ಸಕಲೇಶಪುರ: ಸರ್ಕಾರಿ ಜಾಗ, ಡೀಮ್ಡ್ ಅರಣ್ಯ, ಕೃಷಿ ಭೂಮಿಯಲ್ಲಿ ಕಾನೂನು ಉಲ್ಲಂಘಿಸಿ ತಾಲ್ಲೂಕಿನಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳು ಹೆಚ್ಚಾಗಿ ತಲೆ ಎತ್ತಿದ್ದು, ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪಶ್ಚಿಮಘಟ್ಟ ನಿಸರ್ಗ ಸವಿಯಲು ಬರುವ ಪ್ರವಾಸಿಗರಿಗೆ ಸಂಪ್ರದಾಯದ ಊಟೋಪಚಾರ, ಉಳಿಯಲು ಹೋಂ ಸ್ಟೇ ವ್ಯವಸ್ಥೆ ಮಾಡುವುದರಿಂದ ಇಲ್ಲಿಯ ಜನರಿಗೆ ಉದ್ಯೋಗ, ವ್ಯಾಪಾರ ವಹಿವಾಟು ಹೆಚ್ಚಾಗಿ ಆರ್ಥಿಕ
ಅಭಿವೃದ್ಧಿ ಆಗುತ್ತಿದೆ. ಆದರೆ, ಹೋಂ ಸ್ಟೇನಲ್ಲಿ ಕೊಠಡಿಗಳು 5ರೊಳಗೆ ಇರಬೇಕು. 15 ಜನರಿಗಿಂತ ಹೆಚ್ಚು ಅತಿಥಿಗಳಿಗೆ ಅವಕಾಶ ಇಲ್ಲ. ಆದರೆ, ಬಹುತೇಕ ಹೋಂ ಸ್ಟೇಗಳಲ್ಲಿ ಈ ಯಾವುದೇ ನಿಯಮಗಳ ಪಾಲನೆಯಾಗುತ್ತಿಲ್ಲ.
ಬಂಡವಾಳಶಾಹಿ ಮುಷ್ಟಿಯಲ್ಲಿ ವ್ಯವಹಾರ: ಶೇಕಡಾ 80ಕ್ಕಿಂತ ಹೆಚ್ಚು ಹೋಂ ಸ್ಟೇ, ರೆಸಾರ್ಟ್‌ಗಳು, ಹೊರ ಜಿಲ್ಲೆ, ಹೊರ ರಾಜ್ಯಗಳ ರಾಜಕಾರಣಿಗಳು, ಬಂಡವಾಳಶಾಹಿಗಳ ಮುಷ್ಟಿಯಲ್ಲಿವೆ. ಅತಿವೃಷ್ಟಿ,
ಅನಾವೃಷ್ಟಿ, ಬೆಲೆ ಕುಸಿತದಂತಹ ಹತ್ತಾರು ಸಮಸ್ಯೆಗಳಿಂದ ಪ್ರತಿವರ್ಷ ಆರ್ಥಿಕ ನಷ್ಟ ಅನುಭವಿಸುತ್ತಿರುವ ರೈತರು, ಕಾಫಿ ಬೆಳೆಗಾರರ ಸಂಕಷ್ಟದ ಲಾಭ ಪಡೆದು, ಕೃಷಿ ಭೂಮಿ ಖರೀದಿಸುತ್ತಾರೆ. ಬಹುತೇಕರು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡದೆ ಕಾನೂನು ಬಾಹಿರವಾಗಿ ಹೊಂ ಸ್ಟೇ, ರೆಸಾರ್ಟ್‌ಗಳನ್ನು ನಡೆಸುತ್ತಿದ್ದಾರೆ.
ಇದರಿಂದಾಗಿ ಸ್ಥಳೀಯರಿಗೆ ಉದ್ಯೋಗ, ಆರ್ಥಿಕ ಚಟುವಟಿಕೆ ಇಲ್ಲ. ಬಂಡವಾಳ ಹೂಡಿ, ವ್ಯಾಪಾರ ಮಾಡಿಕೊಂಡು, ಲಾಭವನ್ನು ತೆಗೆದುಕೊಂಡು ಹೋಗುವ ಬ್ರಿಟಿಷ್ ವ್ಯವಸ್ಥೆ ಶುರುವಾಗಿದೆ.
‘ಪ್ರವಾಸಿಗರು ಒಂದೊಂದು ರೆಸಾರ್ಟ್‌ಗಳಿಗೆ ಬಂದು
ಹೋಗುವ ಅಂದಾಜಿನ ಪ್ರಕಾರ ವಾರಾಂತ್ಯದಲ್ಲಿ ₹ 3 ರಿಂದ ₹ 4 ಲಕ್ಷ ವಹಿವಾಟು ನಡೆಯುತ್ತದೆ. ಕೆಲವು ಹೋಂ ಸ್ಟೇಗಳಿಗೆ 30 ರಿಂದ 40 ಅತಿಥಿಗಳು ಬಂದರೂ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ವಹಿವಾಟು ನಡೆಯುತ್ತದೆ.
ಬೆರಳೆಣಿಕೆಯ ರೆಸಾರ್ಟ್ ಹೊರತುಪಡಿಸಿದರೆ ಉಳಿದವರು ಸರ್ಕಾರಕ್ಕೆ ಯಾವುದೇ ತೆರಿಗೆ ಪಾವತಿಸುತ್ತಿಲ್ಲ’ ಎಂದು ರೆಸಾರ್ಟ್ ಮಾಲೀಕರು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.