ಶುಕ್ರವಾರ, ಅಕ್ಟೋಬರ್ 18, 2019
28 °C
ಮತ್ತೊಬನ ಶವಕ್ಕಾಗಿ ಮುಂದುವರಿದ ಶೋಧ

ಇಬ್ಬರ ಮೃತದೇಹ ಪತ್ತೆ

Published:
Updated:

ಹಾಸನ: ಆಲೂರು ಬಳಿಯ ಯಗಚಿ ನದಿಯಲ್ಲಿ ಮಂಗಳವಾರ ನೀರು ಪಾಲಾಗಿದ್ದ ಮೂವರು ಯುವಕರ ಪೈಕಿ ಗುರುವಾರ ಇಬ್ಬರ ಮೃತದೇಹ ಪತ್ತೆಯಾಗಿದೆ.

ತಾಲ್ಲೂಕಿನ ಹುಣಸವಳ್ಳಿ ಗ್ರಾಮದ ರತನ್ ಮತ್ತು ದೊಡ್ಡ ಕಣಕಾಲು ಗ್ರಾಮದ ಭೀಮ್ ರಾಜ್ ಎಂಬುವರ ಶವಗಳನ್ನು ಎನ್ ಡಿ ಆರ್ ಎಫ್ ತಂಡ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದೆ.

ಮತ್ತೊಬ್ಬ ಯುವಕ ಮನು ಮೃತದೇಹ ಹುಡುಕಾಟಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ನಡುವೆ ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ ₹ 1 ಲಕ್ಷ ಪರಿಹಾರ ಘೋಷಣೆ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣ, ರಾಜ್ಯ ಸರ್ಕಾರ ತಲಾ ₹ 5 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ.

ಮಂಗಳೂರಿನಿಂದ ಬಂದ ಎನ್ ಡಿ ಆರ್ ಎಫ್ ತಂಡ ಬೆಳಗ್ಗೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಮೊದಲು ರತನ್ ಶವ ಸಿಕ್ಕಿತ್ತು. ಅದಾದ ಕೆಲ ಹೊತ್ತಿನಲ್ಲಿ ಭೀಮ್ ರಾಜ್ ಮೃತದೇಹವೂ ಪತ್ತೆಯಾಯಿತು.

ಮಕ್ಕಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದ ಕುಟುಂಬ ಸದಸ್ಯರ ದುಃಖ ಮೃತದೇಹಗಳನ್ನು ನೋಡುತ್ತಿದ್ದಂತೆಯೇ ಕಟ್ಟೆಯೊಡೆಯಿತು. ಹೆತ್ತವರು ಹಾಗೂ ಸಂಬಂಧಿಕರ ಆಕ್ರಂದನ ನೆರೆದಿದ್ದ ನೂರಾರು ಮಂದಿಯನ್ನು ಸ್ಮಶಾನ ಮೌನದಲ್ಲಿ ಮುಳುಗಿಸಿತ್ತು. ನಂತರ ರತನ್ ಅಂತ್ಯಕ್ರಿಯೆಯನ್ನು ಯಗಚಿ ನದಿಯ ದಡದಲ್ಲೇ ನೆರವೇರಿಸಲಾಯಿತು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಪ್ರಜ್ವಲ್ ರೇವಣ್ಣ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

 

Post Comments (+)