ಭಾನುವಾರ, ಮೇ 29, 2022
21 °C
ಸಚಿವ ಸಂಪುಟ ಪುನರ್ ರಚನೆ: ಹೈಕಮಾಂಡ್ ತೀರ್ಮಾನ ಅಂತಿಮ- ಪ್ರೀತಂ

ಹಾಸನಕ್ಕೆ ನಾನೇ ಸಿ.ಎಂ, ಬಿಜೆಪಿಯಲ್ಲಿರುವೆ: ಪ್ರೀತಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಕಾಂಗ್ರೆಸ್‍ಗೆ ಹೋಗುತ್ತೇನೆಂದು ಕೆಲವರು ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾರೆ. ಯಾರು ಏನೇ ಹೇಳಿದರೂ ನಾನು ಬದಲಾಗಲ್ಲ. ಕಡೆವರೆಗೂ ಬಿಜೆಪಿಯಲ್ಲೇ ರಾಜಕಾರಣ  ಮಾಡುತ್ತೇನೆ’ ಎಂದು ಶಾಸಕ ಪ್ರೀತಂ ಜೆ. ಗೌಡ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ರಾಜಕಾರಣ ಆರಂಭ ಮಾಡಿದ್ದು ಬಿಜೆಪಿಯಿಂದ. ಊಹಾಪೋಹ ಮಾತನಾಡುವವರಿಗೆ ಅವರ ನಾಲಿಗೆ ಚಪಲ ತೀರಲಿದೆ ಅಷ್ಟೇ. ಸ್ಥಳೀಯವಾಗಿ ಯಾರು ರಾಷ್ಟ್ರೀಯತೆ ಒಪ್ಪಿ, ದೇಶಪ್ರೇಮ ಹೊಂದಿದ್ದಾರೋ ಅವರು ಕಾಂಗ್ರೆಸ್- ಜೆಡಿಎಸ್‍ನಲ್ಲಿದ್ದರೂ ಕರೆ ತರುವ ಪ್ರಯತ್ನ ಮಾಡುವೆ’ ಎಂದರು.

‘ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದು ಮತ್ತೆ ಮಂತ್ರಿಯಾಗಿದ್ದಾರೆ. ಮರಳಿ ಅಲ್ಲಿಗೆ ಹೋಗುತ್ತಾರೆ ಎನ್ನುವುದು ಅವರ ವರ್ಚಸ್ಸು ವೃದ್ಧಿಸಿಕೊಳ್ಳಲು ಕಂಡುಕೊಂಡಿರುವ ಮಾರ್ಗ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ಗೆ ಹೋಗೋ ಪರಿಸ್ಥಿತಿ ಬಿಜೆಪಿಯ ಯಾವುದೇ ಶಾಸಕರಿಗೂ ಬಂದಿಲ್ಲ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ನಾನೊಬ್ಬನೇ ಇದ್ದರೂ, ಹೋರಾಟ ಮಾಡಿ ಪಕ್ಷ ಗಟ್ಟಿ ಮಾಡುವ, ಕಾಂಗ್ರೆಸ್‌ನವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ನಾನೇಕೆ ಕೈ ನಾಯಕರ ಜೊತೆ ಮಾತಾಡಲಿ’ ಎಂದು ಪ್ರಶ್ನೆಗೆ ಉತ್ತರಿಸಿದರು.‌

ಉಸ್ತುವಾರಿ ಸಚಿವರ ಬದಲಾವಣೆ ಸಿ.ಎಂ ಅವರ ಪರಮಾಧಿಕಾರ. ಅದಕ್ಕೆ ವಿಶ್ಲೇಷಣೆ ಮತ್ತು ಅಭಿಪ್ರಾಯ ನೀಡುವುದು ಸೂಕ್ತ ಅಲ್ಲ. ಒಳ್ಳೆಯದಕ್ಕೇ ಮಾಡಿದ್ದಾರೆ ಅಂದುಕೊಳ್ಳುವುದು ಧರ್ಮ. ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟದ್ದು, ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ’ ಎಂದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗಲೂ ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಬೊಮ್ಮಾಯಿ ಸಹ ಸಹಕಾರ ನೀಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ನಾನೇ ಮಂತ್ರಿ, ಮುಖ್ಯಮಂತ್ರಿ ಎಂದು ಸಿ.ಎಂ ಹಾಗೂ ಸಚಿವರು ಬೆನ್ನು ತಟ್ಟುತ್ತಿದ್ದಾರೆ. ಅವರ ಯಾವುದೇ ನಿರ್ಧಾರದ ಬಗ್ಗೆ ಮಾತನಾಡುವ ಅಪ್ರಬುದ್ಧತೆ ಪ್ರದರ್ಶನ ಮಾಡಲ್ಲ. ಹಿರಿಯರು, ಸಿ.ಎಂ ಕೈಕೊಳ್ಳುವ ತೀರ್ಮಾನಕ್ಕೆ ಬದ್ಧ' ಎಂದು ಹೇಳಿದರು.

‘ನಾನು ಮೊದಲ ಬಾರಿ ಶಾಸಕನಾಗಿರುವೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ 2023 ರಲ್ಲೂ ದಾಖಲೆ ಮತಗಳ ಅಂತರದಿಂದ ಗೆದ್ದು ಶಾಸಕನಾಗಲು ಗಮನ ಹರಿಸಿದ್ದೇನೆ. ಅಭಿವೃದ್ಧಿ ಮೂಲಕ ಜನರ ವಿಶ್ವಾಸ ಗಳಿಸಲು ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲರಿಂದಲೂ ನನಗೆ ಸಹಕಾರ ಸಿಗುತ್ತಿದ್ದು, ಇದಕ್ಕಿಂತ ಹೆಚ್ಚು ನಾನೇನು ಅಪೇಕ್ಷೆ ಪಡಲ್ಲ. ಮುಂದಿನ ಬಜೆಟ್‍ನಲ್ಲಿ ಜಿಲ್ಲೆಗೆ ಹೆಚ್ಚು ಅನುದಾನ ಸಿಗಲಿದೆ. ಜಲ ಜೀವನ್ ಮಿಶನ್ ಯೋಜನೆಗೆ ಜಿಲ್ಲೆಯನ್ನು ಸೇರಿಸಿ ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಸಿ.ಎಂ. ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು