದಿನಗಳಲ್ಲಿ ಸಚಿವ ಎಚ್‌.ಡಿ.ರೇವಣ್ಣ, ಶಾಸಕರು ಹಾಗೂ ಹಿರಿಯ ನಾಗರಿಕರ ಸಲಹೆ, ಮಾರ್ಗದರ್ಶನ ಪಡೆದು ಜನಪರ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

‘ಪ್ರಾಧಿಕಾರದಲ್ಲಿ ಬಾಕಿ ಇರುವ ಕೆಲಸಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ನಗರದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವುದೇ ನನ್ನ ಗುರಿ. ಸಚಿವ ಎಚ್.ಡಿ.ರೇವಣ್ಣ ಅವರ ಅಭಿವೃದ್ಧಿ ವೇಗ ಗಂಟೆಗೆ 90 ಕಿ.ಮೀ., ನನ್ನ ವೇಗ 80 ಕಿ.ಮೀ. ನ್ಯಾಯೋಚಿತ ಕೆಲಸಕ್ಕೆ ಆದ್ಯತೆ ನೀಡಲಾಗುವುದು’ ಎಂದು ಗೌಡರು ಭರವಸೆ ನೀಡಿದರು.

‘ನಾಲ್ಕು ದಶಕದ ರಾಜಕೀಯ ಜೀವನದಲ್ಲಿ ಏಳು, ಬೀಳು ಕಂಡಿದ್ದೇನೆ. ಪಟೇಲ್‌ ಶಿವರಾಂ ಅವರ ಪ್ರಯತ್ನದಿಂದ ಸ್ಥಾನ ಸಿಕ್ಕಿದೆ. ದೊಡ್ಡಗೌಡರು ಮತ್ತು ಸಚಿವರಿಗೆ ಅಭಾರಿಯಾಗಿದ್ದೇನೆ. ಹತ್ತು ವರ್ಷದ ಹಿಂದೆ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಯಾದೆ. ವರಿಷ್ಠರು ಗೌರವದಿಂದ ನಡೆಸಿಕೊಂಡು ತಾನು ಕೇಳದೇ ಇದ್ದರೂ, ಹೊಸ ಜವಾಬ್ದಾರಿ ನೀಡಿದ್ದಾರೆ ಅದಕ್ಕಾಗಿ ಋಣಿ’ ಎಂದು ಹೇಳಿದರು.

ಮುಖಂಡರಾದ ಚನ್ನವೀರಪ್ಪ, ಸಯ್ಯದ್ ಅಬ್ಕರ್‌, ಕಮಲ್ ಕುಮಾರ್, ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಹಾಗೂ ಮಹಿಳಾ ಮುಖಂಡರು ಶುಭ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !