ಗುರುವಾರ , ನವೆಂಬರ್ 21, 2019
22 °C
ಅಮೃತ್‌ ಮಹಲ್‌ ತಳಿ ಸಂವರ್ಧನ ಉಪಕೇಂದ್ರಕ್ಕೆ ಸಚಿವ ಪ್ರಭು ಭೇಟಿ, ಪರಿಶೀಲನೆ

ಇಬ್ಬರು ಅಧಿಕಾರಿಗಳ ಅಮಾನತು

Published:
Updated:

ನುಗ್ಗೇಹಳ್ಳಿ: ಸಮೀಪದ ಅಮೃತ್ ಮಹಲ್ ತಳಿ ಸಂವರ್ಧನ ಉಪ ಕೇಂದ್ರದಲ್ಲಿ ನೂರಾರು ಮೂಕ ಜಾನುವಾರುಗಳನ್ನು ಸಾವಿನ ಮನೆಯಲ್ಲಿ ಕೂಡಿ ಹಾಕಿದ್ದ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಅಮೃತ್ ಮಹಲ್ ತಳಿ ಸಂವರ್ಧನಾ ಉಪಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಜಾನುವಾರು ಮೂಕರೋದನೆ ಅನುಭವಿಸಿವೆ. ನೂರಾರು ಗೋಮಾತೆಗಳನ್ನು ಸರಿಯಾದ ರೀತಿಯಲ್ಲಿ ಪೋಷಣೆ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದೇ ಕಾರಣಕ್ಕೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದಿದ್ದೇನೆ. ಇಲಾಖೆಯ ಕೆಲ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಅಷ್ಟೇ ಅಲ್ಲ, ಬೆಂಗಳೂರಿಗೆ ಹೋದ ಕೂಡಲೇ ತಪ್ಪು ಮಾಡಿರುವ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು’ ಎಂದರು.

ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿರುವ ರಾಯಸಮುದ್ರ ಅಮೃತ್ ಮಹಲ್ ತಳಿ ಸಂವರ್ಧನಾ ಉಪಕೇಂದ್ರದಲ್ಲಿ ಸುಮಾರು 230 ಜಾನುವಾರುಗಳ ಮೂಕ ರೋದನೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ‌ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ದೌಡಾಯಿಸಿ 230 ಜಾನುವಾರುಗಳನ್ನು ಅರಸೀಕೆರೆ ಕೆರೆ ತಾಲ್ಲೂಕು ಬಿದಿರೆ ಕಾವಲು ತಳಿ ಸಂವರ್ಧನಾ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದರು.

230 ಗೋವು ಇರುವ ರಾಯಸಮುದ್ರ ಕೇಂದ್ರದಲ್ಲಿ ಮಂಡಿಯುದ್ದ ಕೆಸರಿದ್ದರೂ, ಯಾರೊಬ್ಬರೂ ತಲೆ ಕೆಡಿಸಿಕೊಂಡಿರಲಿಲ್ಲ. ಮಳೆಯಿಂದ ಕೊಟ್ಟಿಗೆ ತುಂಬೆಲ್ಲಾ ಕೆಸರು ತುಂಬಿ ಜಾನುವಾರು ಮಲಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂದೆ ಹಾಗಾಗದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)