ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕೃತ ಪಠ್ಯಪುಸ್ತಕಗಳ ಜಲಸಮಾಧಿ

ಕುವೆಂಪು ಹೋರಾಟ ಸಮಿತಿಯಿಂದ ವಿನೂತನ ಪ್ರತಿಭಟನೆ
Last Updated 23 ಜುಲೈ 2022, 8:05 IST
ಅಕ್ಷರ ಗಾತ್ರ

ಹಾಸನ: ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಕೆಸರು ನೀರಿನಲ್ಲಿ ಮುಳುಗಿಸುವ ಮೂಲಕ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಕರ್ನಾಟಕ ಮತ್ತು ಜಿಲ್ಲಾ ಜನಪರ ಸಂಘಟನೆಗಳ ಸದಸ್ಯರು ಶುಕ್ರವಾರ ನಗರದ ಎನ್.ಆರ್.ವೃತ್ತದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಎನ್.ಎಲ್. ಮುಕುಂದರಾಜ್, ಹಲವು ದಿನದಿಂದ ರಾಜ್ಯದಾದ್ಯಂತ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ನಿರಂತರ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಕಿವಿಕೊಡುತ್ತಿಲ್ಲ. ಇದರ ಪಂಚೇಂದ್ರಿಯಗಳು ನಾಶವಾಗಿವೆ ಎಂದು ದೂರಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಅಹವಾಲುಗಳನ್ನು ಕೇಳಬೇಕಾದದ್ದು ಸರ್ಕಾರದ ಜವಾಬ್ದಾರಿ, ಇದು ನಾಚಿಕೆಗೆಟ್ಟ ಭಂಡ ಸರ್ಕಾರ. ಆದ್ದರಿಂದಲೇ ಮತದಾರ ಪ್ರಭುಗಳ ಬಳಿ‌ ಹೋಗುತ್ತಿದ್ದೇವೆ. ಜೊತೆಗೆ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕರಣೆಗೊಂಡಿರುವ ಪಠ್ಯಗಳನ್ನು ಜಲಸಮಾಧಿ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ’ ಎಂದರು.

‘ರಾಜ್ಯ ಸರ್ಕಾರ ಈಗಾಗಲೇ ಶಾಲಾ ಮಕ್ಕಳಿಗೆ ವಿತರಿಸಿದ್ದು, ಇದನ್ನು ಓದಿದರೆ ಮಕ್ಕಳು ಉದ್ದಾರ ಆಗುವುದಿಲ್ಲ. ನಮ್ಮ ಸಂಸ್ಕೃತಿ ನಾಶವಾಗುತ್ತದೆ, ದೇಶದ ಚರಿತ್ರೆ ಹಾಳಾಗುತ್ತದೆ, ಜನ ಎಲ್ಲವನ್ನೂ ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ. ಈ ಪುಸ್ತಕಗಳು ಇರಬಾರದು, ಡಾ.ಬಿ.ಆರ್‌. ಅವರು ಹಿಂದೆ ಮನುಧರ್ಮ ಶಾಸ್ತ್ರವನ್ನು ಬಹಿರಂಗವಾಗಿ ಸುಟ್ಟಿದ್ದರು. ಆದರೆ ನಾವು ಈ ಪುಸ್ತಕಗಳನ್ನು ಕೆಸರು ನೀರಿನಲ್ಲಿ ಮುಳುಗಿಸಿ ಜಲಸಮಾಧಿ ಮಾಡಿದ್ದೇವೆ’ ಎಂದರು.

ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ಸರ್ಕಾರ ತನ್ನ ತಪ್ಪುಗಳನ್ನು ತಾಂತ್ರಿಕವಾಗಿ ಒಪ್ಪಿಕೊಂಡಿದೆ. ಆದರೂ ಮತ್ತದೇ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಗಿದೆ. ಇದು ಅಯೋಗ್ಯ ಸರ್ಕಾರ. ಅಯೋಗ್ಯ ಶಿಕ್ಷಣ ಸಚಿವ, ಬೆನ್ನುಮೂಳೆ ಇಲ್ಲದ ಮುಖ್ಯಮಂತ್ರಿ. ಇವರು ಈ ಪುಸ್ತಕಗಳ ಮೂಲಕ ಎಂತಹ ಪ್ರಜೆಗಳನ್ನು ಸೃಷ್ಟಿಸುತ್ತಾರೆ ಎಂದು ಪ್ರಶ್ನಿಸಿದರು.

ಶಿಕ್ಷಣ ಸಚಿವರನ್ನು ಕೂಡಲೇ ವಜಾಗೊಳಿಸಬೇಕು. ಮುಖ್ಯಮಂತ್ರಿ ಸಂಘಪರಿವಾರದ ಕೈಗೊಂಬೆಯಾಗಿದ್ದಾರೆ. ಸಂವಿಧಾನದ ಮೌಲ್ಯಗಳು ಉಳಿಯದೇ ಭಾರತವನ್ನು ಉಳಿಸಲು ಸಾಧ್ಯವಿಲ್ಲ. ಆರ್‌ಎಸ್‌ಎಸ್‌ನ ಹಿಂದುತ್ವ ರಾಷ್ಟ್ರವನ್ನು ನಿರ್ಮಾಣ ಮಾಡಲು ಇಂತಹ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಗುತ್ತಿದೆ.‌ ಭಾರತವನ್ನು ಮನುರಾಷ್ಟ್ರವನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ವಂದೇ ಮಾತರಂನ ಧರ್ಮರಾಜ್ ಕಡಗ, ದಲಿತ ಮುಖಂಡರಾದ ರಾಜಶೇಖರ್, ವಿಜಯಕುಮಾರ್ ದಂಡೋರ, ಎಂ.ಜಿ.ಪೃಥ್ವಿ, ಕೆಪಿಆರ್‌ಎಸ್‌ನ ನವೀನ್ ಕುಮಾರ್, ವಸಂತ್ ಕುಮಾರ್, ಅಕ್ಮಲ್ ಜಾವೇದ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT